Advertisement
2013ರಲ್ಲಿ ಇದೇ ಸರ್ಕಾರ ಕೇವಲ 1 ರೂ.ಗೆ ಕೆಜಿಯಂತೆ ಪ್ರತಿ ಕುಟುಂಬದ ವ್ಯಕ್ತಿಗೆ ತಲಾ ಐದು ಕೆಜಿ ಅಕ್ಕಿ ನೀಡುವ ಮೂಲಕ “ಅನ್ನಭಾಗ್ಯ’ಕ್ಕೆ ಚಾಲನೆ ನೀಡಿತ್ತು. ಈಗ ಅದೇ ಸರ್ಕಾರವು ದುಪ್ಪಟ್ಟು ಅಂದರೆ ಐದು ಕೆಜಿ ಅಕ್ಕಿಯ ಜತೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ತಗಲುವ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಯೋಜನೆಗೆ ಚಾಲನೆ ನೀಡಿತು. ಇದರೊಂದಿಗೆ ಹತ್ತು ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಬಡವರ್ಗ ಪಡೆಯುವ ಅಕ್ಕಿಯ ಪ್ರಮಾಣ ದುಪ್ಪಟ್ಟಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ವಿಧಾನಸೌಧ ಸೋಮವಾರ ಸಾಕ್ಷಿಯಾಯಿತು.
ಇದರೊಂದಿಗೆ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳ ಅಂತರದಲ್ಲಿ ಮೂರು ಈಡೇರಿದಂತಾಗಿದೆ. ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ದೊರಕಿದ್ದು, ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ. ಇನ್ನು ಉಚಿತ ವಿದ್ಯುತ್ ಕಲ್ಪಿಸುವ “ಗೃಹಜ್ಯೋತಿ’ಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಒಂದು ಕೋಟಿಗೂ ಅಧಿಕ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಬರುವ ತಿಂಗಳಿಂದ ಆ ವರ್ಗ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಈಗ ಇದರ ಸಾಲಿಗೆ “ಅನ್ನಭಾಗ್ಯ’ವೂ ಸೇರಿಕೊಂಡಿದೆ.
Related Articles
Advertisement
“1 ಗಂಟೆಯಲ್ಲಿ ಜಾರಿಗೆ ತಂದಿದ್ದೆ’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅನ್ನಭಾಗ್ಯ’ ಹೊಸ ಕಾರ್ಯಕ್ರಮವಲ್ಲ; 2013ರಲ್ಲಿ ನಾನು ಪ್ರಮಾಣವಚನ ಸ್ವೀಕರಿಸಿದ ಒಂದು ಗಂಟೆಯಲ್ಲಿ ಈ ಯೋಜನೆ ಘೋಷಿಸಿದ್ದೆ. ಆಗ 3 ರೂ.ಗೆ ನೀಡುತ್ತಿದ್ದ ಕೆಜಿ ಅಕ್ಕಿಯನ್ನು ಕೇವಲ 1 ರೂ.ಗೆ ನೀಡಲು ಆರಂಭಿಸಿದೆವು. ನಂತರದಲ್ಲಿ ಸಂಪೂರ್ಣ ಉಚಿತವಾಗಿ ವಿತರಿಸಲಾಯಿತು. ಆಮೇಲೆ ತಲಾ 7 ಕೆಜಿಗೆ ಹೆಚ್ಚಿಸಲಾಯಿತು. ಇದು ಈಗ ಹತ್ತು ಕೆಜಿಗೆ ತಲುಪಿದೆ. ಈ ಯೋಜನೆಯನ್ನು ಬೇರೆ ರಾಜಕೀಯ ಪಕ್ಷ ಜಾರಿಗೆ ತಂದಿದ್ದಲ್ಲ’ ಎಂದು ಹೇಳಿದರು. “ಅನ್ನಭಾಗ್ಯ’ದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐದರಲ್ಲಿ ಮೂರು ಗ್ಯಾರಂಟಿಗಳನ್ನು ಸರ್ಕಾರ ಅಲ್ಪಾವಧಿಯಲ್ಲೇ ಜಾರಿಗೆ ತಂದಿದೆ. ಚುನಾವಣೆಗೆ ಮುನ್ನ ನಾವು ನೀಡಿದ ಭರವಸೆಗಳನ್ನು ಈಗ ಈಡೇರಿಸುವ ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದೇವೆ. ವಿವಿಧ ಪಕ್ಷಗಳ ನಾಯಕರು ಈ ಅನ್ನಭಾಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದು ನಮ್ಮ ಬದ್ಧತೆಗೆ ಸಾಕ್ಷಿ ಎಂದು ಹೇಳಿದರು. ಮಾಹಿತಿ ಪತ್ರ ಬಿಡುಗಡೆ
“ಆಹಾರ ವೈವಿಧ್ಯತೆಯೊಂದಿಗೆ ಹಸಿವು ಮುಕ್ತ ಕರ್ನಾಟಕ’ ಮಾಹಿತಿ ಪತ್ರವನ್ನು ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಬಿಡುಗಡೆಗೊಳಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಮುಂದಿನ ಹತ್ತು ದಿನಗಳಲ್ಲಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿನ ಪ್ರತಿನಿಧಿಗಳಿಗೆ ಹಂತ-ಹಂತವಾಗಿ ನಗದು ವರ್ಗಾವಣೆ ಆಗಲಿದೆ’ ಎಂದರು. ಸ್ಟೇಟಸ್ ತಿಳಿಯುವುದು ಹೇಗೆ?
“ಅನ್ನಭಾಗ್ಯ’ದ ಫಲಾನುಭವಿಗಳು ಖುದ್ದು ತಮ್ಮ ಪಡಿತರಚೀಟಿ ಸಂಖ್ಯೆ ನಮೂದಿಸುವ ಮೂಲಕ ಹಣ ವರ್ಗಾವಣೆ ಬಗ್ಗೆ ತಿಳಿಯಬಹುದು. //ahara.kar.nic.in/lpg ಗೆ ಭೇಟಿ ನೀಡಿ ಅಲ್ಲಿ ಪಡಿತರಸಂಖ್ಯೆ ನಮೂದಿಸಿ, ಸ್ಟೇಟಸ್ ತಿಳಿಯಬಹುದು. ಡರ್ಟಿ ಪಾಲಿಟಿಕ್ಸ್
ಅಕ್ಕಿ ಕೊಡುವುದಾಗಿ ಲಿಖೀತ ಭರವಸೆ ನೀಡಿ ನಂತರ ಕೈಕೊಟ್ಟ ಕೇಂದ್ರ ಸರ್ಕಾರ ಅನ್ನದ ವಿಚಾರದಲ್ಲಿ “ಡರ್ಟಿ ಪಾಲಿಟಿಕ್ಸ್’ ಮಾಡುತ್ತಿದೆ. ಇದು ಬಡವರ ವಿರೋಧಿ ಕ್ರಮ ಅಲ್ಲದೆ ಮತ್ತೇನು?
– ಸಿದ್ದರಾಮಯ್ಯ, ಮುಖ್ಯಮಂತ್ರಿ