Advertisement
ವಿಶೇಷ ಮಾರ್ಗಸೂಚಿ: ಹೊಸ ವರ್ಷದಂದು ಮೊದಲ ದಿನ ಸೋಮವಾರ ಈಶಾ ಕೇಂದ್ರ, ನಂದಿ ಬೆಟ್ಟ, ನಂದಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ವಾಹನಗಳ ದಟ್ಟಣೆ ನಿಯಂತ್ರಣ, ಮಾದಕ ವಸ್ತುಗಳ ಸಾಗಾಟ ತಡೆಯುವುದರ ಜೊತೆಗೆ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸುವ ದಿಕ್ಕಿನಲ್ಲಿ, ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿ ಉಪ ವಿಭಾಗದ ಪೊಲೀಸರು ವಾರದಿಂದಲೇ ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಗಸೂಚಿ ರೂಪಿಸಿ ಅವುಗಳ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ ರಾಜ್ಯದಲ್ಲಿ ಮತ್ತೆ ಕೋ ವಿಡ್ ಆತಂಕ ಸೃಷ್ಟಿ ಆಗಿರುವುದರಿಂದ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳಂತೆ ಜಿಲ್ಲಾಡಳಿತ ಕೂಡ ಹಲವು ದಿಟ್ಟ ಕ್ರಮಗಳಿಗೆ ಮುಂದಾಗಿದ್ದು, ಜನವರಿ 1 ರಂದು ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯಗೊಳಿಸಲು ಮುಂದಾಗಿದೆ.
Related Articles
Advertisement
ಪ್ರವಾಸಿಗರ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಆದರೆ ಜಿಲ್ಲೆಯ ಪ್ರವಾಸಿ ತಾಣಗಳಾದ ಸೆಲ್ಫಿ ಸ್ಪಾಟ್ ಅವಲಬೆಟ್ಟ ಹಾಗೂ ಚಾರಣರಿಗೆ ಪ್ರಿಯವಾದ ಜಿಲ್ಲೆಯ ಚಿಕ್ಕಬಳ್ಳಾಪುರದ ಕಳವಾರ ಸಮೀಪ ಇರುವ ಸ್ಕಂದಗಿರಿಗೆ ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಿದೆ.
ನಂದಿಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಮೋಜು, ಮಸ್ತಿ ಪಾರ್ಟಿ!:
ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶನಕ್ಕೆ ನಿರ್ಬಂಧ ಹೇರಿರುವ ಜಿಲ್ಲಾಡಳಿತ, ನಂದಿಬೆಟ್ಟದ ತಪ್ಪಲ್ಲಿನಲ್ಲಿ ರೆಸಾರ್ಟ್, ಹೋಂ ಸ್ಟೇಗಳಲ್ಲಿ ನಡೆಯುವ ಹೊಸ ವರ್ಷದ ಮೋಜು, ಮಸ್ತಿ ಪಾರ್ಟಿಗೆ ಕಡಿವಾಣ ಹಾಕುವುದೇ ಎಂಬುದನ್ನು ಕಾದು ನೋಡಬೇಕಿದೆ. ಐಟಿ, ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಚಿಕ್ಕಬಳ್ಳಾಪುರ ನಂದಿ, ದೊಡ್ಡಮರಳಿ, ಕಳವಾರ, ಕೊತ್ತನೂರು, ಚದಲಪುರ ಅಸುಪಾಸಿನಲ್ಲಿ ಸಾಕಷ್ಟು ರೆಸಾರ್ಟ್‌ಗಳ ಮಾದರಿಯಲ್ಲಿ ಹೋಂ ಸ್ಟೇಗಳು ತಲೆ ಎತ್ತಿದ್ದು, ಗ್ರಾಹಕರಿಗೆ ಎಗ್ಗಿಲ್ಲದೇ ಮಾದಕ ವಸ್ತುಗಳ ಪೂರೈಕೆ ನಡೆಸುತ್ತಿದೆ. ಇತ್ತೀಚೆಗೆ ನಂದಿ ಠಾಣೆ ಪೊಲೀಸರು ಕೂಡ ನಂದಿ ಬಳಿ ಇರುವ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಮಾದಕ ಹುಕ್ಕಾ ಸೇವನೆಗೆ ಅವಕಾಶ ನೀಡಿದ್ದ ಆರೋಪದ ಮೇರೆಗೆ ದೂರು ದಾಖಲಿಸಿಕೊಂಡಿದ್ದರು. ಆದರೆ ಹೊಸ ವರ್ಷದ ಸಂಭ್ರಮದಲ್ಲಿ ಯುವ ಜನರನ್ನು ಹಾದಿ ತಪ್ಪಿಸಲು ಸಾಕಷ್ಟು ಹೋಂ ಸ್ಟೇಗಳು ತಯಾರಿ ನಡೆಸಿಕೊಂಡಿವೆ ಎನ್ನಲಾಗುತ್ತಿವೆ.
-ಕಾಗತಿ ನಾಗರಾಜಪ್ಪ