Advertisement

ನವಕರ್ನಾಟಕದ ಉದಯವಾಗಲಿ; ಅಭಿನಂದನೆ ಸ್ವೀಕರಿಸಿ: ಸಿಎಂ ಬೊಮ್ಮಾಯಿ ಹಾರೈಕೆ

01:40 AM Apr 12, 2022 | Team Udayavani |

ಮಣಿಪಾಲ: ಐದು ದಶಕ ಕಾಲ ಪತ್ರಿಕೆಯೊಂದನ್ನು ನಡೆಸುವುದು ಸುಲಭವಲ್ಲ. ಬದ್ಧತೆ, ಏಕಾಗ್ರತೆಯಿಂದ ಮಾತ್ರ ಇದು ಸಾಧ್ಯ. ಇದರಿಂದಲೇ ಓದುಗರಲ್ಲಿ ವಿಶ್ವಾಸ ಬೆಳೆಯುತ್ತದೆ. ಉದಯವಾಣಿಯಿಂದ ನವಕರ್ನಾಟಕದ ಉದಯವಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದರು.

Advertisement

ಸಿಎಂ ಆದ ಬಳಿಕ 3ನೇ ಬಾರಿಗೆ ಸೋಮವಾರ ಉಡುಪಿ ಜಿಲ್ಲೆಗೆ ಆಗಮಿಸಿದ ಬೊಮ್ಮಾಯಿಯವರು “ಉದಯವಾಣಿ’ಯ ಮಣಿಪಾಲದ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಪತ್ರಿಕಾಲಯದ ವತಿಯಿಂದ ಅವರನ್ನು ಅಭಿನಂದಿಸಲಾಯಿತು.

ವಿಶಿಷ್ಟ ವಿಶ್ಲೇಷಣೆ
ಉದಯವಾಣಿಯು ಈ ಭಾಗದ ಜನರ ಧ್ವನಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದೆ. ಕರಾವಳಿ ಕರ್ನಾಟಕದಿಂದ ಆರಂಭವಾಗಿ ರಾಜ್ಯಾದ್ಯಂತ ಮನೆಯ- ಮನದ ಮಾತಾಗಿ ಬೆಳೆದಿದೆ. ಈ ಪತ್ರಿಕೆಯ ವಿಶ್ಲೇಷಣೆಯು ವಿಶಿಷ್ಟವಾಗಿರುತ್ತದೆ ಎಂದು ಅಭಿನಂದನೆ ಸ್ವೀಕರಿಸಿದ ಬೊಮ್ಮಾಯಿ ಹೇಳಿದರು.

ಪರ-ವಿರೋಧವಿಲ್ಲದ ಹಿರಿಮೆ
ಉದಯವಾಣಿಯು ವಸ್ತುನಿಷ್ಠ ವರದಿಗೆ ಹೆಸರು ಪಡೆದಿದೆ. ಈಗ ಹಲವು ಪತ್ರಿಕೆಗಳಿದ್ದು ಓದುಗರಿಗೆ ಆಯ್ಕೆ ಅವಕಾಶವಿದೆ. ಓದುಗನೂ ಅವಲೋಕನ ಮಾಡುತ್ತಾನೆ. ಯಾವುದೇ ಪರ-ವಿರೋಧವಿಲ್ಲದೆ ವಸ್ತುನಿಷ್ಠ ವಿಮರ್ಶೆಯೇ ಉದಯವಾಣಿಯ ಹಿರಿಮೆಯಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ವಿಶ್ವಾಸಾರ್ಹತೆ-ಸ್ವೀಕಾರಾರ್ಹತೆ
ಪತ್ರಿಕೆಗಳು ಸದಾ ಸತ್ಯವನ್ನು ಹೇಳಬೇಕು. ಇದರಿಂದ ರಾಜ್ಯಕ್ಕೆ, ಸಮುದಾಯಕ್ಕೆ ಒಳಿತಾಗಬೇಕೆಂಬ ಹಂಬಲ ಇರಬೇಕು. ಇಂತಹ ಸಂದರ್ಭದಲ್ಲಿಯೇ ಪತ್ರಿಕೆಯೊಂದು ವಿಭಿನ್ನವಾಗಿ ಬೆಳೆಯುತ್ತದೆ. ದೊಡ್ಡಪ್ರಮಾಣದ ಓದುಗ ವರ್ಗದ ವಿಶ್ವಾಸಾರ್ಹತೆ, ಸ್ವೀಕಾರಾರ್ಹತೆಯು ಉದಯವಾಣಿಯ ಶಕ್ತಿಯಾಗಿದೆ ಎಂದರು.

