Advertisement
ರಾಜ್ಯ ಸರ್ಕಾರ ಬಿಬಿಎಂಪಿಗೆ 7300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಮೊದಲಿಗೆ ನಗರದ ಎಂ.ಜಿ. ರಸ್ತೆಯಲ್ಲಿ ಪಾದಚಾರಿ ಮೇಲ್ದರ್ಜೆ ಕಾಮಗಾರಿ ವೀಕ್ಷಿಸಿದ ಅವರು, ಪಾದಚಾರಿ ಮಾರ್ಗದ ಮಧ್ಯೆ ಅಲ್ಲಲ್ಲಿ ಗಿಡ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದೇ ಮಾರ್ಗದಲ್ಲಿರುವ ಕಾವೇರಿ ಎಂಪೋರಿಯಂ ಕರಕುಶಲ ವಸ್ತುಗಳ ಮಳಿಗೆಗೆ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿದರು.
ಇದಕ್ಕೆ ಉತ್ತರಿಸಿದ ಕೆ.ಟಿ.ನಾಗರಾಜ್, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಮುಖ್ಯಮಂತ್ರಿಗಳು ತಿಂಗಳು ಬೇಡ ಮರಾಯ, ಮೂರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.
Related Articles
Advertisement
ಪ್ರದಕ್ಷಿಣೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರಾದ ಎನ್.ಎ.ಹ್ಯಾರೀಸ್, ಬಿ.ಎನ್.ವಿಜಯ್‌ಕುಮಾರ್, ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಎಂ.ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಉಚಿತ ಮನೆ ನಿರ್ಮಾಣಕೋರಮಂಗಲದ ರಾಜೇಂದ್ರನಗರ ಕೊಳೆಗೇರಿ ಜನತೆಗೆ ಉಚಿತ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ ಅವರು, ನಗರದಲ್ಲಿ ಒಟ್ಟು 18 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ ರಾಜೇಂದ್ರ ನಗರ ಭಾಗದಲ್ಲಿ 625 ಮನೆಗಳನ್ನು ನಿರ್ಮಿಸುವ ಯೋಜನೆ ಚಾಲನೆ ನೀಡಲಾಗಿದೆ. ಮನೆ ನಿರ್ಮಾಣಕ್ಕೆ 4.50 ಲಕ್ಷ ರೂ.ಗಳನ್ನು ಸರ್ಕಾರ ನೀಡಲಾಗುತ್ತಿದ್ದು, ರಾಮಲಿಂಗಾರೆಡ್ಡಿ ಅವರ ಮನವಿಯಂತೆ ಉಳಿದ 50 ಸಾವಿರ ಮೊತ್ತವನ್ನು ಬಿಬಿಎಂಪಿ ಭರಿಸಲಿದೆ ಎಂದು ತಿಳಿಸಿದರು. ಉಳಿಕೆ ಅನುದಾನ ಕೆರೆ ಅಭಿವೃದ್ಧಿಗೆ ಬಳಸಿ
