Advertisement

ಇಲಾಖಾವಾರು ಸಭೆ ನಡೆಸಿ: ಯಡಿಯೂರಪ್ಪ

02:56 AM Sep 03, 2020 | Hari Prasad |

ಬೆಂಗಳೂರು: ಕೋವಿಡ್ 19 ಕಾಟದ ಹಿನ್ನೆಲೆಯಲ್ಲಿ ಹೆಚ್ಚು ಕಡಿಮೆ ನಿಂತೇಹೋಗಿರುವ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಸಚಿವರಿಗೆ ಇಲಾಖಾವಾರು ಸಭೆ ನಡೆಸಲು ಸೂಚಿಸಿದ್ದಾರೆ.

Advertisement

ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆಯ ಜತೆಗೆ ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಗಮನಹರಿಸಿ ಎಂದು ನಿರ್ದೇಶನ ನೀಡಿದ್ದಾರೆ.

ಅನ್‌ಲಾಕ್‌-4ರ ಅನಂತರ ಎಲ್ಲ ಚಟುವಟಿಕೆಗಳು ಆರಂಭವಾಗಿದ್ದು, ಚೇತರಿಕೆ ಹಾದಿಗೆ ಬರುತ್ತಿವೆ. ಹೀಗಾಗಿ ಸರಕಾರವು ದೈನಂದಿನ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಬೇಕಾಗಿದೆ. ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಸೆ. 21ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ವಿಪಕ್ಷಗಳು ಸರಕಾರದ ಮೇಲೆ ಮುಗಿಬೀಳುವ ಸಾಧ್ಯತೆಯಿದೆ. ಹೀಗಾಗಿ ಕೋವಿಡ್ 19 ನಿಯಂತ್ರಣ, ಪ್ರವಾಹ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಅಂಕಿ-ಅಂಶ ಸಹಿತ ಮಾಹಿತಿ ಸಿದ್ಧಪಡಿಸಿಕೊಂಡಿರಬೇಕು ಎಂದು ತಿಳಿಸಿದ್ದಾರೆ.

ಪ್ರತಿ ಇಲಾಖೆಯಲ್ಲಿ ಕಳೆದ ಐದು ತಿಂಗಳಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೋವಿಡ್ 19 ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ, ಬಿಬಿಎಂಪಿ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Advertisement

ಸಿಎಂ ಸಭೆ ಸಾಧ್ಯತೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಅಧಿವೇಶನಕ್ಕೆ ಮುನ್ನ ಪ್ರಮುಖ ಇಲಾಖೆಗಳ ಸಭೆ ನಡೆಸುವ ಸಾಧ್ಯತೆಯಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ನಡೆಸಿ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣ ಸವಾಲು ಇರುವುದರಿಂದ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಬಕಾರಿ, ವಾಣಿಜ್ಯ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಬಾಬ್ತಿನಿಂದ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ಗುರಿ ಮಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

ವರಿಷ್ಠರ ಭೇಟಿಗೆ ಸಮಯ ಕೇಳಿದ ಸಿಎಂ: ಮುಂದಿನ ವಾರ ದಿಲ್ಲಿಗೆ ಬಿಎ ಸ್‌ವೈ ಪ್ರಯಾಣ ಸಾಧ್ಯತೆ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವರಿಷ್ಠರ ಭೇಟಿಗಾಗಿ ಸಮಯ ಕೋರಿದ್ದು, ಮುಂದಿನ ವಾರಾಂತ್ಯದಲ್ಲಿ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯಾಗುವುದೇ ಎಂಬ ಕುತೂಹಲ ಮೂಡಿದೆ. ಕೋವಿಡ್‌-19 ಪಿಡುಗು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೇಳು ತಿಂಗಳಲ್ಲಿ ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ.

ರಾಜ್ಯ ಬಿಜೆಪಿ ಸರಕಾರ ಒಂದು ವರ್ಷದ ಆಡಳಿತ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ಸಂಪುಟ ವಿಚಾರ ಕುರಿತಂತೆ ಚರ್ಚಿಸಲು ವರಿಷ್ಠರ ಭೇಟಿಗೆ ಚಿಂತಿಸಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಖಾಲಿಯಿರುವ ಖಾತೆಗಳಲ್ಲಿ ಕೆಲವನ್ನು ಭರ್ತಿ ಮಾಡುವುದಾಗಿದ್ದರೆ ಮುಖ್ಯಮಂತ್ರಿಗಳು ವರಿಷ್ಠರ ಭೇಟಿಗೆ ತೆರಳುವ ಸಾಧ್ಯತೆ ಕಡಿಮೆ. ವರಿಷ್ಠರ ಭೇಟಿಗೆ ತೆರಳುವುದೇ ಆದರೆ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ.

ಸೆ. 21ರಿಂದ ವಿಧಾನಮಂಡಲ ಅಧಿವೇಶನ ಕೂಡ ನಿಗದಿಯಾಗಿರುವುದರಿಂದ ಸಿಎಂ ಯಡಿಯೂರಪ್ಪ ಅವರ ದಿಲ್ಲಿ ಭೇಟಿ ಚಿಂತನೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಪಕ್ಷದ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಇನ್ನೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೆಲವು ದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರು ಯಾವುದೇ ನಾಯಕರನ್ನು ನೇರವಾಗಿ ಭೇಟಿಯಾಗುವ ಸಾಧ್ಯತೆ ಕಡಿಮೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ವರಿಷ್ಠರ ಭೇಟಿಗೆ ಸಮಯಾವಕಾಶ ಸಿಗುವ ಸಾಧ್ಯತೆಯ ಕುರಿತು ಸಂಶಯವನ್ನೂ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next