Advertisement

ವಿಶ್ವಾಸ ಗೆದ್ದ ಕುಮಾರಗೆ ಬಿಎಸ್‌ವೈ ಬಂದ್‌ ಬಿಸಿ

06:00 AM May 26, 2018 | |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಬಹುಮತ ಸಾಬೀತುಪಡಿಸಿದ್ದು, ಇದರೊಂದಿಗೆ ಸರ್ಕಾರ ಅಧಿಕೃತವಾಗಿ ಕಾರ್ಯಾರಂಭ ಮಾಡುವಂತಾಗಿದೆ. ಇದರ ಬೆನ್ನಲ್ಲೇ ಹೊಸ ಸರ್ಕಾರಕ್ಕೆ ಹಲವು ಸವಾಲುಗಳು ಎದುರಾಗಿದೆ.

Advertisement

ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಕೃಷಿ ಸಾಲವನ್ನು ಸಂಪೂರ್ಣ ಸಾಲ ಮನ್ನಾ ಮಾಡುವ ಕುರಿತು ಸಂಜೆಯೊಳಗೆ ಘೋಷಣೆ ಮಾಡದಿದ್ದಲ್ಲಿ ಸೋಮವಾರ ರಾಜ್ಯ ಬಂದ್‌ ಆಚರಿಸುವುದಾಗಿ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಸಿದ್ದಾರೆ. ಇನ್ನೊಂದೆಡೆ ಸಚಿವ ಸಂಪುಟ ರಚನೆಯೂ ಹೊಸ ಸರ್ಕಾರಕ್ಕೆ ಕಗ್ಗಂಟಾಗಿದ್ದು, ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ  ಎರಡೂ ಪಕ್ಷಗಳ ನಾಯಕರಿಗೆ ತಲೆಬಿಸಿಯಾಗಿದೆ.

ವಿಧಾನಸಭೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಸದಸ್ಯರ ಸಭಾತ್ಯಾಗದ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ಪ್ರಸ್ತಾವವನ್ನು ಸದನ ಧ್ವನಿಮತದಿಂದ ಅಂಗೀಕರಿಸಿತು. 221 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಪರವಾಗಿ 118 ಸದಸ್ಯರು ಇದ್ದುದರಿಂದ ಬಹುಮತ ಸಾಬೀತಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತನ್ನ ಸದಸ್ಯರಿಗೆ ವಿಪ್‌ ಜಾರಿ ಮಾಡಿತ್ತು.
ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮೊದಲು ಸ್ಪೀಕರ್‌ ಆಯ್ಕೆ ನಡೆದು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಆರ್‌.ರಮೇಶ್‌ಕುಮಾರ್‌ ಅವರನ್ನು ಅವಿರೋಧವಾಗಿ ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಅಧಿಕಾರ ಸ್ವೀಕರಿಸಿದ ಅವರು ವಿಶ್ವಾಸಮತ ಪ್ರಸ್ತಾವ ಮಂಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.

ಅದರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, “ನನ್ನ ನೇತೃತ್ವದ ಸಚಿವ ಸಂಪುಟದ ಮೇಲೆ ವಿಶ್ವಾಸ ವ್ಯಕ್ತಪಡಿಸುವಂತೆ ಕೋರುತ್ತೇನೆ’ ಎಂಬ ಪ್ರಸ್ತಾವವನ್ನು ಮಂಡಿಸಿ ಅದರ ಮೇಲೆ ಮಾತನಾಡಿದರು. ನಂತರ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರೂ ಮಾತನಾಡಿ, ಅಪವಿತ್ರ ಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತಿನಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿ ಸಭಾತ್ಯಾಗ ಮಾಡಿದರು. ಇವರಿಗೆ ಜತೆಯಾಗಿ ಬಿಜೆಪಿಯ 103 ಸದಸ್ಯರೂ ಸಭೆಯಿಂದ ಹೊರನಡೆದರು.

ಹೀಗಾಗಿ ಬಹುಮತ ಸಾಬೀತು ಪ್ರಸ್ತಾವವನ್ನು ಮತ ವಿಭಜನೆಗೆ ಹಾಕುವ ಪರಿಸ್ಥಿತಿ ಉದ್ಭವಿಸಲಿಲ್ಲ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಸದನದಲ್ಲಿದ್ದ ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ, ಕೆಪಿಜೆಪಿ ಮತ್ತು ಪಕ್ಷೇತರ ಸದಸ್ಯರು ಧ್ವನಿಮತದ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಿದ್ದಾರೆ ಎಂದು ಸ್ಪೀಕರ್‌ ಘೋಷಿಸಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Advertisement

ಕರ್ನಾಟಕ ಬಂದ್‌ ಎಚ್ಚರಿಕೆ:
ಬಹುಮತ ಸಾಬೀತಿಗೆ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದರು. ಆದರೆ, ಇದುವರೆಗೂ ಆ ನಿಟ್ಟಿನಲ್ಲಿ ಘೋಷಣೆ ಹೊರಬೀಳದ ಕಾರಣ ಸರ್ಕಾರದ ವಿರುದ್ಧ ಬಂದ್‌ಗೆ ಕರೆ ನೀಡುವಂತೆ ಬಿಜೆಪಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಸಂಜೆಯೊಳಗೆ ಸಾಲ ಮನ್ನಾ ಕುರಿತು ಘೋಷಣೆ ಹೊರಬೀಳದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್‌ ಮಾಡುವ ಮೂಲಕ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಂದ್‌ಗೆ ಅವಕಾಶ ನೀಡುವುದಿಲ್ಲ:
ಬಹುಮತ ಸಾಬೀತು ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಆದರೆ, ಜನರನ್ನು ಉದ್ರೇಕಗೊಳಿಸಲು ಅವಕಾಶ ನೀಡುವುದಿಲ್ಲ. ಇಂತಹ ಬಂದ್‌ಗಳನ್ನು ನಾನೂ ಸಾಕಷ್ಟು ನೋಡಿದ್ದೇನೆ. ಬಿಜೆಪಿಯವರು ಕರಾವಳಿಯಲ್ಲಿ ಜನರ ಮನಸ್ಸು ಹಾಳು ಮಾಡಿದಂತೆ ಈ ವಿಚಾರದಲ್ಲೂ ಮಾಡಲು ಹೊರಟರೆ ಅಂತಹ ಘಟನೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಪುಟ ವಿಸ್ತರಣೆ ಸರ್ಕಸ್‌ ಆರಂಭ
ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪ್ರಕ್ರಿಯೆಯನ್ನು ಸಲೀಸಾಗಿ ಮುಗಿಸಿದೆ. ಆದರೆ, ನಿಜವಾದ ಸವಾಲು ಆರಂಭವಾಗಿರುವುದೇ ಈಗ. ಸಚಿವ ಸಂಪುಟ ರಚನೆ ಉಭಯ ಪಕ್ಷಗಳಿಗೂ ಕಬ್ಬಿಣದ ಕಡಲೆಯಾಗಿದೆ. ಈಗಾಗಲೇ ಕಾಂಗ್ರೆಸ್‌ ಎರಡು ಉಪಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಇಟ್ಟಿದೆ. ಒಂದು ಉಪಮುಖ್ಯಮಂತ್ರಿ ಸ್ಥಾನವನ್ನು ದಲಿತ ವರ್ಗಕ್ಕೆ ನೀಡಿದ್ದು, ಇನ್ನೊಂದು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರ ನಡವೆ ತೀವ್ರ ಪೈಪೋಟಿ ಇದೆ.

ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲೂ ಸಾಕಷ್ಟು ಲಾಬಿ ನಡೆಯುತ್ತಿದೆ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ ಬೆಂಬಲಿಸಿರುವುದರಿಂದ ಸಹಜವಾಗಿಯೇ ಪಕ್ಷದ ಒಕ್ಕಲಿಗ ಪ್ರತಿನಿಧಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಬೇಡಿಕೆ ಬಂದಿದೆ. ಇನ್ನು ಲಿಂಗಾಯತ ಪ್ರತ್ಯೇಕ ಧರ್ಮದ ಮಧ್ಯೆಯೂ ಕಾಂಗ್ರೆಸ್‌ನಿಂದ 16 ಲಿಂಗಾಯತ ಶಾಸಕರು ಗೆದ್ದಿರುವುದರಿಂದ ಪಕ್ಷದಲ್ಲಿ ಈ ಸಮುದಾಯದ ಪರ ಲಾಬಿ ಜೋರಾಗಿದೆ. ಇನ್ನೊಂದೆಡೆ ಜಾತ್ಯತೀತ ಪ್ರತಿಪಾದನೆ ಹಿನ್ನೆಲೆಯಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಂದಲೂ ಸಚಿವ ಸ್ಥಾನಕ್ಕೆ ಒತ್ತಾಯ ಕೇಳಿಬರುತ್ತಿದೆ.

ಆದರೆ, ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದಲ್ಲಿ ಕೇವಲ 34 ಮಂದಿಗೆ ಮಾತ್ರ ಅವಕಾಶವಿದೆ. ಮುಖ್ಯಮಂತ್ರಿ ಹೊರತಾಗಿ ಜೆಡಿಎಸ್‌ಗೆ 11 ಸ್ಥಾನ ಮಾತ್ರ ಲಭ್ಯವಿದ್ದರೆ, ಆಕಾಂಕ್ಷಿಗಳ ಸಂಖ್ಯೆ 20 ದಾಟಿದೆ. ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಸೇರಿ 22 ಸ್ಥಾನಗಳು ಹಂಚಿಕೆಯಾಗಿವೆ. ಈ ಸ್ಥಾನಗಳ ಮೇಲೆ 35ಕ್ಕೂ ಹೆಚ್ಚು ಶಾಸಕರು ಕಣ್ಣಿಟ್ಟಿದ್ದಾರೆ.

ಏಕೈಕ ಪ್ರತಿಪಕ್ಷ
ಇತ್ತೀಚಿನ ವರ್ಷಗಳಲ್ಲಿ ವಿಧಾನಸಭೆಯಲ್ಲಿ ಏಕೈಕ ಪ್ರತಿಪಕ್ಷ ಇರುವುದು ಹೊಸ ದಾಖಲೆಯಾಗಿದೆ. ಅದರಲ್ಲೂ 104 ಸ್ಥಾನಗಳನ್ನು ಹೊಂದಿರುವ ಪಕ್ಷವೊಂದು ಪ್ರತಿಪಕ್ಷವಾಗಿರುವುದು ಕೂಡ ಇದೇ ಮೊದಲು.

ಈ ಹಿಂದೆ 1983ರಲ್ಲಿ ಮೈತ್ರಿ ಸರ್ಕಾರವಿದ್ದಾಗ 82 ಸ್ಥಾನ ಹೊಂದಿದ್ದ ಕಾಂಗ್ರೆಸ್‌ ಪ್ರತಿಪಕ್ಷವಾಗಿ ಕೆಲಸ ಮಾಡಿತ್ತು. ಇವರೊಂದಿಗೆ ಆರ್‌ಪಿಐ, ಸಿಪಿಐ ಕೂಡ ಪ್ರತಿಪಕ್ಷ ಸ್ಥಾನದಲ್ಲಿ ಇದ್ದವು. 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಬಂದಾಗ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿದ್ದರೆ, ಜೆಡಿಯು, ಸಿಪಿಐ, ಕನ್ನಡನಾಡುಕನ್ನಡ ಚಳವಳಿ ವಾಟಾಳ್‌ ಪಕ್ಷಗಳು ಕೂಡ ಪ್ರತಿಪಕ್ಷ ಸ್ಥಾನದಲ್ಲಿ ಕೈಜೋಡಿಸಿದ್ದವು. 2006ರಲ್ಲಿ ಜೆಡಿಎಸ್‌-ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್‌ ಪ್ರಮುಖ ಪ್ರತಿಪಕ್ಷವಾದರೆ, ಉಳಿದ ಪಕ್ಷಗಳು ಪ್ರತಿಪಕ್ಷ ಸ್ಥಾನದಲ್ಲಿದ್ದವು. ಉಳಿದಂತೆ ಏಕ ಪಕ್ಷ ಅಧಿಕಾರದಲ್ಲಿದ್ದಾಗಲೂ ಒಂದಕ್ಕಿಂತ ಹೆಚ್ಚು ಪಕ್ಷಗಳು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಿದ್ದವು.

