ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಚಿಕ್ಕಬಳ್ಳಾಪುರ-ಗೌರಿಬಿದ ನೂರು ನಡುವಿನ ಹಾಗೂ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ವಯಾ ಪುಟ್ಟಪರ್ತಿ ರೈಲ್ವೆ ಕಾಮಗಾರಿಗಳು ಹಲವು ವರ್ಷಗಳಿಂದ ತೀವ್ರ ನನೆಗುದಿಗೆ ಬಿದ್ದರೂ, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಮಾತ್ರ ತಮ್ಮ ಫೇಸ್‌ಬುಕ್‌ನಲ್ಲಿ ರೈಲ್ವೆ ಕಾಮಗಾರಿಗಳು ಪೂರ್ಣಗೊಂಡಿ ರು ವುದಾಗಿ ಮಾಡಿರುವ ಪೋಸ್ಟರ್‌ಗಳು ಇದೀಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಹೌದು, 2009, 2014 ರಲ್ಲಿ ಎರಡು ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಾಗದೇ ಸೋತ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಭರದ ತಯಾರಿ ನಡೆಸಿದ್ದಾರೆ.
ಸಾರ್ವಜನಿಕರ ವಲಯದಲ್ಲಿ ಚರ್ಚೆ: ಆದರೆ, ಮೊಯ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಸಾಕಷ್ಟು ಅಕ್ಟೀವ್ ಆಗಿದ್ದು, ಪ್ರತಿ ದಿನ ಒಂದಲ್ಲ ಒಂದು ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಕುರಿತು ಅದರಲ್ಲೂ ,ಮುಖ್ಯಮಂತ್ರಿಯಾಗಿ ಹಾಗೂ ಸಂಸದ ರಾಗಿ ಕೇಂದ್ರ ಸಚಿವರಾಗಿ ತಮ್ಮ ಅವಧಿಯಲ್ಲಿ ಮಾಡಿದ ಸಾಧನೆ, ಜನಪರ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಪೋಸ್ಟರ್‌ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳದೇ ರೈಲ್ವೆ ಕಾಮಗಾರಿಗಳ ವಿಚಾರದಲ್ಲಿ ಇನ್ನೂ ಕಾಮಗಾರಿ ದಶಕಗಳಿಗೆ ನನೆಗುದಿಗೆ ಬಿದ್ದರೂ, ರೈಲ್ವೆ ಕಾಮಗಾರಿಗಳು ಮುಗಿದು ಸಾರ್ವ ನಿಕರು ಬಳಸುತ್ತಿ ದ್ದಾರೆಂಬ ಪೋಸ್ಟರ್‌ಗಳು ಇದೀಗ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾದಂತೆ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಟಿಕೆಟ್ ಆಕಾಂಕ್ಷಿ ಗಳು ಚುನಾವಣಾ ಅಖಾಡಕ್ಕೆ ಇಳಿದು ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚುನಾವಣಾ ಪ್ರಚಾರದ ಭರಾಟೆತನ್ನು ಶುರು ಮಾಡಿದ್ದಾರೆ. ಆದರೆ ಪ್ರಚಾರ ಭರಾಟೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಈ ಹಿಂದೆ ತಮ್ಮ ಅಧಿಕಾರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಪಕ್ಷಿನೋಟದ ಪೋಸ್ಟರ್‌ಗಳನ್ನು ಹಾಕುವ ಭರದಲ್ಲಿ ಕಾಮಗಾರಿಗಳು ನಡೆಯದಿದ್ದರೂ, ನಡೆದಿವೆಯೆಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.
ಏನಿದು ಮೊಯ್ಲಿ ಫೇಸ್‌ಬುಕ್ ಬರಹ?:
ಜಿಲ್ಲೆಯ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ರೈಲ್ವೆ ಹಳಿ ನಿರ್ಮಾಣ ಕಾರ್ಯ ಸಮೀಕ್ಷೆ ಹಂತದಲ್ಲಿಯೆ ಇದ್ದರೂ ಮೊಯ್ಲಿ ಮಾತ್ರ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ 44 ಕಿ.ಮೀ ಉದ್ದದ ಹೊಸ ರೈಲು ಮಾರ್ಗದ ಯೋಜನೆ 367.77 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೂಂದು ಪೋಸ್ಟ್‌ನಲ್ಲಿ ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಸತ್ಯಸಾಯಿ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ನಡುವಿನ 103 ಕಿ,ಮೀ ಉದ್ದದ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ ಯೋಜನೆಯು ಸುಮಾರು 692.43 ಕೊಟಿ ವೆಚ್ಚದಲ್ಲಿ ಯಶಸ್ವಿಯಾಗಿ ನಿರ್ಮಾಣಗೊಂಡಿದೆಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವ ಮೂಲಕ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.
– ಕಾಗತಿ ನಾಗರಾಜಪ್ಪ