ಬಾಗಲಕೋಟೆ: “”ನನ್ನ ಜೊತೆಗೆ ಶ್ರೀರಾಮುಲು ಬಹಿರಂಗ ಚರ್ಚೆಗೆ ಬರುವುದು ಬೇಡ. ಸ್ವತಃ ಯಡಿಯೂರಪ್ಪ, ಇಲ್ಲವೇ ಪ್ರಧಾನಿ ಮೋದಿ ಅವರೇ ಚರ್ಚೆಗೆ ಬರಲಿ. ಅದಕ್ಕೂ ಮೊದಲು ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಯಡಿಯೂರಪ್ಪ ಜೈಲಿಗೆ ಏಕೆ ಹೋಗಿದ್ದರು ಎಂಬುದನ್ನು ಸ್ಪಷ್ಟಪಡಿಸಲಿ. ಬಳಿಕ ಅವರು ಎಲ್ಲಿ ಕರೆದರೂ ನಾನೇ ಬಹಿರಂಗ ಚರ್ಚೆಗೆ ಸಿದ್ಧ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
“”ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕುರಿತು ನಾನೇ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದ್ದ ಬಾದಾಮಿಯ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರಿಗೆ ಈ ಮೂಲಕ ಪ್ರತ್ಯುತ್ತರ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಪಟ್ಟಣದ ಹೊರ ವಲಯದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “”ಚುನಾವಣೆ ಪ್ರಚಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದೊಂದು ಕಡೆ ಒಂದೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ. ಮೊನ್ನೆ ದೇವೇಗೌಡರನ್ನು ಹಾಡಿ ಹೊಗಳಿದರೆ, ನಿನ್ನೆ ಜೆಡಿಎಸ್ ಅನ್ನು ಟೀಕಿಸುತ್ತಿದ್ದಾರೆ. ಕರ್ನಾಟಕ ಕೈ ತಪ್ಪಿ ಹೋಗಲಿದೆ ಎಂಬುದು ಅರಿವಿಗೆ ಬಂದ ಬಳಿಕ ಪ್ರಧಾನಿ ಮೋದಿ ಮತ್ತು ಬಿಜೆಪಿಯವರು ಮಾತಿನ ಬ್ಯಾಲೆನ್ಸ್ ತಪ್ಪಿದ್ದಾರೆ” ಎಂದರು.
ಇದೇ ವೇಳೆ, “”ಕುಮಾರಸ್ವಾಮಿ ಹಿಟ್ ಆಂಡ್ ರನ್ ಗಿರಾಕಿ. ಅವರು ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯೆ ಕೊಡಬೇಕಿಲ್ಲ. ಅವರು ಒಬ್ಬ ಮಹಾನ್ ಸುಳ್ಳುಗಾರ. ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಾನ ಸ್ಪರ್ಧೆ ನಡೆಸುತ್ತಿವೆ. ನಾನು ಅವರಿಬ್ಬರಿಗಿಂತ ಬಹಳ ಮುಂದೆ ಇದ್ದೇನೆ. ಈ ಕ್ಷೇತ್ರದಲ್ಲಿ ನಮ್ಮ ಸ್ಥಳೀಯ ನಾಯಕರು ಹೇಳಿದಂತೆ ನಾನು 1 ಲಕ್ಷ ಮತ ಪಡೆಯಲಿದ್ದೇನೆ. ಬಾದಾಮಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ನಟ ಸುದೀಪ್ ಆಗಮಿಸುವ ಕುರಿತು ನನಗೆ ಗೊತ್ತಿಲ್ಲ. ಸುದೀಪ್ ಜತೆ ನಾನು ಮಾತನಾಡಿಲ್ಲ” ಎಂದರು.