Advertisement

1000 ಗ್ರಾಮಗಳಿಗೆ ಗ್ರಾಮ ವಿಕಾಸ ಸೌಭಾಗ್ಯ!

08:25 AM Aug 05, 2017 | Karthik A |

– ಪ್ರತೀ ಗ್ರಾಮಕ್ಕೆ 1 ಕೋ.ರೂ. ನಿಗದಿ
– ಗ್ರಾಮದ ಆಯ್ಕೆ ಪ್ರಕ್ರಿಯೆಗೆ ಚಾಲನೆ

Advertisement

ಮಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟು 1000 ಗ್ರಾಮಗಳಲ್ಲಿ ‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ’ ಅನುಷ್ಠಾನಗೊಳ್ಳಲಿದ್ದು, ಗ್ರಾಮಗಳ ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರಕಿದೆ. ಈ ಯೋಜನೆಯಡಿ ಆಯ್ಕೆಯಾಗುವ ಪ್ರತೀ ಗ್ರಾಮಕ್ಕೆ 2017-18ನೇ ಸಾಲಿನಿಂದ ಗರಿಷ್ಠ 1 ಕೋ.ರೂ. ಅನುದಾನ ದೊರೆಯಲಿದೆ. ಎಲ್ಲ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಇದು ಅನುಷ್ಠಾನಗೊಳ್ಳಲಿದೆ. ರಾಜ್ಯದ 189 ಗ್ರಾಮೀಣ ವಿಧಾನಸಭಾ ಸದಸ್ಯರು ತಮ್ಮ ಮತಕ್ಷೇತ್ರ ವ್ಯಾಪ್ತಿಯ ಹಾಗೂ ರಾಜ್ಯದ ವಿಧಾನ ಪರಿಷತ್‌ ಸದಸ್ಯರು ತಾವು ಇಚ್ಛಿಸುವ ಗ್ರಾಮಗಳನ್ನು ಆಯ್ಕೆ ಮಾಡಿ ಸರಕಾರದ ಅನುಮೋದನೆಗೆ ಸಲ್ಲಿಸುವಂತೆ ಸರಕಾರ ಜೂ.20ರಂದು ಆದೇಶ ಹೊರಡಿಸಿದೆ.

ಅಭಿವೃದ್ಧಿ ವಂಚಿತ ಗ್ರಾಮಗಳ ಆಯ್ಕೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಾಂದ್ರತೆ ಆಧರಿಸಿ ಗ್ರಾಮಗಳ ಆಯ್ಕೆ ಆಗಬೇಕಿದೆ. ಗ್ರಾಮಗಳ ಆಯ್ಕೆ ಕುರಿತು ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಫಾರಸು ಮಾಡಿಸಿಕೊಂಡು, ಬಳಿಕ ಆಯ್ಕೆ ಪಟ್ಟಿಯನ್ನು ಸರಕಾರದ ಅನು ಮೋದನೆಗೆ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಕಳುಹಿಸಬೇಕಿದೆ. ಕಳೆದ ಬಾರಿ ‘ಗ್ರಾಮ ವಿಕಾಸ’ ಯೋಜನೆಗಾಗಿ ದ.ಕ. ಜಿಲ್ಲೆಯ 34 ಗ್ರಾಮಗಳು ಆಯ್ಕೆಯಾಗಿತ್ತು. ಈ ಗ್ರಾಮ ವ್ಯಾಪ್ತಿಯ ಗ್ರಾ.ಪಂ.ಗಳಿಗೆ ತಲಾ 75 ಲಕ್ಷ ರೂ.ಗಳಂತೆ ಒಟ್ಟು 26.25 ಕೋ.ರೂ. ಅನುದಾನವನ್ನು ನಿಗದಿಪಡಿಸಲಾಗಿತ್ತು.

