ಚಿಕ್ಕಬಳ್ಳಾಪುರ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಬರೋಬ್ಬರಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿ ಬಳಕೆಯಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗಾಜಿನ ಮನೆಯನ್ನು ಕೆರೆಯಂಗಳದಲ್ಲಿಯೆ ಉಳಿಸಿಕೊಳ್ಳಲು ಜಿಲ್ಲಾಡಳಿತ ಕರಸತ್ತು ನಡೆಸುತ್ತಿದೆ.
ಕಳೆದ 2019 ರಲ್ಲಿ ಜಿಲ್ಲೆಗೆ ಭವ್ಯವಾದ ಗಾಜಿನ ಮನೆ ನಿರ್ಮಾಣ ಆಗಬೇಕೆಂಬ ಪರಿಕಲ್ಪನೆಯೊಂದಿಗೆ ನಗರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಸುಮಾರು 6,725 ಚದರ ಅಡಿಗಳಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಗಾಜಿನ ಮನೆ ಬರೋಬ್ಬರಿ 4 ವರ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ನೀರು ನಿಂತು ಗಾಜಿನ ಮನೆ ಮೂಲೆಗುಂಪು: ಗಾಜಿನ ಮನೆ ನಿರ್ಮಾಣದ ಸಂದರ್ಭದಲ್ಲಿ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಹನಿ ನೀರು ಇರಲಿಲ್ಲ. ಕೆರೆಯಂಗಳದಲ್ಲಿ ಗಾಜಿನ ಮನೆ ನಿರ್ಮಾಣ ಮಾಡಿ ಬಟಾನಿಕಲ್ ಪಾಕ್ ನಿರ್ಮಿಸಿದರೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವುದರ ಜತೆಗೆ ನಗರ ವಾಸಿಗಳ ವಾಯು ವಿಹಾರ ಜತೆಗೆ ಸರ್ಕಾರಿ ಸಭೆ, ಸಮಾರಂಭ, ಫಲಪುಷ್ಪ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳ ಆಯೋಜನೆಗೆ ಸೂಕ್ತವಾಗಿರುತ್ತದೆಂದು ಹೇಳಿ ಆಗ 3.25 ಕೋಟಿ ರೂ.ವೆಚ್ಚದಲ್ಲಿ ಗಾಜಿನ ಮನೆ ತಲೆ ಎತ್ತಿತ್ತು. ಆದರೆ ನಿರ್ಮಾಗೊಂಡ ಕೇಲವೇ ತಿಂಗಳಿಗೆ ಜಿಲ್ಲೆಗೆ ಸರ್ಕಾರ ಹರಿಸಿದ ಹೆಬ್ಟಾಳ ನಾಗವಾರ ಸಂಸ್ಕರಿಸಿದ ತ್ಯಾಜ್ಯ ನೀರು ಸಂಗ್ರಹಕ್ಕೆ ಅಮಾನಿ ಗೋಪಾಲಕೃಷ್ಣ ಕರೆಯನ್ನು ಬಳಸಿಕೊಂಡ ಪರಿಣಾಮ ಗಾಜಿನ ಮನೆ ಸುತ್ತಲೂ ತ್ಯಾಜ್ಯ ನೀರು ಸಂಗ್ರಹವಾಗಿ ಗಾಜಿನ ಮನೆ ಬಳಕೆಗೆ ಯೋಗ್ಯವಾಗದೇ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ತಜ್ಞರ ಅಭಿಪ್ರಾಯ ಕೇಳಿರುವ ಜಿಲ್ಲಾಡಳಿತ: ಗಾಜಿನ ಮನೆಯನ್ನು ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಂ.ಸಿ.ಸುಧಾಕರ್, ಗಾಜಿ ಮನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಬಳಸುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಸದ್ಯದಲೇ 4 ವರ್ಷದಿಂದ ಕಾಮಗಾರಿ ಮುಗಿದರೂ ನೆನಗುದಿಗೆ ಬಿದ್ದಿರುವ ಗಾಜಿನ ಮನೆ ಕೇಲವೇ ತಿಂಗಳಲ್ಲಿ ಸಾರ್ವಜನಿಕರು ಬಳಕೆಗೆ ಲಭ್ಯವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಲಿದೆ.
ಇದರ ಸಂಬಂಧ ನಿರ್ಮಾಣಗೊಂಣಡಿರುವ ಗಾಜಿನ ಮನೆ ಬಳಕೆ ಬಗ್ಗೆ ತಜ್ಞರಿಂದ ಸಾಧ್ಯತಾ ವರದಿ ಕೇಳಿದ್ದು, ವರದಿ ಕೈ ಸೇರಿದ ಬಳಿಕ ಗಾಜಿನ ಮನೆ ಸೇವೆಗೆ ಸಿಗಲಿದೆ. ಕೆರೆಯಂಗಳದಲ್ಲಿ ಖಾಸಗಿ ಹಾಗೂ ವಾಣಿಜ್ಯ ಕಟ್ಟಡ ಇಲ್ಲದ ಕಾರಣ ಗಾಜಿನ ಮನೆಯನ್ನು ಕೆರೆಯಂಗಳದಲ್ಲಿ ಉಳಿಸಿಕೊಳ್ಳಲು ಜಿಲ್ಲಾಡಳಿತ ಯೋಜನೆ ರೂಪಿಸಿದೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು. ●ಕಾಗತಿ ನಾಗರಾಜಪ್ಪ