Advertisement

ರೈತರ ಸಾಲಮನ್ನಾಕ್ಕೆ ಮುಖ್ಯಮಂತ್ರಿ ಇಂಗಿತ

12:51 PM Jun 01, 2017 | Team Udayavani |

ಮುತ್ತಿನಮುಳಸೋಗೆ (ಪಿರಿಯಾಪಟ್ಟಣ ತಾ.): ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವ ಪರವಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ಆಧರಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ರೈತರಿಗೆ 52 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಈ ಪೈಕಿ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು 42 ಸಾವಿರ ಕೋಟಿ ಸಾಲ ಪಡೆದಿದ್ದರೆ, ಸಹಕಾರ ಬ್ಯಾಂಕು, ಸಂಘಗಳಲ್ಲಿ ಪಡೆದಿರುವ ಸಾಲದ ಮೊತ್ತ 10,500 ಕೋಟಿ ರೂ., ಶೇ.22ರಷ್ಟು ರೈತರು ಮಾತ್ರ ಸಹಕಾರಿ ಸಾಲ ಪಡೆದಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡಲು ನನ್ನ ವಿರೋಧವಿಲ್ಲ.

ಆದರೆ, ಕೇಂದ್ರ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತಿದ್ದು, ಆ ನಂತರ ತೀರ್ಮಾನ ಮಾಡುತ್ತೇನೆ. ಉತ್ತರ ಪ್ರದೇಶ ಸರ್ಕಾರ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ಹಿಂದಿನಿಂದ ಹಣ ಕೊಟ್ಟಿದೆ ಎಂದರು. ರೈತರ ಸಾಲಮನ್ನಾ ವಿಚಾರದಲ್ಲಿ ಅಧಿಕಾರ ಇದ್ದಾಗ ಒಂದು ರೀತಿ, ಅಧಿಕಾರ ಇಲ್ಲದಾಗ ಒಂದು ರೀತಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಎರಡು ನಾಲಿಗೆ ಇದೆ ಎಂದು ಟೀಕಿಸಿದರು.

ಬಿ.ಎಸ್‌.ಯಡಿಯೂರಪ್ಪ ಮಾತೆತ್ತಿದರೆ ಸುಳ್ಳು ಹೇಳುತ್ತಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎನ್ನುವವರು ತಾವೇ ಅಧಿಕಾರದಲ್ಲಿದ್ದಾಗ ಏಕೆ ಮಾಡಲಿಲ್ಲ. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ವರೆಗಿನ ಸಹಕಾರಿ ಸಾಲ ಮನ್ನಾ ಮಾಡಿದ ಹಣದ ಪೈಕಿ 2500 ಕೋಟಿಯನ್ನು ನಮ್ಮ ಸರ್ಕಾರ ಭರಿಸಬೇಕಾಯಿತು ಎಂದು ಹೇಳಿದರು.

Advertisement

ನಾಲ್ಕು ಲಕ್ಷ ರೈತರನ್ನು ಬೆಂಗಳೂರಿಗೆ ಕರೆತರುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನ ಮೂಗು ಹಿಡಿದು ಸಾಲಮನ್ನಾ ಮಾಡಿಸುತ್ತೇನೆ ಎನ್ನುವ ಯಡಿಯೂರಪ್ಪ ಮೊದಲು ಪ್ರಧಾನಿ ನರೇಂದ್ರ ಮೋದಿಯ ಮೂಗು ಹಿಡಿದು ರೈತರ ಸಾಲಮನ್ನಾ ಮಾಡಿಸಲಿ ಎಂದು ಕಿಡಿಕಾರಿದರು.

ಎರಡು ವರ್ಷಗಳ ಸತತ ಬರಗಾಲದ ಹಿನ್ನೆಲೆ ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಲು ಪ್ರಧಾನಿಯವರ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ದಾಗ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ಅಲ್ಲಿ ತುಟಿಬಿಚ್ಚಲಿಲ್ಲ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸಂಸದರಾಗಿ ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾ ಪಿಸಲಿಲ್ಲ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡಲು ಕೇಂದ್ರಸರ್ಕಾರ ನನಗೆ ನೋಟು ಪ್ರಿಂಟ್‌ ಮಾಡುವ ಅಧಿಕಾರ ಕೊಟ್ಟಿಲ್ಲ. ಹೀಗಾಗಿ ಸಾಲಮನ್ನಾ ಸಾಧ್ಯವೇ ಇಲ್ಲ ಎಂದು ವಿಧಾನಪರಿಷತ್‌ನಲ್ಲಿ ಹೇಳಿಕೆ ನೀಡುರುವುದು ದಾಖಲೆಯಲ್ಲಿದೆ. ಆದರೆ, ಜನರಿಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಹರಿಹಾಯ್ದರು.

ಎರಡು ವರ್ಷಗಳ ಕಾಲ ಸತತ ಬರಗಾಲವನ್ನು ಪರಿಣಾಮಕಾರಿಯಾಗಿ ಎದುರಿಸಿದ್ದೇವೆ. ಇದರ ಪರಿಣಾಮ ಬರಗಾಲದಲ್ಲಿ ಜನ ಗುಳೇ ಹೋಗುವುದು ತಪ್ಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜನಪರ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಾವು ನಿಮ್ಮ ಜತೆ ಇದ್ದೇವೆ, ನೀವು ನಮ್ಮ ಜತೆ ಇರಿ ಎಂದರು.

ಶಾಸಕ ಕೆ.ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್‌, ರೋಷನ್‌ ಬೇಗ್‌, ಕೆ.ಆರ್‌.ರಮೇಶ್‌ ಕುಮಾರ್‌, ಎಚ್‌.ಆಂಜನೇಯ, ತನ್ವೀರ್‌, ವಿಧಾನಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಆರ್‌.ಧರ್ಮಸೇನ, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ತಾಪಂ ಅಧ್ಯಕ್ಷೆ ನಿರೂಪ ರಾಜೇಶ್‌ ಇತರರು ಇದ್ದರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next