ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಮುಖ್ಯಮಂತ್ರಿಯವರು ಉತ್ತರ ಕೊಡಬೇಕೆಂದು ಪಟ್ಟುಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿ, “ಭಾರತ್ ಮಾತಾ ಕಿ ಜೈ, ಮೋದಿ ಜಿಂದಾಬಾದ್, ಜೈ ಶ್ರೀರಾಮ್’ ಘೋಷಣೆ ಕೂಗಿತು. ಗದ್ದಲದ ನಡುವೆಯೇ 2024-25ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಮೇಲ್ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದರು.
ಗಲಾಟೆಯ ಮಧ್ಯೆಯೇ ಬಜೆಟ್‌ಗೆ ಒಪ್ಪಿಗೆ ನೀಡುವಂತೆ ಕೋರಿ ಸಿಎಂ ಮಂಡಿಸಿದ ಕರ್ನಾಟಕ ಧನ ವಿನಿಯೋಗ ಮಸೂದೆ -2024ರ ಪ್ರಸ್ತಾವನೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಜತೆಗೆ ಪೂರಕ ಅಂದಾಜುಗಳಿಗೆ ಸಂಬಂಧಿಸಿದ ಕರ್ನಾಟಕ ಧನವಿನಿಯೋಗ ಮಸೂದೆ ಸಂಖ್ಯೆ 2 ಹಾಗೂ 3ಕ್ಕೂ ಸದನದ ಒಪ್ಪಿಗೆ ಪಡೆದುಕೊಳ್ಳಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮೇಲಿನ ಚರ್ಚೆಗೆ ಮುಂದಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪಾಕ್ ಪರ ಘೋಷಣೆ ಕೂಗಿ 48 ಗಂಟೆ ಕಳೆದರೂ ಯಾರನ್ನೂ ಬಂಧಿಸಲಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಮೊದಲು ಪ್ರತಿಕ್ರಿಯೆ ಕೊಟ್ಟು ಬಳಿಕ ಬಜೆಟ್‌ಗೆ ಉತ್ತರಿಸಲಿ ಎಂದರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗೆ ಸೂಚಿಸಿದ್ದೇನೆ. ಅದು ಮುಗಿದ ಮೇಲೆ ನೀವು ಪ್ರಸ್ತಾವಿಸಿದ ವಿಷಯದ ಬಗ್ಗೆ ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇನೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಗಲಾಟೆ ಆರಂಭಿಸಿದರು. ಗದ್ದಲದ ನಡುವೆಯೇ ಉತ್ತರ ಕೊಟ್ಟ ಸಿಎಂ ಕೇಂದ್ರ ಸರಕಾರದ ವಿರುದ್ಧ ಅಬ್ಬರಿಸುತ್ತ, ತಮ್ಮ ಬಜೆಟ್ ಅನ್ನು ಸಮರ್ಥಿಸಿಕೊಂಡರು. ಇದು ಏಳು ಕೋಟಿ ಕನ್ನಡಿಗರ ಬಜೆಟ್, ಇದರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಗದ್ದಲ ಮಾಡುತ್ತಿದೆ. ಬಿಜೆಪಿಯವರು ಕನ್ನಡ ದ್ರೋಹಿಗಳು ಎಂದು ವಾಗ್ಧಾಳಿ ನಡೆಸಿದರು.
ಈ ವೇಳೆ ಬಿಜೆಪಿ ಸದಸ್ಯರು “ಮೋದಿ ಜಿಂದಾಬಾದ್, ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್, ನಿಲ್ಲಿಸಿ-ನಿಲ್ಲಿಸಿ ಬುರಡೆ ಭಾಷಣ ನಿಲ್ಲಿಸಿ’ ಎಂದು ಘೋಷಣೆ ಕೂಗಿದರು. ಬಿಜೆಪಿಯವರು ದೇಶದ್ರೋಹಿಗಳು ಎಂದು ಕಾಂಗ್ರೆಸ್ ಸದಸ್ಯರು ಜರೆದರು.