ಭೂ ಅಭಿವೃದ್ಧಿ – ಉದ್ಯೋಗಾವಕಾಶ – ಆಟದ ಮೈದಾನ ನಿರ್ಮಾಣ
ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ರೈತರ ಭೂ – ಅಭಿವೃದ್ಧಿ ಯೋಜನೆಯಲ್ಲಿ ಕನಿಷ್ಠ 20 ರೈತರ ಭೂ ಅಭಿವೃದ್ಧಿ , ನಮ್ಮ ಹೊಲ – ನಮ್ಮ ದಾರಿ ಯೋಜನೆಯಲ್ಲಿ ಕನಿಷ್ಠ 20 ಕಿ.ಮೀ. ಹೊಲಕ್ಕೆ ಹೋಗುವ ಮಣ್ಣಿನ ರಸ್ತೆ ನಿರ್ಮಾಣ, ರೈತರ ಕಣ, ಕುರಿ/ದನದ ದೊಡ್ಡಿ ನಿರ್ಮಾಣ, ಕನಿಷ್ಠ 2 ಕೆರೆಗಳ ಪುನಶ್ಚೇತನಕ್ಕಾಗಿ ನಮ್ಮೂರ ಕೆರೆ ಯೋಜನೆ, ಗ್ರಾಮದ ಎಲ್ಲ ಮನೆಗಳಿಗೂ ಕಡ್ಡಾಯ ಶೌಚಾಲಯ, ಕನಿಷ್ಠ 2 ಆಟದ ಮೈದಾನ ನಿರ್ಮಾಣ – ಅದರಲ್ಲಿ 1 ಆಟದ ಮೈದಾನವನ್ನು ನಿಗದಿಯಾದ ಶೇ.12ರ ಅನುದಾನವನ್ನು ಬಳಸಿಕೊಂಡು ಕಡ್ಡಾಯವಾಗಿ ಫ್ಲಡ್‌ಲೈಟ್‌ ಅಳವಡಿಕೆ, ಕನಿಷ್ಠ 1 ಶ್ಮಶಾನಾಭಿವೃದ್ದಿ, ಅಂತರ್ಜಲ ಮರುಪೂರಣ ಕಾಮಗಾರಿ, ರಾಜೀವ್‌ ಗಾಂಧಿ ಸೇವಾ ಕೇಂದ್ರ ನಿರ್ಮಾಣ, 2ರಿಂದ 5 ಕೃಷಿಕ ಮಹಿಳಾ ಗುಂಪುಗಳಿಗೆ ಪ್ರೋತ್ಸಾಹ, ರಾಜೀವ್‌ ಗಾಂಧಿ ಚೈತನ್ಯ ಯೋಜನೆಯಂತೆ 50 ಜನರಿಗೆ ಸ್ವ ಉದ್ಯೋಗ, 50 ಜನರಿಗೆ ಉದ್ಯೋಗವಕಾಶ, 50 ಜನರಿಗೆ ಕೌಶಲಾಭಿವೃದ್ದಿ ತರಬೇತಿ, ಕನಿಷ್ಠ 1 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, 100 ಮಹಿಳೆಯರಿಗೆ ಶೇ.4ರ ಬಡ್ಡಿದರದಲ್ಲಿ ಸಹಾಯಧನ, ಸ್ಥಳೀಯ ಕೊಳವೆ ಬಾವಿ/ತೆರೆದ ಬಾವಿ ಮರುಪೂರಣ, 2ರಿಂದ 5 ಫುಟ್‌ ಬ್ರಿಡ್ಜುಗಳ ನಿರ್ಮಾಣ, ಗ್ರಾಮೀಣ ಗೋದಾಮು ನಿರ್ಮಾಣ, ಅಗತ್ಯತೆ ಅನುಸರಿಸಿ ಉದ್ಯಾನವನ ನಿರ್ಮಾಣ ಹಾಗೂ ಕನಿಷ್ಠ 1000 ಸಸಿಗಳನ್ನು ಗ್ರಾಮದ ವ್ಯಾಪ್ತಿಯಲ್ಲಿ ನೆಡುವುದು, ಆವಶ್ಯಕತೆಗೆ ಅನುಸಾರ 1 ಸೈಬರ್‌/ಕಂಪ್ಯೂಟರ್‌ ಕೇಂದ್ರ ಸ್ಥಾಪನೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸ್ಥಳೀಯ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಿಗದಿಯಾದ ಶೇ.12ರ ಅನುದಾನವನ್ನು ಬಳಸಿಕೊಂಡು ಆಯ್ಕೆಯಾದ ಗ್ರಾಮದಲ್ಲಿ ಕನಿಷ್ಠ 1 ಸಾಂಸ್ಕೃತಿಕ ಕೇಂದ್ರ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ.