ಇದೀಗ ಮತ್ತೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ 104 ಸ್ಥಾನ ಹೊಂದಿರುವ ಬಿಜೆಪಿ ಮಾತ್ರ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಸರ್ಕಾರದಲ್ಲಿದ್ದರೆ, ಕೆಪಿಜೆಪಿ ಮತ್ತು ಪಕ್ಷೇತರರಾಗಿ ಆಯ್ಕೆಯಾಗಿರುವ ಇಬ್ಬರು ಸದಸ್ಯರೂ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ.

ಸವಾಲ್‌-ಜವಾಬ್‌
ಬಿ.ಎಸ್‌.ಯಡಿಯೂರಪ್ಪ

– ಸ್ವಾಮಿ 219 ಕಡೆ ಸ್ಪರ್ಧೆ ಮಾಡಿ 38 ಗೆದ್ರಿ. 181 ಕಡೆ ಪರಾಭವಗೊಂಡು 121 ಕಡೆ ಠೇವಣಿ ಕಳೆದುಕೊಂಡಿರಿ. 16 ಜಿಲ್ಲೆಗಳಲ್ಲಿ ಒಂದು ಸೀಟೂ ಇಲ್ಲ. ಅಂತಹ ಜೆಡಿಎಸ್‌ ನಾಯಕನನ್ನು ಕಾಂಗ್ರೆಸ್‌ನವರೆಲ್ಲಾ ಸೇರಿ ಮುಖ್ಯಮಂತ್ರಿ ಮಾಡಿ ಸದನದಲ್ಲಿ ವಿಶ್ವಾಸ ಕೇಳುವ ಪರಿಸ್ಥಿತಿ ತಂದೊಡ್ಡಿದಿರಿ.
– 2008ರಲ್ಲಿ 20 ತಿಂಗಳ ನಂತರ ಅಧಿಕಾರ ಕೊಡುವ ಸಂದರ್ಭದಲ್ಲಿ ವೆಸ್ಟೆಂಡ್‌ ಹೋಟೆಲ್‌ಗೆ ಅಪ್ಪ-ಮಕ್ಕಳು (ಕುಮಾರಸ್ವಾಮಿ-ದೇವೇಗೌಡ) ಬಂದು ಅನೇಕ ಷರತ್ತು, ಹೊಸ ಷರತ್ತುಗಳನ್ನು ಹಾಕಲು ಶುರು ಮಾಡಿದ್ದರು.
– ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಆದ ಮೇಲೆ ಏನು ಮಾಡಬೇಕು ಎಂಬ ಹೊಂದಾಣಿಕೆ ಮೊದಲೇ ಆಗಿತ್ತು. ಅನಂತ್‌ಕುಮಾರ್‌, ಜಗದೀಶ್‌ ಶೆಟ್ಟರ್‌, ಈಶ್ವರಪ್ಪ, ಚೆಲುವರಾಯಸ್ವಾಮಿ ಎಲ್ಲರೂ ಇದ್ದು ಸಾಕ್ಷಿಯಾಗಿದ್ದರು.  ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡದೆ ಕುಮಾರಸ್ವಾಮಿ ನಂಬಿಕೆ ದ್ರೋಹ, ವಿಶ್ವಾಸ್ರೋಹ ಮಾಡಿದರು.
