ಚಿತ್ತಾಪುರ: ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿದ್ದ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸುವಲ್ಲಿ ಮಾಜಿ ಸಚಿವ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರ ಪಾತ್ರ ಪ್ರಮುಖವಾಗಿದೆ ಎಂದು ನಿಗಮದ ನಿರ್ದೇಶಕ ಶರಣಪ್ಪ ನಾಟೀಕಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 60 ಲಕ್ಷ ಕೋಲಿ ಸಮಾಜದ ಏಕೈಕ ನಾಯಕ, ಕೇಂದ್ರ ಸಚಿವರ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಬಳಿ ನೇರವಾಗಿ ಹೋಗಿ ಭೇಟಿ ಮಾಡಿ ಮಾತನಾಡುವ ಚಿಂಚನಸೂರ ಅವರ ಅವಿರತ ಶ್ರಮದಿಂದ ಇಂದು ಸಮಾಜಕ್ಕೆ ನ್ಯಾಯ ಸಿಕ್ಕಿದೆ ಎಂದರು.
ಸಿಂದಗಿ ಉಪ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತು ಕೊಟ್ಟಂತೆ ಪ್ರಸ್ತುತ ಪರಿವಾರ, ತಳವಾರ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿರುವುದು ಇಡೀ ಕೋಲಿ ಸಮಾಜದ ಜನರ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ ಈ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ವೀರಪ್ಪ ಮೋಯ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೋಲಿ ಸಮಾಜವನ್ನು ಪ್ರವರ್ಗ-1ಕ್ಕೆ ಸೇರಿಸಿದ ಬಾಬುರಾವ್ ಚಿಂಚನಸೂರ ಅವರು ಪ್ರಸ್ತುತ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಸಮಾಜಕ್ಕೆ ನ್ಯಾಯ ಕೊಡಿಸಿದ್ದಾರೆ. ಹೀಗಾಗಿ ಸಮುದಾಯದವರು ಬಾಬುರಾವ್ ಚಿಂಚನಸೂರ ಮತ್ತು ಅವರ ಧರ್ಮಪತ್ನಿ ಅಮರೇಶ್ವರಿ ಚಿಂಚನಸೂರ ಅವರ ಭಾವಚಿತ್ರಗಳನ್ನು ಮನೆಯಲ್ಲಿಟ್ಟು ಎಲ್ಲರೂ ಪೂಜಿಸಬೇಕಿದೆ ಎಂದರು.
ಕೋಲಿ, ಕಬ್ಬಲಿಗಾ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಬಾಬುರಾವ್ ಚಿಂಚನಸೂರ ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಲಬುರಗಿ ಸಂಸದ ಡಾ|ಉಮೇಶ ಜಾಧವ ಅವರ ಮೂಲಕ ಕೇಂದ್ರದ ಸಚಿವರಾದ ಅರ್ಜುನ ಮುಂಡಾ, ಸಾದ್ವಿ ನಿರಂಜನ ಜ್ಯೋತಿ ಅವರಿಗೆ ಭೇಟಿ ಮಾಡಿ ಪ್ರಸ್ತಾವನೆ ವರದಿ ಸಲ್ಲಿಸಲಾಗಿದೆ. ಬರುವ ದಿನಗಳಲ್ಲಿ ಲೋಕಸಭಾ ಸ್ಪೀಕರ್ ಅವರ ಮೂಲಕ ಪ್ರಧಾನಿ ಅವರಿಗೆ ವರದಿ ಸಲ್ಲಿಸಲಾಗುವುದು. ಹೀಗಾಗಿ ಕೆಲವೇ ದಿನಗಳಲ್ಲಿ ಕೋಲಿ, ಕಬ್ಬಲಿಗಾ ಜಾತಿಗಳು ಸಹ ಎಸ್‌ಟಿ ಪಟ್ಟಿಗೆ ಸೇರ್ಪಡೆಯಾಗುವುದಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಸಾಬಣ್ಣ ಡಿಗ್ಗಿ, ಮಲಯ್ಯ ಮುತ್ಯಾ, ಮುರುಗೇಂದ್ರ ಭಜಂತ್ರಿ, ಕಾಶಿನಾಥ ಕಾಸಲ್, ಶ್ರೀಮಂತ ಗಮಗಾ, ಶಿವಕುಮಾರ ವಿಜಾಪುರಕರ್ ಇದ್ದರು.
ಬಾಬುರಾವ್ ಚಿಂಚನಸೂರ ಅವರಿಗೆ ಅವರಿಗೆ ಕೋಲಿ ಸಮಾಜವೇ ಆಸ್ತಿ, ಜನರೇ ದೇವರು ಎಂದು ಭಾವಿಸಿಕೊಂಡು ತಮ್ಮ ಇಡೀ ಜೀವನ ಸರ್ವಸ್ವವನ್ನೇ ಕೋಲಿ ಸಮಾಜದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೆ.
-ಶರಣಪ್ಪ ನಾಟೀಕಾರ ನಿರ್ದೇಶಕರು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ.