Advertisement

ಏನ್‌ ಬ್ರದರ್‌, ಸರಕಾರ ಬೀಳಿಸ್ತಾ ಇದಿಯಂತೆ?

06:00 AM Sep 16, 2018 | |

ಬೆಳಗಾವಿ: “ಏನ್‌ ಬ್ರದರ್‌. ಸರಕಾರ ಬೀಳಿಸ್ತಾ ಇದಿಯಂತೆ? ರಾಜೀನಾಮೆ ಕೊಡ್ತಾಯಿದಿಯಂತೆ? ಏಕೆ ಬ್ರದರ್‌..?’

Advertisement

“ಹಾಗೇನಿಲ್ಲ..ಏನೇ ಮಾಡುವುದಿದ್ರೂ ನಿಮಗೆ ಹೇಳಿಯೇ ಮಾಡುತ್ತೇನೆ. ಅಷ್ಟಕ್ಕೂ ನಿಮ್ಮ ಫ್ರೆಂಡ್‌ ಇದ್ದಾರಲ್ಲಾ. ಅವರನ್ನೇ ಕೇಳಿ. ಅವರಿಗೆ ಎಲ್ಲಾ ಗೊತ್ತಿದೆ..!’

– ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಮಧ್ಯೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ ಎನ್ನಲಾದ ಚುಟುಕು ಸಂಭಾಷಣೆ.

ಬೆಳಗಾವಿಗೆ ಬಂದೊಡನೆ ತಮಗೆ ಸ್ವಾಗತ ಕೋರಿದ ಸಚಿವ ಜಾರಕಿಹೊಳಿ ಅವರ ಕೆನ್ನೆ ಸವರಿದ ಕುಮಾರಸ್ವಾಮಿ, ಬಹಳ ಪ್ರೀತಿಯಿಂದ ಅವರೊಂದಿಗೆ ಕುಶಲೋಪರಿ ನಡೆಸಿದರು. ಆದರೆ, ಸಚಿವರು ಮುಖ್ಯಮಂತ್ರಿಯನ್ನು ಸ್ವಾಗತಿಸಿದ ಕೆಲವೇ ನಿಮಿಷಗಳಲ್ಲಿ ಖಾಸಗಿ ವಾಹನದಲ್ಲಿ ಅಲ್ಲಿಂದ ನಿರ್ಗಮಿಸಿದರು.

ಸಮ್ಮಿಶ್ರ ಸರಕಾರ ಹಾಗೂ ಕಾಂಗ್ರೆಸ್‌ ನಾಯಕರ ಬಗ್ಗೆ ಸಾಕಷ್ಟು ಅಸಮಾಧಾನಗೊಂಡಿರುವ ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಮೇಶ ಜಾರಕಿಹೊಳಿ ಶನಿವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ, ಕನ್ನಡ ಭವನ ಉದ್ಘಾಟನೆ ಹಾಗೂ ಇದೇ ಮೊದಲ ಬಾರಿಗೆ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಜನತಾ ದರ್ಶನದಿಂದ ದೂರವೇ ಉಳಿದರು.

Advertisement

ಶಿಷ್ಟಾಚಾರ ಪ್ರಕಾರ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ ಬಳಿಕ ರಮೇಶ, ಖಾಸಗಿ ಕಾರ್ಯ ನಿಮಿತ್ತ ಮಹಾರಾಷ್ಟ್ರಕ್ಕೆ ತೆರಳಿದರು. ಆ ಮೂಲಕ ರಾಜಕೀಯ ಬಿಸಿ-ಬಿಸಿ ಚರ್ಚೆಗೆ ಮತ್ತಷ್ಟು ಆಹಾರ ಒದಗಿಸಿದರು. ತಮ್ಮಲ್ಲಿಯ ಭಿನ್ನಮತ ಇನ್ನೂ ತೀವ್ರಗೊಳ್ಳುವಂತೆ ಮಾಡಿದರು.

ಸಿಎಂ ಜತೆ ಹೆಬ್ಟಾಳಕರ:
ಇನ್ನೊಂದೆಡೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳ ಸ್ವಾಗತದ ನಂತರ ಕೆಎಲ್‌ಎಸ್‌ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರೊಂದಿಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಕಾರಿನಲ್ಲಿ ತೆರಳಿದ್ದು ಎದ್ದು ಕಂಡಿತು. ಹಲವು ರೀತಿಯ ಚರ್ಚೆಗಳಿಗೂ ಇದು ಎಡೆಮಾಡಿಕೊಟ್ಟಿತು. ನಗರದ ಎಲ್ಲ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿಗಳ ಜೊತೆಗೇ ಇದ್ದ ಲಕ್ಷ್ಮೀ, ಬಿಸಿ-ಬಿಸಿ ರಾಜಕೀಯ ಚರ್ಚೆಗೆ ಇನ್ನಷ್ಟು ಆಹಾರ ಒದಗಿಸಿದರು.

ಡಿಕೆಶಿ ಬರಲಿಲ್ಲ:
ಶನಿವಾರ ಬೆಳಗಾವಿಗೆ ಹೋಗುತ್ತಿದ್ದೇನೆ. ಅಲ್ಲಿ ಸಚಿವ ರಮೇಶ ಜಾರಕಿಹೊಳಿ ಜತೆ ಮಾತುಕತೆ ನಡೆಸುತ್ತೇನೆಂದು ಶುಕ್ರವಾರ ಬೆಂಗಳೂರಿನಲ್ಲಿ ಹೇಳಿದ್ದ ಸಚಿವ ಡಿ.ಕೆ.ಶಿವಕುಮಾರ ಅವರು ಬೆಳಗಾವಿಗೆ ಬರಲಿಲ್ಲ. ಡಿಕೆಶಿ ಭೇಟಿಗೆ ಉತ್ಸುಕತೆ ತೋರದ ಸಚಿವ ರಮೇಶ ಜಾರಕಿಹೊಳಿ, ಈ ಮುಖಾಮುಖೀಯ ಮುಜುಗರ ತಪ್ಪಿಸಿಕೊಳ್ಳಲು ಮಹಾರಾಷ್ಟ್ರಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ, ಶಿವಕುಮಾರ ಬರಲೇ ಇಲ್ಲ. ಇದರಿಂದ ರಾಜಕೀಯ ವಲಯದಲ್ಲಿ ಉಂಟಾಗಿದ್ದ ಕುತೂಹಲ ತಣ್ಣಗಾಯಿತು.

Advertisement

Udayavani is now on Telegram. Click here to join our channel and stay updated with the latest news.

Next