– ಅಧಿಕಾರವಿಲ್ಲದೆ 12 ವರ್ಷ ವನವಾಸ ಅನುಭವಿಸಿದ ಕುಮಾರಸ್ವಾಮಿಯವರಿಗೆ ಸಿಟ್ಟು, ಸೆಡವು, ರೋಷ, ಮಾತ್ಸರ್ಯ ಸಾಮಾನ್ಯ. ಇಂತಹ ಅಪ್ಪ ಮಕ್ಕಳಿಗಷ್ಟೇ ಇದು ಗೊತ್ತಿರಬೇಕು. ಶಿವಕುಮಾರ್‌ ಅವರೆ, ನಾಗರಹಾವಿನ ರೋಷಕ್ಕೆ 12 ವರ್ಷವಾದರೆ ಕುಮಾರಸ್ವಾಮಿಯವರ ರೋಷಕ್ಕೆ 12 ವರ್ಷಕ್ಕೂ ಹೆಚ್ಚು ಆಯಸ್ಸು. ದುರ್ಯೋಧನ ಕುಮಾರಸ್ವಾಮಿಯವರ ಮನೆದೇವರಾಗಿರಬೇಕು.
– ಸಮ್ಮಿಶ್ರ ಸರ್ಕಾರ ನಿಮ್ಮಪ್ಪಂಗೆ ಬೇಜಾರಾಗಿತ್ತು ಅಂದರೆ ನಮ್ಮ ಕೈ ಹಿಡಿದುಕೊಂಡು ಏಕೆ ಬಂದಿರಿ? 20 ತಿಂಗಳು ಏಕೆ ಕೈಜೋಡಿಸಿದಿರಿ? ನಿಮ್ಮ ತಂದೆಯವರು ಬರೆದಿರೋ ನೂರು ಪತ್ರ ತೋರಿಸಲೇನು? ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದಾಗ ಪ್ರತಿ ಕ್ಷಣ ಕಣ್ಣೀರು ಹಾಕುವಂತೆ ಮಾಡಿದರು.
– ಕುಮಾರಸ್ವಾಮಿಯವರ ಚರಿತ್ರೆಯೇ ಹಾಗೆ. ನಂಬಿದವರನ್ನು ಮುಗಿಸೋದು, ಅಧಿಕಾರದ ತೀಟೆ ತೀರಿಸಿಕೊಂಡು, ಅದಕ್ಕೆ ಸಹಕಾರ ನೀಡಿದವರನ್ನು ಬೀದಿಪಾಲು ಮಾಡಿ, ನಯವಂಚಕತನಕ್ಕೆ ಶರಣಾಗುವುದು. ಬಿಜೆಪಿ ಜತೆಗೆ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರದ ತೀಟೆ ತೀರಿಸಿಕೊಂಡು ರೈತರ ಬಗ್ಗೆ ಒಣ ಪ್ರತಾಪ ತೋರಿಸಿದರು.

