ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ ಕೆಪಿಸಿಸಿ ವತಿಯಿಂದ ಚಾಲನೆ ಸಿಕ್ಕಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ವೀಕ್ಷಕರಾಗಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಅಭ್ಯರ್ಥಿ ಆಯ್ಕೆಗೆ ತೀವ್ರ ಕಸರತ್ತು ನಡೆಸಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಜಿಲ್ಲೆಯ ಲೋಕಸಭಾ ಕ್ಷೇತ್ರದ ಉಸ್ತುವಾರಿ ಆಗಿರುವ ಜಮೀರ್ ಅಹಮ್ಮದ್, ಜಿಲ್ಲೆಗೆ ಕಾಲಿಡದೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರ, ಹಾಗೂ ಮಾಜಿ ಶಾಸಕರ ಮತ್ತು ಪ್ರಮುಖ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದು, ಈ ವೇಳೆ ಕೆಲ ಮುಖಂಡರು, ನಾಯಕರು ತಮ್ಮ ತಮ್ಮ ನಾಯಕರ ಪರ ಟಿಕೆಟ್‌ಗಾಗಿ ತೀವ್ರ ಜಟಾಪಟಿ ನಡೆದು ಸಭೆ ಗೊಂದಲದ ಗೂಡಾಗಿತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರು ತಿಳಿಸಿದರು.
ಮುಖಂಡರಿಂದ ಅಭಿಪ್ರಾಯ ಸಂಗ್ರಹ: ಅಭಿಪ್ರಾಯ ಸಂಗ್ರಹದ ವೇಳೆ ಕೆಲವೊಂದು ಮುಖಂಡರು, ಮಾಜಿ ಶಾಸಕರು ಮಾತ್ರ ಸಭೆಯಲ್ಲಿ ಬಹಿರಂಗವಾಗಿ ತಮ್ಮ ನಾಯಕರ ಪರ ಟಿಕೆಟ್‌ಗಾಗಿ ಆಗ್ರಹಿಸಿದರೂ, ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಕೆಲ ಯುವ ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸದೇ ಜಮೀರ್‌ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಂಭವನೀಯ ಅಭ್ಯರ್ಥಿ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ ಬಂದಿದ್ದಾರೆ.
ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಎಂ. ಶಿವಾನಂದ್ ಮತ್ತಿತರರು ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾದಂತೆ ಕಾಂಗ್ರೆಸ್ ಪಾಳೆಯಲ್ಲಿ ರಾಜಕೀಯ ಚವಟಿಕೆಗಳು ವೇಗ ಪಡೆದಿವೆ.
ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಬಿರುಸಿನಿಂದ ಸದ್ದಿಲ್ಲದೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮೊಯ್ಲಿ, ಶಿವಶಂಕರರೆಡ್ಡಿ ಹಾಗೂ ರಕ್ಷಾ ರಾಮಯ್ಯ ಪರ ಬೆಂಬಲಿಗರು ಟಿಕೆಟ್‌ಗಾಗಿ ಬ್ಯಾಟಿಂಗ್ ಬೀಸುತ್ತಿದ್ದರೂ, ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡುವ ಚೆಂಡು ಹೈಕಮಾಂಡ್ ಅಂಗಳದಲ್ಲಿರುವುದರಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವರೆಗೂ ಕಾದು ನೋಡಬೇಕಿದೆ.
ಮೊಯ್ಲಿ, ಶಿವಶಂಕರೆಡ್ಡಿ,ರಕ್ಷಾ ರಾಮಯ್ಯ ಹೆಸರು ಮುಂಚೂಣಿ: ವೀಕ್ಷಕರಾದ ಸಚಿವ ಜಮೀರ್ ಅಹಮ್ಮದ್ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಈಗಾಗಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು, ಮೂರನೇ ಬಾರಿ ಸೋತಿರುವ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಹೆಸರು ಮುಂಚೂಣಿಯಲ್ಲಿದ್ದರೆ, ನಂತರದಲ್ಲಿ ಜಿಲ್ಲೆಯ ಗೌರಿಬಿದನೂರು ಮಾಜಿ ಸಚಿವರಾದ ಎನ್.ಎಚ್. ಶಿವಶಂಕರರೆಡ್ಡಿ ಹಾಗೂ ಮಾಜಿ ಸಚಿವ ಎಂ.ಆರ್. ಸೀತಾರಾಮ್‌ರವರ ಪುತ್ರ ರಕ್ಷಾ ರಾಮಯ್ಯ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಸಭೆಯಲ್ಲಿ ಬಹಳಷ್ಟು ಮಂದಿ ಮೊಯ್ಲಿ ಹೆಸರು ಪ್ರಸ್ತಾಪಿಸಿದರೆ ಖುದ್ದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಮಗೊಂದು ಅವಕಾಶ ಕೊಡಿಯೆಂದು ಲೋಕಸಭೆಗೆ ಟಿಕೆಟ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ರಾಕ್ಷ ರಾಮಯ್ಯ ಪರ ಕೂಡ ಕೆಲ ಮುಖಂಡರು ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ.
-ಕಾಗತಿ ನಾಗರಾಜಪ್ಪ