Advertisement

ರಾಜ್ಯದಲ್ಲಿ ಹಣಕಾಸು ಸ್ಥಿತಿ ಉತ್ತಮ: ಸಿಎಂ ಬಸವರಾಜ ಬೊಮ್ಮಾಯಿ

10:23 PM Mar 29, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಣಕಾಸು ಸ್ಥಿತಿ ಉತ್ತಮವಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಳೆದ ಐದು ತಿಂಗಳಿನಿಂದ ಸಂಪನ್ಮೂಲ ಕ್ರೂಢೀಕರಣ ಉತ್ತಮವಾಗಿದೆ.

Advertisement

ಮುಂದಿನ ವರ್ಷವೂ ಎಪ್ರಿಲ್‌ನಿಂದಲೇ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಕೊರೊನಾ ನಡುವೆಯೂ ರಾಜ್ಯ ಸರಕಾರವು ಆರ್ಥಿಕ ಶಿಸ್ತು ಪಾಲಿಸಿದೆ. ಬಜೆಟ್‌ ಪೂರ್ವದಲ್ಲಿ ಅಮೃತ ನಗರೋತ್ಥಾನ, ರೈತರ ಮಕ್ಕಳಿಗೆ ವಿದ್ಯಾನಿಧಿ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೂ ತೊಡಕಾಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆಯಿಂದ 9,500 ಕೋಟಿ ರೂ. ಹಾಗೂ ತೆರಿಗೆಯೇತರ ಮೂಲದಿಂದ 2,000 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ ಎಂದು ಹೇಳಿದರು. ಮೋಟಾರು ವಾಹನ ತೆರಿಗೆ ಹೊರತುಪಡಿಸಿ ಉಳಿದ ಮೂಲದಿಂದ ಉತ್ತಮ ತೆರಿಗೆ ಸಂಗ್ರಹವಾಗಿದೆ.

ಇದನ್ನೂ ಓದಿ:ಬಿಸಿಲು ಮತ್ತಷ್ಟು ಹೆಚ್ಚಳ ರಾಯಚೂರಿನಲ್ಲಿ 42.8: ಕರಾವಳಿಯಲ್ಲಿ ಮಳೆ ಸಾಧ್ಯತೆ

Advertisement

ಪ್ರಸಕ್ತ ಸಾಲಿನಲ್ಲಿ 67,100 ಕೋಟಿ ರೂ. ಸಾಲ ಪಡೆಯಬಹುದಾಗಿದ್ದರೂ 63,100 ಕೋಟಿ ರೂ. ಸಾಲವನ್ನಷ್ಟೇ ಪಡೆಯಲಾಗಿದೆ. 2022-23ನೇ ಸಾಲಿನಲ್ಲಿ 2.65 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಲಾಗಿದ್ದು, ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಶೇ. 7.93ರಷ್ಟು ಹೆಚ್ಚಳವಾಗಿದೆ. ಮುಂದಿನ ಸಾಲಿನಲ್ಲಿ ತೆರಿಗೆಯಿಂದ 1.31 ಲಕ್ಷ ಕೋಟಿ ರೂ., ತೆರಿಗೆಯೇತರ ಮೂಲದಿಂದ 10,941 ಕೋಟಿ ರೂ., ಕೇಂದ್ರ ಸರಕಾರದಿಂದ ಸಹಾಯಧನ ರೂಪದಲ್ಲಿ 17,783 ಕೋಟಿ ರೂ., ಕೇಂದ್ರದ ತೆರಿಗೆ ಪಾಲಿನಲ್ಲಿ 29,783 ಕೋಟಿ ರೂ. ಸಂಗ್ರಹವಾಗುವ ಅಂದಾಜು ಮಾಡಲಾಗಿದೆ ಎಂದರು.

ಧನವಿನಿಯೋಗ-ಅನುಮೋದನೆ
ಬದ್ಧತಾ ವೆಚ್ಚವನ್ನು ಶೇ. 80ಕ್ಕಿಂತ ಕಡಿಮೆಗೊಳಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ಬಳಿಕ ಧನವಿನಿಯೋಗ ಮಸೂದೆಗೆ ಧ್ವನಿ ಮತದ ಮೂಲಕ ಸದನ ಅನುಮೋದನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next