ಅಲ್ಲಿಂದ ಪಾಲಿಕೆಯಿಂದ ಅಭಿವೃದ್ದಿಪಡಿಸಲಾಗುತ್ತಿರುವ ಮೇಸಿಪಾಳ್ಯ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು, ಪಾಲಿಕೆಯಿಂದ ಕೆರೆಯ ಅಭಿವೃದ್ಧಿಗೆ 7 ಕೋಟಿ ರೂ. ಮೀಸಲಿಡಲಾಗಿದೆ. ಆ ಪೈಕಿ 3 ಕೋಟಿ ಉದ್ಯಾನ ಅಭಿವೃದ್ಧಿಗೆ ಖರ್ಚಾಗಿದೆ. ಉಳಿದ 4 ಕೋಟಿ ರೂ.ಗಳನ್ನು ಸಮೀಪದ ಕೆರೆ ಅಭಿವೃದ್ಧಿಗೆ ಬಳಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಒಪ್ಪಿದ ಮುಖ್ಯಮಂತ್ರಿಗಳು ಕೆರೆಯನ್ನ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒತ್ತುವರಿ ತೆರವು ಜಾಗದಲ್ಲಿ ಪಾರ್ಕ್
ನಗರ ಜಿಲ್ಲಾಡಳಿತ ಎಚ್‌ಎಸ್‌ಆರ್ ಬಡಾವಣೆಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ತೆರುವುಗೊಳಿಸದ ಜಾಗಕ್ಕೆ ಒಂದೂವರೆ ವರ್ಷದ ಹಿಂದೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಅಂದಿನ ಬಿಡಿಎ ಆಯುಕ್ತರಿಗೆ ಜಾಗವನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸುವಂತೆ ಆದೇಶಿಸಿದ್ದರು. ಅದರಂತೆ ಜಾಗವನ್ನು ಅಭಿವೃದ್ಧಿಪಡಿಸಿ ಗಿಡಗಳು, ಕಲ್ಯಾಣಗಳು ಹಾಗೂ ಧ್ಯಾನ ಮಂದಿರಗಳನ್ನು ನಿರ್ಮಿಸಲಾಗಿದೆ. ನವೆಂಬರ್ ವೇಳೆಗೆ ಉದ್ಯಾನ ಲೋಕಾರ್ಪಣೆಗೊಳಿಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅನ್ನ-ನೀರು-ವಸತಿ ಕೊಟ್ಟವ್ರ ಮರಿತೀರಾ?
ಕೋರಮಂಗಲದ ರಾಜೇಂದ್ರನಗರ ಕೊಳೆಗೇರಿಗೆ ಭೇಟಿ ನೀಡಿ ಉಚಿತ ವಸತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿಗಳು, ಸರ್ಕಾರದ ವತಿಯಿಂದ ಬಡವರಿಗೆ ಅನ್ನಭಾಗ್ಯ, ಉಚಿತ ಮನೆ ಹಾಗೂ ಕೊಳೆಗೇರಿಗಳ ಜನರಿಗೆ ಉಚಿತವಾಗಿ ನೀರು ನೀಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಯೋವೃದ್ಧೆಯೊಬ್ಬರನ್ನು “ಏನು ಅಜ್ಜಿ ನಿಮಗೆ ಅನ್ನ, ನೀರು, ವಸತಿ ಕೊಟ್ಟವ್ರ$° ಮರಿತೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಅಜ್ಜಿ, ಖಂಡಿತ ಇಲ್ಲ ಸ್ವಾಮಿ’ ಎಂದು ಉತ್ತರಿಸಿದರು. ಕಾರ್ಮಿಕರ ಕಷ್ಟ ಆಲಿಸಿದ ಮುಖ್ಯಮಂತ್ರಿಗಳು
