ಉಡುಪಿ: ಕರಾವಳಿಯ ಉದ್ದಕ್ಕೂ ಮಳೆಗಾಲದಲ್ಲಿ ಕಡಲ್ಕೊರೆತದ್ದೇ ಕೂಗು. ಪ್ರತೀ ವರ್ಷವೂ ಕಡಲ್ಕೊರೆತ ತಡೆಗೆ ವೈಜ್ಞಾನಿಕ ವಿಧಾನ ಅಳವಡಿಸದೆ ತಾತ್ಕಾಲಿಕ ಪರಿಹಾರವಾಗಿ ಕಲ್ಲು ಹಾಕಲಾಗುತ್ತದೆ. ಮುಂದಿನ ವರ್ಷ ಮತ್ತೆ ಕಡಲ್ಕೊರೆತ ಉಂಟಾಗಿರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು. ಮಳೆಹಾನಿ ಪ್ರದೇಶದ ಪರಿಶೀಲನೆಗಾಗಿ ಉಡುಪಿ, ದ.ಕ. ಮತ್ತು ಉ.ಕ.ಜಿಲ್ಲೆಗೆ ಮಂಗಳವಾರ ಮತ್ತು ಬುಧವಾರ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಯವರು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ಘೋಷಿಸಬೇಕಿದೆ.
ಈಗಾಗಲೇ ಮೂರು ಜಿಲ್ಲೆಯ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಈ ಸಂಬಂಧ ವರದಿ ಪಡೆದು ಸಿಎಂಗೆ ಸಲ್ಲಿಸಿದ್ದಾರೆ.
ಜತೆಗೆ ಅವರನ್ನು ಭೇಟಿ ಮಾಡಿ ಕಡಲ್ಕೊರೆತದ ಗಂಭೀರತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯವರು ವಿಶೇಷ ಅನುದಾನ ಅಥವಾ ಪ್ಯಾಕೇಜ್ ಘೋಷಣೆ ಮಾಡುತ್ತಾರೆ ಎನ್ನುವುದು ಕರಾವಳಿಯ ಜನರ ನಿರೀಕ್ಷೆಯೂ ಆಗಿದೆ.
ಕರಾವಳಿಯ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಬಹುತೇಕ ಕೃಷಿ ಭೂಮಿ ಜಲಾವೃತಗೊಂಡಿದೆ. ಈಗಾಗಲೇ ರೈತರು ಭತ್ತ ಬಿತ್ತನೆ ಮಾಡಿದ್ದು, ಅದು ಸಂಪೂರ್ಣ ನಾಶವಾಗುವ ಸಾಧ್ಯತೆಯೂ ಇದೆ. ನಿರಂತರ ಮಳೆ ಬರುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಅವರ ಹಿತ ಕಾಯುವ ಪ್ರಮುಖ ನಿರ್ಧಾರವನ್ನು ಸಿಎಂ ಘೋಷಿಸಬೇಕಿದೆ ಅಥವಾ ಬೆಳೆಹಾನಿ ನಷ್ಟವನ್ನು ಇನ್ನಷ್ಟು ಪರಿಷ್ಕರಿಸಿ, ಶೀಘ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ರೈತರ ಬೇಡಿಕೆಯಾಗಿದೆ.
ಅಪಾರ ಬೆಳೆ ನಾಶ, ಮನೆಗಳಿಗೆ ಹಾನಿ
ಮಹಾಮಳೆಯಿಂದ ಹಲವು ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು ಅನೇಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭತ್ತದ ಜತೆಗೆ ಅಡಿಕೆ, ತೆಂಗು ಸಹಿತ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಇದೆಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತಾಗಬೇಕು. ಆಗ ಮಾತ್ರ ನಷ್ಟ ಅನುಭವಿಸುತ್ತಿರುವ ರೈತರು, ಸಾರ್ವಜನಿಕರು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯವಿದೆ.