ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಶನಿವಾರ ಕುಟುಂಬದೊಂದಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ತಡರಾತ್ರಿಯೇ ಬೆಂಗಳೂರಿನಿಂದ ಆಗಮಿಸಿ ಜಯಪುರ ಸಮೀಪದ ಗುಡ್ಡೆತೋಟದ ಖಾಸಗಿ ಹೋಮ್ ಸ್ಟೇ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ದೇವೇಗೌಡರು ಮತ್ತು ಸಚಿವ ರೇವಣ್ಣ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಕೊರಡಕಲ್ಲು ಹೆಲಿಪ್ಯಾಡ್‌ಗೆ ಆಗಮಿಸಿದರು.
ಶ್ರೀಮಠದ ರಾಜಗೋಪುರದ ಎದುರು ಶ್ರೀಮಠದ ಆಡಳಿತಾಧಿ ಕಾರಿ ಗೌರಿಶಂಕರ್, ಪೇಷ್ಕಾರ್ ಶಿವಶಂಕರಭಟ್ ಆನೆ, ಛತ್ರಿ, ವಾದ್ಯಮೇಳದೊಂದಿಗೆ ದೇವೇಗೌಡ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ ನೀಡಿದರು. ನಂತರ ಶ್ರೀ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ದೇವೇಗೌಡ ಕುಟುಂಬದ ಸದಸ್ಯರು ಗುರು ಗಣೇಶ ಪ್ರಾರ್ಥನೆಯೊಂದಿಗೆ ಗಣಹವನ ಹಾಗೂ ನವಗ್ರಹ ಹೋಮದ ಸಂಕಲ್ಪ ಕೈಗೊಂಡರು. ನಂತರ ಗುರುನಿವಾಸಕ್ಕೆ ತೆರಳಿ, ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ದರ್ಶನ ಪಡೆದರು. ದೇವೇಗೌಡ ಕುಟುಂಬದ ಅನಿತಾಕುಮಾರಸ್ವಾಮಿ, ಚನ್ನಮ್ಮ ದೇವೇಗೌಡ ಹಾಜರಿದ್ದರು.
ನಂತರ, ಶ್ರೀಮಠಕ್ಕೆ ಆಗಮಿಸಿದ ಕುಮಾರಸ್ವಾಮಿ, ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಶಕ್ತಿಗಣಪತಿ, ತೋರಣ ಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯ, ಶ್ರೀ ಶಂಕರಚಾರ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯುತ್ತಿದ್ದ ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದರು.
ಸೋಮಾಯಾಜಿ ಹಾಗೂ ಹತ್ತು ಋತ್ವಿಜರ ತಂಡ ಹೋಮದ ಕಾರ್ಯ ಕೈಗೊಂಡರು. ನಂತರ ಶ್ರೀ ಮಠದ ಆಡಳಿತಾ ಧಿಕಾರಿ ವಿ.ಆರ್. ಗೌರಿಶಂಕರ್ ಮುಖ್ಯಮಂತ್ರಿಗೆ ಪ್ರಸಾದ ನೀಡಿದರು. ಸಿಎಂ ಕುಮಾರಸ್ವಾಮಿ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ತೆರಳಿದರು.