Advertisement

ಮಾರ್ಗಸೂಚಿಗೆ “ಕುಮಾರಾಕ್ಷೇಪ’​​​​​​​

06:00 AM Jun 19, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಎರಡು ಮಾರ್ಗಸೂಚಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸತ್ತಿನಲ್ಲಿ ಈ ಎರಡು ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕು ಎಂಬ ಕೋರಿಕೆಯೊಂದಿಗೆ, ಪ್ರಾಧಿಕಾರಕ್ಕೆ ಸಮ್ಮತಿ ಸೂಚಿಸಿದ್ದಾರೆ.

Advertisement

ಕಾವೇರಿ ಪ್ರಾಧಿಕಾರಕ್ಕೆ ಸಂಬಂಧಿಸಿ ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ, ಕಾವೇರಿ ಕೊಳ್ಳದ ರಾಜ್ಯದ ಜಲಾಶಯಗಳಲ್ಲಿ ಪ್ರತಿ 10 ದಿನಕ್ಕೊಮ್ಮೆ ನೀರಿನ ಅಳತೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ಮತ್ತು ರಾಜ್ಯದಲ್ಲಿ ಯಾವ ಬೆಳೆ ತೆಗೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ ಎಂಬ ಎರಡು ಮಾರ್ಗಸೂಚಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರ ರಚನೆ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆದರೆ, ಅಂತಾರಾಜ್ಯ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳುವುದಾದರೂ ಅದು ಸಂಸತ್ತಿನಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕು. ಆದ್ದರಿಂದ, ಗೆಜೆಟ್‌ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಮತ್ತು ರಾಜ್ಯಕ್ಕೆ ಮಾರಕವಾಗಿರುವ ಎರಡು ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕು ಎಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೂಂದು ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಪ್ರಾಧಿಕಾರಕ್ಕೆ ಎರಡು ಹೆಸರುಗಳನ್ನು ರಾಜ್ಯ ಸರ್ಕಾರ ಕೊಡಬೇಕಿದ್ದು, ಅದನ್ನು ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸಂಬಂಧಿಸಿ ಸಚಿವ ನಿತಿನ್‌ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಗಿದೆ. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯಲ್ಲಿ ಇರುವ ಅವೈಜ್ಞಾನಿಕ ಮಾರ್ಗಸೂಚಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದರು.

Advertisement

ಪ್ರಾಧಿಕಾರಕ್ಕೆ ಹೆಸರು ಸೂಚಿಸುತ್ತೇವೆ:
ಪ್ರಾಧಿಕಾರಕ್ಕೆ ಎರಡು ಹೆಸರು ನೀಡುವಂತೆ ಪ್ರಧಾನಿ ಹೇಳಿದ್ದಾರೆ. ಹೆಸರು ಕೊಡುತ್ತೇವೆ. ಆದರೆ, ಗೆಜೆಟ್‌ ಅಧಿಸೂಚನೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಈ ವೇಳೆ ಅಧಿಸೂಚನೆಯಲ್ಲಿ ಬದಲಾವಣೆ ಮಾಡುವ ತೀರ್ಮಾನವೂ ಹೊರಬೀಳಬಹುದು. ಆದ್ದರಿಂದ ಸಂಸತ್ತಿನ ತೀರ್ಮಾನಕ್ಕೆ ಒಳಪಟ್ಟಂತೆ ಎಂಬ ಷರತ್ತಿಗೊಳಪಟ್ಟು ಸುಪ್ರೀಂ ಕೋರ್ಟ್‌ ತೀರ್ಪಿಗೆ ಗೌರವಿಸುತ್ತೇವೆ ಎಂದು ಪ್ರಧಾನಿಯವರಿಗೆ ಹೇಳಿದ್ದೇನೆ. ಸಮಸ್ಯೆಗಳ ಬಗ್ಗೆ ಸಭೆ ಕರೆಸಿ ಚರ್ಚಿಸುವುದಾಗಿ ಪ್ರಧಾನಿಯವರೂ ಭರವಸೆ ನೀಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಕಾನುನು ತಜ್ಞರು ಮತ್ತು ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ರೈತರ ಸಾಲ ಮನ್ನಾಕ್ಕೆ ಮೀಸಲಿಡಿ:
ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಪರಿಸ್ಥಿತಿ ಸುಧಾರಿಸಲು 2 ಲಕ್ಷ ಕೋಟಿ ರೂ. ಬಾಂಡ್‌ ಬಿಡುಗಡೆ ಮಾಡುವ ವೇಳೆ ಆ ಮೊತ್ತದಲ್ಲಿ ಒಂದು ಭಾಗವನ್ನು ರೈತರ ಸಾಲ ಮನ್ನಾಕ್ಕೆ ಮೀಸಲಿಡಸು ಸೂಚಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ತಮ್ಮ ಸ್ಕಷ್ಟ ಪರಿಸ್ಥಿತಿಯಿಂದ ಹೊರಬರಲು 2 ಲಕ್ಷ ಕೋಟಿ ರೂ. ಮೊತ್ತದ ಬಾಂಡ್‌ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ವೇಳೆ ಒಂದು ಭಾಗವನ್ನು ರೈತರ ಸಾಲ ಮನ್ನಾ ಯೋಜನೆಗೆ ನೆರವು ನೀಡಲು ಮೀಸಲಿಡುವಂತೆ ಕೋರಿದ್ದೇನೆ ಎಂದು ಹೇಳಿದರು. ನಮ್ಮೆಲ್ಲಾ ಕೋರಿಕೆಗಳ ಬಗ್ಗೆಯೂ ಪ್ರಧಾನಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕು ಎಂದರು.

ದೇವೇಗೌಡರು ನೀರಾವರಿ ಎನ್‌ಸೈಕ್ಲೋಪೀಡಿಯಾ
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ನೀರಾವರಿಯ ಎನ್‌ಸೈಕ್ಲೋಪೀಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಆರು ತಿಂಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜತೆ ಇದೇ ವಿಚಾರ ಚರ್ಚಿಸಿದ್ದೇನೆ. ಅವರು ನೀರಾವರಿಯ ಎನ್‌ಸೈಕ್ಲೋಪೀಡಿಯಾ. ಎಲ್ಲಾ ಮಾಹಿತಿಗಗಳು ಅವರ ಬೆರಳ ತುದಿಯಲ್ಲೇ ಇರುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ. ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಪ್ರಧಾನಿಯವರು ಗೌರವ ಹೊಂದಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next