ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಹೊತ್ತಲೇ ಕಾಂಗ್ರೆಸ್ ಪಕ್ಷದೊಳಗೆ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್‌ನ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಗೌರಿಬಿದ ನೂರಿನ ಕೆ.ಎನ್.ಕೇಶವರೆಡ್ಡಿ ಚಿಕ್ಕಬಳ್ಳಾಪುರ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಹುದ್ದೆಗೆ ಹೊಸಬರ ನೇಮಕ ಮಾಡಬೇಕೆಂಬ ಒತ್ತಾಯ ಪಕ್ಷದೊಳಗೆ ಮತ್ತೆ ಮುನ್ನೆಲೆಗೆ ಬಂದಿದೆ.
7 ವರ್ಷದಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಗಿರುವ ಕೇಶವರೆಡ್ಡಿ ಮಹತ್ವದ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನೇಮಕಗೊಂಡಿ ರುವುದರಿಂದ ಅವರು ಜಿಲ್ಲಾಧ್ಯಕ್ಷ ಸ್ಥಾನ ತೊರೆಯಬೇಕೆಂಬ ಒತ್ತಾಯದ ಜೊತೆಗೆ ಹೊಸಬರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸಬೇಕೆಂಬ ಮಾತು ಪಕ್ಷದೊಳಗೆ ಪ್ರಬಲವಾಗಿ ಕೇಳಿ ಬರುತ್ತಿತ್ತು. ಈ ವಿಚಾರದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಕೈಗೊಳ್ಳುವ ನಿರ್ಧಾರದತ್ತ ತೀವ್ರ ಕುತೂಹಲ ಮೂಡಿಸಿದೆ.
ಸಚಿವರನ್ನು ಭೇಟಿ ಮಾಡಿ ಒತ್ತಾಯ: ಈಗಾಗಲೇ ರಾಜ್ಯ ಸರ್ಕಾರದಿಂದ ನೇಮಕಗೊಂಡಿರುವ ನಿಗಮ, ಮಂಡಳಿಗಳಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ, ಆಕ್ರೋಶ ಪಕ್ಷದೊಳಗೆ ಕಾಣುತ್ತಿದೆ. ಜೊತೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕೇಶವರೆಡ್ಡಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿರುವುದು ಕಾಂಗ್ರೆಸ್‌ನ ಕೆಲ ನಿಷ್ಠಾವಂತ ಮುಖಂಡರಲ್ಲಿ, ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಒಬ್ಬರಿಗೆ ಎರಡು ಹುದ್ದೆ ಏಕೆ ಎಂಬ ಪ್ರಶ್ನೆ ಕೂಡ ಎದ್ದಿದೆ. ಕೇಶವರೆಡ್ಡಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಜೊತೆಗೆ ಹೊಸಬರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದ್ದರೂ, ಇದೀಗ ಮತ್ತೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಗಂಗರೇ ಕಾಲುವೆ ನಾರಾಯಣಸ್ವಾಮಿ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಒತ್ತಾಯ ತಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಾಯಕರು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುತ್ತಾರಾ ಅಥವಾ ಲೋಕಸಭೆ ಚುನಾವಣೆ ಮುಗಿಯುವರೆಗೂ ಜಿಲ್ಲಾಧ್ಯಕ್ಷರಾಗಿ ಕೇಶವರೆಡ್ಡಿ ಅವರನ್ನೇ ಮುಂದುವರೆಸುತ್ತಾರಾ? ಇಲ್ಲ ಕೇಶವರೆಡ್ಡಿ ಪ್ರಾಧಿಕಾರದ ಜೊತೆಗೆ ಜಿಲ್ಲಾಧ್ಯಕ್ಷರಾಗಿಯೆ ತಾವೇ ಮುಂದುವರೆಯುತ್ತಾರಾ ಎನ್ನುವುದು ಸದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ,ಎಂ.ಸಿ.ಸುಧಾಕರ್ ಹಾಗೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾವ ರೀತಿಯ ನಿಲುವು ತೆಗೆದುಕೊಳ್ಳಲಿದ್ದಾರೆಂಬುದು ಮಾತ್ರ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಚಿನ್ನಪ್ಪ, ನಾರಾಯಣಸ್ವಾಮಿ ನಡುವೆ ಪೈಪೋಟಿ!:
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚಿಕ್ಕಬಳ್ಳಾಪುರದ ಮಾಜಿ ಜಿಪಂ ಅಧ್ಯಕ್ಷರಾಗಿರುವ ಗಂಗರೇಕಾಲುವೆ ನಾರಾಯಣ ಸ್ವಾಮಿ ಹಾಗೂ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಮಾಜಿ ಜಿಪಂ ಅಧ್ಯಕ್ಷರಾದ ಎಸ್.ಎನ್.ಚಿನ್ನಪ್ಪ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಭಾನುವಾರ ಚಿಕ್ಕಬಳ್ಳಾಪುರದಿಂದ ಗಂಗರೇಕಾಲುವೆ ನಾರಾಯಣಸ್ವಾಮಿ ಪರ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ರನ್ನು ಚಿಂತಾಮಣಿಯಲ್ಲಿ ಭೇಟಿ ಮಾಡಿ ನಾರಾಯಣಸ್ವಾಮಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂಬ ಮನವಿ, ಹಕ್ಕೋತ್ತಾಯ ಮಾಡಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಸಚಿವ ಡಾ.ಎಂ.ಸಿ.ಸುಧಾಕರ್ ತಮ್ಮ ಆಪ್ತ ಎಸ್.ಎನ್.ಚಿನ್ನಪ್ಪ ಪರ ಬ್ಯಾಟಿಂಗ್ ಬೀಸುತ್ತಾರಾ ಇಲ್ಲ ಚಿಕ್ಕಬಳ್ಳಾಪುರ ತಾಲೂಕಿನ ನಾರಾಯಣ ಸ್ವಾಮಿರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಹಾಲಿ ಜಿಲ್ಲಾಧ್ಯಕ್ಷ ಕೇಶವರೆಡ್ಡಿಗೆ ಪ್ರಾಧಿಕಾರ ಹುದ್ಧೆ :
ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕೆ.ಎನ್.ಕೇಶವರೆಡ್ಡಿಗೆ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿತ್ತು. ಅಧಿಕಾರ ಸ್ವೀಕರಿಸಿ ಈಗಾಗಲೇ ಕೇಶವರೆಡ್ಡಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಪಕ್ಷದೊಳಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.
-ಕಾಗತಿ ನಾಗರಾಜಪ್ಪ