ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೋಲೀಸ್ ಠಾಣಾ ವ್ಯಾಪ್ತಿಯ ಆವುಲನಾಗೇನಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ಕಾರ್ಯದರ್ಶಿ ರಾಮಾಂಜಿಯ ಕೊಲೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳ ಪೈಕಿ 7 ಆರೋಪಿಗಳನ್ನು ಬಂದಿಸಿದ್ದು ಪರಾರಿಯಾಗಿರುವ ಮತ್ತೋರ್ವ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್‍ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊಲೆಗೀಡಾದ ರಾಮಾಂಜಿ ಮತ್ತು ಅದೇ ಗ್ರಾಮದ ಆರೋಪಿ ಅರವಿಂದ್ ಅವರ ಮಧ್ಯೆ ಜಮೀನು ವಿವಾದವಿದ್ದು ಈ ಸಂಬಂಧ ಈಗಾಗಲೇ ಇಬ್ಬರು ಖರಾಬಿ ಜಮೀನಿಗಾಗಿ ಜಗಳ ಮಾಡಿಕೊಂಡು ದೂರು ಪ್ರತಿದೂರುಗಳು ಸಹ ದಾಖಲಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಜಿಲ್ಲಾ ಎಸ್‍ಪಿ ಸ್ಪಷ್ಟಪಡಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರವಿಂದ್, ಚಿಕ್ಕಮಂಜ, ದೊಡ್ಡಮಂಜ, ಗಿರೀಶ್, ಪ್ರಸನ್ನ, ರಾಘವೇಂದ್ರ, ಅಮರನಾರಾಯಣಚಾರಿ ಅವರನ್ನು ಬಂಧಿಸಲಾಗಿದ್ದು ದಿಲೀಪ್ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಕೊಲೆಗೆ ಯಾರು ಕುಮ್ಮಕ್ಕು ನೀಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದ್ದು ತನಿಖೆ ಪೂರ್ಣಗೊಂಡ ನಂತರ ಮಾಹಿತಿ ನೀಡಲಾಗುವುದೆಂದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಜಿಲ್ಲೆಯಲ್ಲಿ ಜಮೀನು ವಿವಾದ ಮತ್ತು ಹಳೇ ವೈಷಮ್ಯ ಇನ್ನಿತರೆ ಕಾರಣಗಳಿಗಾಗಿ ಎರಡು ಮೂರು ಕೊಲೆಗಳಾಗಿವೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ ಜಿಲ್ಲೆಯಲ್ಲಿ ಗುಂಪುಗಳ ಮಧ್ಯೆ ಜಗಳವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಸ್ಪಷ್ಟಪಡಿಸಿ ವೈಯಕ್ತಿಕ ದ್ವೇಷಗಳಿಂದ ಘಟನೆಗಳು ಸಂಭವಿಸಿವೆ ಎಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಜಮೀನು ವಿವಾದ ಇರುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಳಿಕೆಗಳನ್ನು ಬರೆಸಿಕೊಳ್ಳುವ ಜೊತೆಗೆ 107 ಸಹ ಮಾಡುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವವರಿಗೆ ಮಾತ್ರ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಜೊತೆಗೆ ಸರ್ವೆ ಸಹ ನಡೆಸಲಾಗಿದ್ದು ಕೆಲವರು ಕ್ವಾರಿಗಳು ಮತ್ತು ಕ್ರಷರ್‍ಗಳು ಮುಚ್ಚಿವೆ ಎಂದು ಅಧಿಕ ದರದಲ್ಲಿ ಎಂಸ್ಯಾಂಡ್ ಮತ್ತು ಜಲ್ಲಿ ಮಾರಾಟ ಮಾಡುತ್ತಿರುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.