Advertisement

ಮುಖ್ಯಮಂತ್ರಿ ಯಡಿಯೂರಪ್ಪ ಆಗಮನಕ್ಕೆ ಉಜಿರೆ ಸಜ್ಜು

12:32 AM Dec 07, 2019 | Sriram |

ಬೆಳ್ತಂಗಡಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬೆಳ್ತಂಗಡಿ ತಾಲೂಕಿಗೆ ಶಾಸಕ ಹರೀಶ್‌ ಪೂಂಜ ಮುತುವರ್ಜಿಯಲ್ಲಿ 347 ಕೋಟಿ ರೂ. ಯೋಜಿತ ಕಾಮಗಾರಿಗಳಿಗೆ ಅನುದಾನ ದೊರೆತಿದೆ. ಶಿಲಾನ್ಯಾಸಕ್ಕಾಗಿ ಡಿ. 8ರಂದು ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುತ್ತಿದ್ದು, ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ಸಜ್ಜುಗೊಂಡಿದೆ.

Advertisement

ಈ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಎಸ್‌ಪಿ ಲಕ್ಷ್ಮೀಪ್ರಸಾದ್‌ ಸಭಾಂಗಣ ಮತ್ತು ಧರ್ಮಸ್ಥಳದ ಹೆಲಿಪ್ಯಾಡ್‌ ಪರಿಶೀಲನೆ ನಡೆಸಿದರು.

ಸಜ್ಜುಗೊಳ್ಳುತ್ತಿದೆ ಭವ್ಯ ವೇದಿಕೆ
ಕ್ರೀಡಾಂಗಣದ ಪೂರ್ವಭಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ಒಟ್ಟು 15ರಿಂದ 20 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಬಂದೋಬಸ್ತ್ಗಾಗಿ 150 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ. ಪರಿಶೀಲನೆಯ ಸಂದರ್ಭದಲ್ಲಿ ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವಿಕ್ರಮ್‌ ಅಮ್ಟೆ, ಎಎಸ್‌ಪಿ ಸೈದುಲ್‌ ಅಡಾವತ್‌, ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ತಾ.ಪಂ. ಇ.ಒ. ಕೆ.ಇ. ಜಯರಾಮ್‌, ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಎಸ್‌.ಐ. ನಂದಕುಮಾರ್‌, ಪ್ರೊಬೆಷನರಿ ಎಸ್‌.ಐ. ಭರತ್‌ ಉಪಸ್ಥಿತರಿದ್ದರು.

ಧರ್ಮಸ್ಥಳದ ಹೆಲಿಪ್ಯಾಡ್‌ಗೆ ಆಗಮಿಸಿದ ಬಳಿಕ ಯಡಿಯೂರಪ್ಪ ಅವರು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವರು. ಅಲ್ಲಿಂದ ಉಜಿರೆಯ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ.

Advertisement

ಭೋಜನ, ಪಾರ್ಕಿಂಗ್‌ ವ್ಯವಸ್ಥೆ
15ರಿಂದ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಭೋಜನದ ವ್ಯವಸ್ಥೆ ಮಾಡಲಾಗಿದೆ. ಅಜ್ಜರಕಾಡು ಮೈದಾನ ಮತ್ತು ಉಜಿರೆ ಜನಾರ್ದನ ಸ್ವಾಮಿ ದೇಗುಲ ಮುಂಭಾಗ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲಾಗಿದೆ.

ವಿವಿಧ ಸಚಿವರು ಭಾಗಿ
ಶಿಲಾನ್ಯಾಸ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಜತೆಗೆ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಾಧುಸ್ವಾಮಿ, ಕೆ.ಎಸ್‌. ಈಶ್ವರಪ್ಪ, ಸಂಸದ ನಳಿನ್‌, ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತು ಜಿಲ್ಲೆಯ ಎಲ್ಲ ಶಾಸಕರ ಸಹಿತ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರವಾಹ ಪೀಡಿತ ನಾಡಲ್ಲಿ ಅಭಿವೃದ್ಧಿ ಪರ್ವ
ಪ್ರವಾಹದಿಂದ ತತ್ತರಿಸಿದ್ದ ಬೆಳ್ತಂಗಡಿ ತಾಲೂಕಿಗೆ ಎರಡನೇ ಬಾರಿ ಸಿಎಂ ಬಿಎಸ್‌ವೈ ಭೇಟಿ ನೀಡುತ್ತಿದ್ದು, ತಾಲೂಕಿನ ಜನತೆಯಲ್ಲಿ ಭರವಸೆ ಮೂಡಿದೆ. ಈಗ 347 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಸಂತ್ರಸ್ತರ ಆಶೋತ್ತರ ಈಡೇರಿಸುವ ಕುರಿತು ಜನತೆ ಕಾತರರಾಗಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾಡಳಿತ ಸಂಪೂರ್ಣ ವ್ಯವಸ್ಥೆ ನಡೆಸಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಜನತೆ ಉತ್ಸುಕತೆಯಿಂದ ಭಾಗವಹಿಸಲಿದ್ದಾರೆ.
-ಹರೀಶ್‌ ಪೂಂಜ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next