ಎಚ್‌.ಡಿ.ಕುಮಾರಸ್ವಾಮಿ
–  ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಕೊಟ್ಟಿಲ್ಲ. ಬಿಜೆಪಿಯವರು ನಮಗೆ ಬಹುಮತ ಇದೆ ಎನ್ನುತ್ತಾರೆ. ಅದನ್ನು ಅವರು ಯಾವ ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ ಎಂಬುದು ಅರ್ಥ ಆಗು‌ತ್ತಿಲ್ಲ.
– ಸರ್ಕಾರ ರಚನೆ ವೇಳೆ ನನಗೂ ಯಡಿಯೂರಪ್ಪ ಅವರಿಗೂ ಒಪ್ಪಂದವಾಗಿತ್ತೇ ಹೊರತು ಬಿಜೆಪಿ ಜತೆ ಆಗಿರಲಿಲ್ಲ. ಆದರೂ 20 ತಿಂಗಳ ನಂತರ ದೆಹಲಿಯಿಂದ ಬಿಜೆಪಿ ನಾಯಕರು ಬಂದು ದೇವೇಗೌಡರ ಜತೆ ಸೇರಿ ಷರತ್ತುಗಳಿಗೆ ಸಹಿ ಹಾಕಿ ಎಂದರು.
– ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಯಡಿಯೂರಪ್ಪ, ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ಬಂದು ಸರ್ಕಾರ ರಚನೆ ಮಾಡಿ ನಂತರ ಎಲ್ಲರೂ ಜನತಾ ಪರಿವಾರದಲ್ಲಿ ಒಗ್ಗೂಡೋಣ ಎಂದೂ ಸಲಹೆ ನೀಡಿದ್ದರು. ವಿನಾ ಕಾರಣ ನನ್ನ ಮೇಲೆ ವಿಶ್ವಾಸ ದ್ರೋಹದ ಆರೋಪ ಮಾಡಿ ಅಧಿಕಾರ ಬಿಟ್ಟು ಹೋದರು ಎಂದರು.
– ನಾನು ಬಿಜೆಪಿ ಜತೆ ಹೋದರೆ ಕುಟುಂಬದಿಂದ ಬಹಿಷ್ಕಾರ ಹಾಕುವುದಾಗಿ ಹೇಳಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ದೇವೇಗೌಡರ ಬಗ್ಗೆ 2006ರಲ್ಲಿ ಬಿಜೆಪಿ ಜತೆ ಹೋಗಿ ನಾನೇ ಅವರ ಬಗ್ಗೆ ಅಪನಂಬಿಕೆ ಉಂಟಾಗುವಂತೆ ಮಾಡಿದ್ದೆ. ಅದು ತಪ್ಪು ಎಂದು ಹೇಳುತ್ತಿಲ್ಲ. ಪಕ್ಷ ಉಳಿಸಿಕೊಳ್ಳಲು ಆ ನಿರ್ಧಾರ ಅನಿವಾರ್ಯವಾಗಿತ್ತು. ಆದರೆ, ಅದನ್ನು ಸರಿಪಡಿಸಲು ಮಾನಸಿಕವಾಗಿ ಸಿದ್ಧನಾಗಿದ್ದೆ.
– ಕಾಂಗ್ರೆಸ್‌ನವರು ನನಗೆ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆಡಳಿತ ನೀಡುತ್ತೇನೆ ಎಂದು ಜನರಿಗೆ ಭರವಸೆ ಕೊಡುತ್ತೇನೆ. ಇನ್ನು ರಾಜಕೀಯ ನಿಲ್ಲಿಸೋಣ, ಅಭಿವೃದ್ಧಿ ಬಗ್ಗೆ ಗಮನ ಕೊಡೋಣ. ಪ3ತಿಪಕ್ಷಗಳ ಜತೆ ಕೈಜೋಡಿಸಿ ನಾನು ಕೆಲಸ ಮಾಡುತ್ತೇನೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಸಂವಿಧಾನದ ಆಶಯದಂತೆ ಆಡಳಿತಕ್ಕೆ ಹೊಸ ವ್ಯಾಖ್ಯಾನ ನೀಡೋಣ.
– ಇದೆಲ್ಲವೂ ವಿಧಿಯಾಟವಾಗಿದೆ. ಈ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಇದು ನಗುವ ವಿಷಯವೂ ಅಲ್ಲ. ಈಗ ಕಾಂಗ್ರೆಸ್‌ನವರೊಂದಿಗೆ ಕೈಜೋಡಿಸಿದ್ದಕ್ಕೆ ಕೆಲವರು ಏನೇನೋ ಹೇಳುತ್ತಿದ್ದಾರೆ. ಅವರಪ್ಪನಾಣೆ ಹಾಕಿದವರೊಂದಿಗೆ ಹೋಗುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next