ವ್ಯಾಜ್ಯಮುಕ್ತ – ತ್ಯಾಜ್ಯಮುಕ್ತ – ವ್ಯಸನಮುಕ್ತ ಗ್ರಾಮ
ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರು, ಹಳ್ಳಿಗಳ ಸ್ವತ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು, ಬಹಿರ್ದೆಸೆ ಮುಕ್ತ ಗ್ರಾಮ, ಗ್ರಾಮ ಸೌಂದರೀಕರಣ, ಆವಶ್ಯಕ ಮೂಲಸೌಕರ್ಯ ಒದಗಿಸುವುದು, ವ್ಯಾಜ್ಯಮುಕ್ತ, ತ್ಯಾಜ್ಯಮುಕ್ತ, ವ್ಯಸನಮುಕ್ತ, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ನಿರ್ಮಾಣ, ತಳ ಮಟ್ಟದ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಕ್ರಿಯಾ ಯೋಜನೆ, ಕೌಶಲಾಭಿವೃದ್ಧಿ ತರಬೇತಿ, ಕೃಷಿಯೇತರ ಉದ್ಯೋಗವಕಾಶ ದೊರೆಯಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶ. 

Advertisement

ಗ್ರಾಮ ವಿಕಾಸ ಯೋಜನೆಯಲ್ಲಿ 
ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳು ಗ್ರಾಮದೊಳಗಿನ ಪರಿಸರವನ್ನು ಉತ್ತಮಪಡಿಸಲು ರಸ್ತೆ, ಚರಂಡಿ (ನಿಗದಿಪಡಿಸಬೇಕಾದ ಶೇಕಡಾವಾರು ಮೊತ್ತ -ಶೇ.50), ಗ್ರಂಥಾಲಯ/ಸಾಹಿತಿ ಕಲಾವಿದರ ಸ್ಮಾರಕ/ಸಭಾಭವನ/ ಬಯಲು ರಂಗಮಂದಿರ ನಿರ್ಮಾಣ (ಶೇ.12), ಯುವಕ/ಯುವತಿ ಮಂಡಳಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಜಿಮ್‌/ ಗರಡಿಮನೆ/ ಫ್ಲಡ್‌ಲೈಟ್‌ ಆಟದ ಮೈದಾನ/ದೇಶೀ ಕ್ರೀಡೆ ಅಭಿವೃದ್ಧಿ ಚಟುವಟಿಕೆಗಳಿಗೆ (ಶೇ.12), ಸೌರ ಬೆಳಕು ದೀಪಗಳ ಅಳವಡಿಕೆ/ಎಲ್‌ಇಡಿ ದೀಪಗಳು (ಶೇ.3), ತಿಪ್ಪೆ/ತಿಪ್ಪೆಗುಂಡಿಗಳ ವೈಜ್ಞಾನಿಕ ಹಾಗೂ ಆಧುನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವ ಘಟಕಗಳ ನಿರ್ಮಾಣ (ಶೇ.10), ಗ್ರಾ.ಪಂ. ನಡವಳಿಕೆಗಳನ್ನು ಮಾಧ್ಯಮದ ಮೂಲಕ ನೇರ ಪ್ರಸಾರದ ಮೂಲ ಸೌಕರ್ಯಕ್ಕೆ (ಶೇ.2), ಗುಡಿ, ಮಸೀದಿ, ಚರ್ಚ್‌ಗಳ ಪುನರುಜ್ಜೀವನ/ಜೀರ್ಣೋದ್ಧಾರ/ಕಟ್ಟಡ ನಿರ್ಮಾಣಕ್ಕಾಗಿ (ಶೇ.6), 8. ಫ್ಲೆಕ್ಸಿ ಫಂಡ್‌ (ಶೇ.5).

ಕರಾವಳಿಯ 48 ಗ್ರಾಮಗಳಿಗೆ ಅದೃಷ್ಟ 
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಲಾ 4 ಗ್ರಾಮಗಳಂತೆ ಒಟ್ಟು 28 ಗ್ರಾಮಗಳನ್ನು ಆಯ್ಕೆ ಮಾಡಬೇಕಿದೆ. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ತಲಾ 4 ಗ್ರಾಮಗಳಂತೆ ಒಟ್ಟು 20 ಗ್ರಾಮಗಳನ್ನು ‘ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ’ಗೆ ಆಯ್ಕೆ ಮಾಡಬೇಕಿದೆ. ಆಯ್ಕೆಯಾಗುವ ಒಂದೊಂದು ಗ್ರಾಮಕ್ಕೆ ತಲಾ 1 ಕೋ.ರೂ.ಬಿಡುಗಡೆಯಾಗಲಿದೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next