Advertisement

ಚುನಾವಣೆ ಅಷ್ಟೇ ಅಲ್ಲ, ಎಲ್ಲ ರಂಗವೂ ಶುದ್ಧವಾಗಬೇಕು: ಸಿಎಂ

01:36 AM Mar 31, 2022 | Team Udayavani |

ಬೆಂಗಳೂರು: ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ ಚುನಾವಣೆ ಸುಧಾರಣೆಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಸಮಾಜವೂ ಸುಧಾರಣೆಯಾಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಚುನಾವಣೆ ಸುಧಾರಣೆ ಕುರಿತು ಮಾತನಾಡಿದ ಅವರು, ನಮ್ಮ ದೇಶ ಹಲವು ರೀತಿಯ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ.

ತಮಿಳುನಾಡಿನಿಂದ ದೇಶವನ್ನು ನೋಡುವ ದೃಷ್ಠಿಕೋನ ಬೇರೆ ಇದೆ. ಈಶಾನ್ಯ ರಾಜ್ಯಗಳ ದೃಷ್ಠಿಕೋನ ಬೇರೆ ಇದೆ. ಆದರೂ, ಎಲ್ಲರೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಬಂದಿದ್ದೇವೆ. ನಮ್ಮ ದೇಶದ ಜನರಲ್ಲಿ ಒಂದು ಅಂತರ್ಗತ ಶಕ್ತಿ ಇದೆ. ಬೇರೆ ಬೇರೆ ರಾಷ್ಟ್ರಗಳು ಒಂದೇ ರೀತಿಯ ವ್ಯವಸ್ಥೆ ಇದ್ದರೂ, ಪ್ರಜಾಪ್ರಭುತ್ವ ಬುಡಮೇಲಾಗಿದೆ. ನಮ್ಮ ದೇಶದಲ್ಲಿ ಅಧಿಕಾರ ಹಸ್ತಾಂತರ ಶಾಂತಿಯುತವಾಗಿ ನಡೆ ಯುತ್ತದೆ. ಅಮೇರಿಕಾದಂತ ದೇಶದಲ್ಲಿ ಅಧಿಕಾರ ಹಸ್ತಾಂತರವಾಲು ಎಷ್ಟು ಕಷ್ಟವಾಯಿತು ಎನ್ನುವುದನ್ನು ನೋಡಿದ್ದೇವೆ ಎಂದರು.

ಕೋರ್ಟ್‌ ಆದೇಶಗಳಿಂದಲೂ ಪ್ರಜಾಪ್ರಭುತ್ವಕ್ಕೆ ಧಕ್ಕೆ
ಸುಪ್ರೀಂ ಕೋರ್ಟ್‌ನ ಅನೇಕ ಆದೇಶಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ಯಾಗುವಂತಹ ರೀತಿಯಲ್ಲಿ ಬಂದಿವೆ. ಈಗ ತಂತ್ರಜ್ಞಾನ ಬಂದು ಯುವಕರಿಗೆ ಪ್ರತಿಯೊಂದು ಮಾಹಿತಿ ನೇರವಾಗಿಯೇ ಸಿಗುತ್ತದೆ. ಸರಿಯೋ ತಪ್ಪೊ ಜನರು ಎಲ್ಲದರ ಬಗ್ಗೆ ಮಾತನಾಡುವಂತೆ ಇದೆ. ಒಂದು ಹಂತದ ಅನಂತರ ವ್ಯವಸ್ಥೆ ಬದಲಾಗುವ ವಿಶ್ವಾಸ ಇದೆ. ಪ್ರತಿಯೊಬ್ಬ ಮತ ದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಹಂಬಲ ಇದ್ದೇ ಇರುತ್ತದೆ. ನಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆತಂಕದಿಂದ ಏನೇನೋ ಮಾಡುತ್ತೇವೆ. ನಮ್ಮದು ಪಕ್ಷ ಆಧಾರಿತ ಪ್ರಜಾಪ್ರಭುತ್ವ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವೂ ಆಯ್ಕೆಯಾಗಬೇಕು. ಬಹಳ ಜನಪ್ರಿಯ ವ್ಯಕ್ತಿಯೂ ಆಯ್ಕೆಯಾಗುವುದಿಲ್ಲ. ಕೆಲವು ಸಾರಿ ಜನಪ್ರೀಯವಲ್ಲದ ವ್ಯಕ್ತಿಯೂ ನಾಯಕನಾಗುವ ಅವಕಾಶ ದೊರೆಯುತ್ತದೆ ಎಂದರು.

ಕೆಳ ಹಂತದ ಮತದಾರ ತನ್ನ ಆತ್ಮಸಾಕ್ಷಿಯನ್ನು ಉಳಿಸಿಕೊಂಡಿದ್ದಾನೆ. ಯುವಕರು ಹೊಸ ಹೊಸ ಆಲೋಚನೆ ಹೊಂದಿದ್ದಾರೆ. ವಿಶ್ವದಲ್ಲಿ ನಮ್ಮ ದೇಶ ಮುಂದೆ ಬರಬೇಕು ಎಂದು ಬಯಸುತ್ತಾನೆ. ಭ್ರಷ್ಟಾಚಾರ ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ. ಇದು ಅತಿಯಾದಾಗ ಇದನ್ನು ಬದಲಾ ಯಿಸುವ ಸಮಯ ಬಂದೇ ಬರುತ್ತದೆ.
ಪ್ರಜಾಪ್ರಭುತ್ವ ಕೇವಲ ಜೀವಂತ ವಾಗಿದ್ದರೆ ಸಾಲದು. ಅದು ಆರೋಗ್ಯಕರವಾಗಿರಬೇಕು. ಕೇವಲ ಚುನಾವಣೆ ಶುದ್ಧೀಕರಣವಾದರೇ ದೇಶ ಸುಧಾರಿಸುವುದಿಲ್ಲ. ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು. ನಾಗರೀಕ ಸಮಾಜವೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಮೊದಲು ನಾಗರಿಕ ಸಮಾಜದ ಬಗ್ಗೆ ಭಯ ಇತ್ತು. ಈಗ ಆ ಮಟ್ಟದ ನಾಗರಿಕ ಸಮಾಜವೂ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next