ಬೆಂಗಳೂರು: ಬರಪೀಡಿತ ಹಾಗೂ ಅತಿವೃಷ್ಟಿಯಿಂದ ತೊಂದರೆಗೀಡಾಗಿರುವ ತಾಲೂಕುಗಳಲ್ಲಿನ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲು ನ.27 ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಎಲ್ಲ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಕರೆಯಲಾಗಿದ್ದು ಇಡೀ ದಿನ 100 ಬರಪೀಡಿತ ತಾಲೂಕುಗಳು ಹಾಗೂ 40 ಅತಿವೃಷ್ಟಿ ಪೀಡಿತ ತಾಲೂಕುಗಳಲ್ಲಿ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲಿದ್ದು ಕೆಲವೊಂದು ಸಲಹೆ-ಸೂಚನೆ ನೀಡಲಿದ್ದಾರೆ.
ರಾಜ್ಯ ಸರ್ಕಾರ ಬರಪೀಡಿತ ಹಾಗೂ ಅತಿವೃಷ್ಟಿ ಪೀಡಿತ ಪ್ರದೇಶಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಪ್ರತಿಪಕ್ಷ ಬಿಜೆಪಿ
ಆರೋಪ ಮಾಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಭೆ ನಿಗದಿಪಡಿಸಿದ್ದಾರೆ.