ಮಂಡ್ಯ: ಸೀತಾಪುರದ ಪಾಲಿಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲಿಲ್ಲ! ಥೇಟ್ ಮಣ್ಣಿನ ಮಗನಂತೆಯೇ ಶರಟು, ಪಂಚೆ ತೊಟ್ಟ ಕುಮಾರಸ್ವಾಮಿ ಗ್ರಾಮಸ್ಥರ ಪಾಲಿಗೆ ನೆರೆಮನೆಯ ರೈತನೇ ಆಗಿ ಹೋಗಿದ್ದರು. ಶನಿವಾರ ಮಧ್ಯಾಹ್ನ ಸರಿಯಾಗಿ 1.40ಕ್ಕೆ ಗದ್ದೆಗೆ ಇಳಿದ ಸಿಎಂ ಬತ್ತದ ಸಸಿ ಕೈಯ್ಯಲ್ಲಿ ಹಿಡಿದು ಪೂಜೆ ಸಲ್ಲಿಸಿ ಈಶಾನ್ಯ ದಿಕ್ಕಿನೆಡೆಗೆ ನಿಂತು ನಾಟಿ ಕಾರ್ಯ ಶುರು ಮಾಡಿದರು.
ರೈತರಿಗೆ ಸ್ಥೈರ್ಯ ತುಂಬಲೆಂದೇ ಗದ್ದೆಗಿಳಿದ ಸಿಎಂ ಕುಮಾರಸ್ವಾಮಿ, ಗೌರಿ-ಗಣೇಶನ ಹಬ್ಬಕ್ಕೆ ಇನ್ನಷ್ಟು ಹೊಸ ಯೋಜನೆ ಕೊಡುವ ಬಗ್ಗೆ ರೈತರಿಗೆ ಭರವಸೆಯನ್ನೂ ನೀಡಿದರು. ಗದ್ದೆಯ ಬದಿಯಲ್ಲೇ ನಿಂತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಮನೆಬಾಗಿಲಿಗೆ ಯಾವುದೇ ಸಾಲಗಾರರು ಬರಬಾರದು. ಆ ರೀತಿ ಕೃಷಿ ನೀತಿ ರೂಪಿಸುತ್ತೇನೆ. ವಿಪಕ್ಷಗಳನ್ನು ಮೆಚ್ಚಿಸಲು ನಾನು ಈ ಕೆಲಸ ಮಾಡುತ್ತಿಲ್ಲ ಎಂದರು.
ಇನ್ನು ಮುಂದೆ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವುದಿಲ್ಲ. ತಿಂಗಳಲ್ಲಿ ಒಂದು ಜಿಲ್ಲೆಯಂತೆ ರಾಜ್ಯದ 30 ಜಿಲ್ಲೆಗಳಿಗೂ ಭೇಟಿ ನೀಡಿ ಸ್ಥಳೀಯ ರೈತರೊಂದಿಗೆ ಮುಕ್ತವಾಗಿ ಚರ್ಚಿಸುತ್ತೇನೆ. ರೈತರೊಂದಿಗೆ ಬೆರೆತು ಅವರ ಸಮಸ್ಯೆ ಆಲಿಸುತ್ತೇನೆ. ಬುಡಕಟ್ಟು ಜನಾಂಗದವರು ವಾಸಿಸುವ ಹಾಡಿಗಳಲ್ಲೂ ವಾಸ್ತವ್ಯ ಹೂಡಿ ಅವರ ನೋವು-ನಲಿವುಗಳನ್ನು ತಿಳಿಯುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.
ಎಲ್ಲ ಅಣೆಕಟ್ಟೆಗಳು ತುಂಬಿವೆ. ತಮಿಳುನಾಡಿನ ರೈತರೂ ಸಂತಸದಲ್ಲಿದ್ದಾರೆ. ರೈತರ ಸಂತೋಷದಲ್ಲಿ ಪಾಲ್ಗೊಳ್ಳಲು ನಾಟಿ ಕಾರ್ಯಕ್ಕೆ ಆಗಮಿಸಿದ್ದೇನೆ. ರೈತರೊಂದಿಗೆ ಸರ್ಕಾರವಿದೆ ಎಂಬುದಾಗಿ ಆತ್ಮ ಸ್ಥೈರ್ಯ ತುಂಬಲು ಬಂದಿದ್ದೇನೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮುಖ್ಯಮಂತ್ರಿ ಭತ್ತ ನಾಟಿ ಮಾಡಿದರೆಂದು ಪ್ರಚಾರ ತೆಗೆದುಕೊಳ್ಳಲು ಇದನ್ನು ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಂಗತಿ. ಕೆಲ ಗಂಟೆಗಳ ಕಾಲ ಗದ್ದೆಗಿಳಿದು ಸಸಿ ನಾಟಿ ಮಾಡೋದನ್ನು ಕಂಡು ರಾಜ್ಯದ ಜನರು ಆನಂದಿಸಿದ್ದಾರೆ.
– ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