Advertisement

ತಿಪ್ಪರಲಾಗ ಹಾಕಿದ್ರೂ ಬಿಎಸ್‌ವೈ, ಎಚ್‌ಡಿಕೆ ಸಿಎಂ ಆಗಲ್ಲ​​​​​​​

06:05 AM Dec 30, 2017 | Team Udayavani |

ಚಿಕ್ಕಬಳ್ಳಾಪುರ: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಎಷ್ಟೇ ತಿಪ್ಪರಲಾಗ ಹಾಕಿದರೂ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2018ರ ಚುನಾವಣೆಯಲ್ಲಿ ರಾಜ್ಯದ ಜನತೆ ಮತ್ತೆ ತಮಗೇ ಆಶೀರ್ವಾದ ಮಾಡುತ್ತಾರೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬಾಗೇಪಲ್ಲಿಯಲ್ಲಿ ಶುಕ್ರವಾರ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಐದು ವರ್ಷ ಅಧಿಕಾರದಲ್ಲಿತ್ತು. ಕುಮಾರಸ್ವಾಮಿ ಕೂಡ ಸಿಎಂ ಆಗಿದ್ದರು. ಆದರೆ, ಬಡವರ ಬಗ್ಗೆ ಯಡಿಯೂರಪ್ಪ, ಕುಮಾರಸ್ವಾಮಿ ಒಂದು ದಿನವೂ ಮಾತನಾಡಿರಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಗ್ರಾಮ ವಾಸ್ತವ್ಯ ಬಿಟ್ಟರೆ ಬೇರೆನೂ ಮಾಡಲಿಲ್ಲ. ರಾಜ್ಯದ ಬಡವರ ಆರ್ಥಿಕ ಪ್ರಗತಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ನಾವು ಅಧಿಕಾರಕ್ಕೆ ಬಂದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಎಲ್ಲಾ ಜಾತಿ, ಧರ್ಮಗಳಿಗೆ ನೀಡಿದ್ದೇವೆ. ಸಿದ್ದರಾಮಯ್ಯನವರು ಅಹಿಂದ ವರ್ಗಕ್ಕೆ ಮಾತ್ರ ಭಾಗ್ಯ ಕೊಡುತ್ತಾರೆ ಎಂದು ಟೀಕೆ ಮಾಡುತ್ತಾರೆ. ಹಾಗಾದರೆ, ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯ, ಮಹಿಳೆಯರಿಗೆ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಎತ್ತಿನಹೊಳೆ, ಕೆ.ಸಿ.ವ್ಯಾಲಿ, ತ್ಯಾಜ್ಯ ನೀರು ಯೋಜನೆಗಳ ಪ್ರಯೋಜನವನ್ನು ಬರೀ ಅಹಿಂದ ವರ್ಗ ಮಾತ್ರ ಪಡೆಯುತ್ತಿವೆಯೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೂ ಇಂತಹ ಜನಪರ ಯೋಜನೆಗಳು ಇರಲಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ನಿಗಮಗಳಿಗೆ ಬಡವರು ಕೊಡಬೇಕಿದ್ದ ಬಡ್ಡಿ ಸಮೇತ ಸಾಲ ಮನ್ನಾ ಮಾಡಿದ ಸರ್ಕಾರ ನಮ್ಮದು. ಪ್ರಣಾಳಿಕೆ ಮೂಲಕ ಜನತೆಗೆ ಕೊಟ್ಟ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿರುವ ಸರ್ಕಾರ ಇದ್ದರೆ ದೇಶದಲ್ಲಿ ನಮ್ಮದು ಮಾತ್ರ. ಅನ್ನಭಾಗ್ಯ ಕಾರ್ಯಕ್ರಮದಿಂದ ರಾಜ್ಯ ಹಸಿವು ಮುಕ್ತವಾಗಿದೆ. ಅನ್ನಭಾಗ್ಯ ಜಾರಿ ಮಾಡಿದ್ದರಿಂದ ಬರಗಾಲದ ಸಂದರ್ಭದಲ್ಲಿ ಜನತೆ ಗುಳೆ ಹೋಗುವುದನ್ನು ನಿಲ್ಲಿಸಿದರು. ಯಾರು ಕೂಡ ಹಸಿವಿನಿಂದ ಸತ್ತಿದ್ದಾರೆಂಬ ನಿದರ್ಶನ ಇಲ್ಲ ಎಂದರು.

ಯಾರೇ ಬಂದರು ಎತ್ತಿನಹೊಳೆ ನಿಲ್ಲಲ್ಲ:
ಕುಮಾರಸ್ವಾಮಿ ದುರುದ್ದೇಶದಿಂದ ಟೀಕೆ ಮಾಡುತ್ತಾರೆ. ಅವರಿಗೆ ಅನುಭವದ ಕೊರತೆಯೋ ಅಥವಾ ರಾಜಕಾರಣಕ್ಕಾಗಿ ಟೀಕೆ ಮಾಡುತ್ತಾರೋ ಗೊತ್ತಿಲ್ಲ. ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆ. ನಾನು ಮುಖ್ಯಮಂತ್ರಿಯಾದರೆ ಎತ್ತಿನಹೊಳೆ ಯೋಜನೆ ಬಂದ್‌ ಮಾಡುತ್ತೇನೆಂದು ಹೇಳಿದ್ದಾರೆ.  ಕುಮಾರಸ್ವಾಮಿ ಅವರ ಅಪ್ಪನಾಣೆಗೂ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ. ಯಾರೇ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಯಾರೇ ಎತ್ತಿನಹೊಳೆ ಯೋಜನೆಗೆ ವಿರೋಧ ಮಾಡಿದರೂ ಅವರು ಬಯಲುಸೀಮೆಯ ಜನರ ವಿರೋಧಿಗಳು. 2018ರ ಚುನಾವಣೆಯಲ್ಲಿ ಇಂತವರಿಗೆ ತಕ್ಕಪಾಠ ಕಲಿಸಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಜೆಡಿಎಸ್‌ ದಲಿತ ಮುಖ್ಯಮಂತ್ರಿ ಮಾಡಲಿ:
ನಾವು ಅಧಿಕಾರಕ್ಕೆ ಬಂದರೆ ದಲಿತ ಹಾಗೂ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಉಪಮುಖ್ಯಮಂತ್ರಿ ಮಾಡುತ್ತೇವೆಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಜೆಡಿಎಸ್‌ನವರು ದಲಿತರನ್ನು ಏಕೆ ಸಿಎಂ ಮಾಡಬಾರದು. ದೇವೇಗೌಡರು ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಕೊನೇ ಆಸೆ ಹೊಂದಿದ್ದಾರಂತೆ. ಅದೇ ದಲಿತರೊಬ್ಬರು ಪಕ್ಷದಿಂದ ಸಿಎಂ ಆಗಲಿ ಎಂದು ದೇವೇಗೌಡರು ಏಕೆ ಆಸೆ ಇಟ್ಟುಕೊಳ್ಳಬಾರದು ಎಂದು ಪ್ರಶ್ನಿಸಿದರು.

ತಮ್ಮ ಕುಟುಂಬ ವರ್ಗದವರನ್ನು ಬಿಟ್ಟು ದಲಿತರನ್ನು ಸಿಎಂ ಮಾಡುವುದು ದೇವೇಗೌಡರಿಗೆ ಇಷ್ಟವಿಲ್ಲ. ನಾನು ಅಲ್ಲಿದ್ದವನೆ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next