ಚರ್ಚ್‌ಸ್ಟ್ರೀಟ್‌ನಲ್ಲಿ ಪಾದಚಾರಿ ಕಾಮಗಾರಿ ಪರಿಶೀಲನೆ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕೂಲಿ ಕಾರ್ಮಿಕರನ್ನು ಮುಖ್ಯಮಂತ್ರಿಗಳು, ಎಷ್ಟು ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಅವರು, ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ ಎಂದರು. ಮರು ಪ್ರಶ್ನಿಸಿದ ಮುಖ್ಯಮಂತ್ರಿಗಳು ಊರಲ್ಲಿ ಉಚಿತವಾಗಿ 7 ಕೆ.ಜಿ.ಅಕ್ಕಿ ಸಿಗುತ್ತೇ ಅಲ್ವಾ, ಅಲ್ಲೆ ಕೆಲಸಕ್ಕೆ ಹೋಗೋದು ತಾನೆ ಎಂದಾಗ, ಅಕ್ಕಿ ಕೋಡ್ತೀರಾ ಆದ್ರೆ ಬೇರೆ ಖರ್ಚಿಗೇನು ಮಾಡೋದು ನಮ್ಮೂರಲ್ಲಿ ಕೂಲಿ ಕಡಿಮೆ ಎಂದರು. ಅದಕ್ಕೆ ಮುಖ್ಯಮಂತ್ರಿಗಳು, ಇಲ್ಲಿ ಎಷ್ಟು ಕೂಲಿ ಕೊಡ್ತಾರೆ, ಎಲ್ಲಿ ಉಳಿದುಕೊಂಡಿದ್ದೀರಾ ಎಂದಾಗ, ಜೋಡಿಗೆ ದಿನಕ್ಕೆ 600 ರೂ. ಕೂಲಿ ಕೊಡ್ತಾರೆ ಎಂದು ಕಾರ್ಮಿಕರು ತಿಳಿಸಿದರು. ನೀವು ಯಾರ ಊರಿನವರು ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ ಅವರಲ್ಲಿ ಒಬ್ಬರು ಬಳ್ಳಾರಿ ಎಂದಾಗ, ಬಳ್ಳಾರಿನಾ ಎಂದು ಉದ್ಗರಿಸಿ ನಗುತ್ತಾ ಮುಂದೆ ನಡೆದರು. ಅಧಿಕಾರಿ ಅಮಾನತು
ಎಚ್‌ಎಸ್‌ಆರ್ ಬಡಾವಣೆಯ ಉದ್ಯಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಅವರು, ಈ ಭಾಗದಲ್ಲಿ ನಕ್ಷೆ, ಸೆಟ್‌ಬ್ಯಾಕ್ ಹಾಗೂ ನಿಯಮ ಬಾಹಿರವಾಗಿ ಅಂತಸ್ತುಗಳನ್ನು ಹೆಚ್ಚಿಗೆ ಕಟ್ಟಿದ್ದಾರೆ ಇದೆಲ್ಲ ಗೊತ್ತಿದ್ದರೂ, ಇಲ್ಲಿನ ಅಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು. ಈ ವೇಳೆ ಅಧಿಕಾರಿಯನ್ನು ಕರೆಸಿದ ಮುಖ್ಯಮಂತ್ರಿಗಳು, “ನಿಯಮ ಉಲ್ಲಂಘನೆ ತಡೆಯುವುದು ನಿನ್ನ ಕರ್ತವ್ಯ ಅಲ್ಲೆನಪ್ಪಾ…ಮತ್ಯಾಕೆ ಕ್ರಮಕೈಗೊಳ್ಳಲಿಲ್ಲ… ಹೋಗಿ ನಿನ್ನ ಸಸ್ಪೆಂಡ್ ಮಾಡಿದ್ದೀನಿ” ಎಂದು ಹೇಳಿ ಆಯುಕ್ತರಿಗೆ ಅಮಾನತುಗೊಳಿಸುವಂತೆ ಆದೇಶಿಸಿದರು. ವಯಸ್ಸು ಎಂಬತ್ತಾದರೂ ಹೀಗೆ ಇರ್ತಾರೆ
ಕಾವೇರಿ ಎಂಪೋರಿಯಂ ಕರಕುಶಲ ಮಳಿಗೆಗೆ ಭೇಟಿ ನೀಡಿದ ವೇಳೆ ಶಾಸಕ ಹ್ಯಾರೀಸ್ ಅವರು ಊರುಗೋಲಿನಲ್ಲಿ ಕಲಾಕೃತಿಯನ್ನು ಮಾಡಿರುವುದು ಮುಖ್ಯಮಂತ್ರಿಗಳಿಗೆ ತೋರಿಸಿದರು. ಈ ವೇಳೆ ಅಲ್ಲಿದ್ದ ಉಗ್ರಪ್ಪ, ಮುಖ್ಯಮಂತ್ರಿಗಳಿಗೆ ಅರವತ್ತಾದರೂ ಅದರ ಅವಶ್ಯಕತೆಯಿಲ್ಲ ಎಂದರು. ಇದಕ್ಕೆ ಮರು ಉತ್ತರಿಸಿದ ಹ್ಯಾರೀಸ್ ಅವರಿಗೆ ಎಂಬತ್ತಾದರೂ ಅವರು ಹೀಗೆ ಇರ್ತಾರೆ ಎಂದಾಗ, ಮುಖ್ಯಮಂತ್ರಿಗಳು ಮುಗುಳ್ನಕ್ಕು ಮುಂದೆ ನಡೆದರು.