Advertisement

ರಾಜಕಾರಣಿ-ಮಾಧ್ಯಮಗಳ ಸಂಬಂಧ
ರಾಜಕಾರಣಿಗಳು ಮತ್ತು ಮಾಧ್ಯಮಗಳಿಗೆ ಅವಿನಾಭಾವ ಸಂಬಂಧವಿದೆ. ಪತ್ರಿಕೆಗಳ ವಿಶ್ಲೇಷಣೆಗಳನ್ನು, ಟೀಕೆಗಳನ್ನು ರಾಜಕಾರಣಿಗಳು ಸಹಿಷ್ಣುತೆಯಿಂದ ಸ್ವೀಕರಿಸಬೇಕು. ಅದೇ ರೀತಿ ಪತ್ರಿಕೆಗಳಿಗೂ ರಾಜಕಾರಣಿಗಳು ಅಗತ್ಯ. ರಾಜಕೀಯ ಸುದ್ದಿಗಳಿಲ್ಲದೆ ಒಂದು ದಿನವಾದರೂ ಪತ್ರಿಕೆಗಳು ಹೊರಬರುವುದು ಸಾಧ್ಯವೆ? ಆದರೆ ಇದು ಉತ್ತಮ ಸಂಬಂಧವಾಗಿರಬೇಕು. ಉತ್ತಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದು ಸಿಎಂ ಅಭಿಪ್ರಾಯಪಟ್ಟರು.

ಮಾರ್ಗದರ್ಶಿ ಮಾಧ್ಯಮ
“ಉದಯವಾಣಿ’ ಕೇವಲ ಸುದ್ದಿ ಕೊಡುವ ಮಾಧ್ಯಮವಾಗಿರದೆ, ಮಾರ್ಗದರ್ಶನ ಮಾಡುವ ಮಾಧ್ಯಮ.ನಾವು ಆಡಳಿತ ನಡೆಸುವಾಗಲೂ “ಉದಯ ವಾಣಿ’ಯ ವಿಶ್ಲೇಷಣೆಗೆ ಮಾನ್ಯತೆ ನೀಡಿದ್ದೇವೆ ಎಂದರು. ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, ಮಣಿಪಾಲ್‌ ಟೆಕ್ನಾಲಜೀಸ್‌ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್‌ ಎಸ್‌. ಪೈ, ಎಂಎಂಎನ್‌ಎಲ್‌ನ ಎಂಡಿ  ಮತ್ತು ಸಿಇಒ ವಿನೋದ್‌ ಕುಮಾರ್‌ ಅವರು ಮುಖ್ಯಮಂತ್ರಿಗಳನ್ನು ಗೌರವಿಸಿದರು. ಸಚಿವ ವಿ. ಸುನಿಲ್‌ಕುಮಾರ್‌, ಶಾಸಕ ಕೆ.ರಘುಪತಿ ಭಟ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗ್ಡೆ, ಡಿಸಿ ಕೂರ್ಮಾರಾವ್‌,ಜಿಪಂ ಸಿಇಒ ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ತಹಶೀಲ್ದಾರ್‌ ಅರ್ಚನಾ, ಸಿಎಂ ಮಾಧ್ಯಮ ಕಾರ್ಯದರ್ಶಿ ಗುರುಲಿಂಗ ಸ್ವಾಮಿ  ಹಾಜರಿದ್ದರು.

ಅಕ್ಕ ಪ್ರಶಸ್ತಿಯ ಸ್ಮರಣೆ
“ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮಾತನಾಡಿ, ಬಸವರಾಜ ಬೊಮ್ಮಾಯಿಯವರ ತಾಯಿಯ ಹೆಸರಿನಲ್ಲಿ ಪ್ರತೀ ವರ್ಷ ಕೊಡುವ “ಅಕ್ಕ’ ಪ್ರಶಸ್ತಿಯನ್ನು ತಾನು ಹಿಂದೆ ಪಡೆದಿದ್ದೆ ಎಂದು ಸ್ಮರಿಸಿದರು. ಈಗ ಸಿಎಂ ಆಗಿ “ಉದಯವಾಣಿ’ ಕಚೇರಿಗೆ ಭೇಟಿ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

“ಉದಯವಾಣಿ’-ಗೋವಿಂದಾಚಾರ್ಯರ ಸಂಬಂಧ…
ಡಾ| ಬನ್ನಂಜೆ ಗೋವಿಂದಾಚಾರ್ಯರ ಹೆಸರಿನ ಸಾರ್ವಜನಿಕ ಗ್ರಂಥಾಲಯವನ್ನು ಇಂದು ಉದ್ಘಾಟಿಸಿದ್ದೇವೆ. ಡಾ| ಗೋವಿಂದಆಚಾರ್ಯರು ವಿದ್ವಾಂಸರಾಗಿದ್ದರಲ್ಲದೆ, ಉದಯವಾಣಿಯಲ್ಲೂ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿರುವುದು ವಿಶೇಷವಾಗಿದೆ.ಗೋವಿಂದ ಆಚಾರ್ಯರು ತಮ್ಮ ವಿದ್ವತ್ತಿನಿಂದ ರಾಷ್ಟ್ರ ಮಟ್ಟದಲ್ಲಿ ಪ್ರಭಾವವನ್ನು ಬೀರಿದ್ದಾರೆ. ಇದರಿಂದಾಗಿ “ಉದಯವಾಣಿ’ಯ ಹಿರಿಮೆ ಅರ್ಥವಾಗುತ್ತದೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next