Advertisement

ರಾಜ್ಯ ಸರಕಾರಿ ನೌಕರರಿಗೆ ಸಮಾನ ವೇತನ ಆಯೋಗ; ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

11:39 PM Mar 16, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚನೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದ ರಾಜ್ಯ ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುಷಿಯ ಸುದ್ದಿ  ನೀಡಿದ್ದಾರೆ.

Advertisement

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮನಾಗಿ ರಾಜ್ಯ ಸರಕಾರಿ ನೌಕರರಿಗೆ ವೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚನೆ ಮಾಡಲಾಗುತ್ತದೆ ಎಂದು ಘೋಷಿಸಿ ದರು. ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ, ಬೇರೆ ರಾಜ್ಯಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ವರದಿ ಸಲ್ಲಿಸಲು ಆದಷ್ಟು ಬೇಗ ಆಯೋಗ ರಚನೆ ಮಾಡಲಾಗುವುದು ಎಂದು  ಹೇಳಿದರು.

ಬಜೆಟ್‌ಗೂ ಮುನ್ನ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು, ಕೇಂದ್ರ ಸರಕಾರಿ ನೌಕರರ ಸಮಾನ  ವೇತನ ಆಯೋಗ ರಚಿಸುವಂತೆ ಪತ್ರ ಬರೆದಿದ್ದರು. ಆದರೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿರಲಿಲ್ಲ. ಇದರಿಂದ ಸರಕಾರಿ ನೌಕರರು ಅಸಮಾಧಾನಗೊಂಡಿದ್ದರು. ಇದಾದ ಮೇಲೂ ಬಿಎಸ್‌ವೈ ಮತ್ತು ಶಾಸಕರ ಕಡೆಯಿಂದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗಿತ್ತು.

7.60 ಲಕ್ಷ ಹುದ್ದೆಗಳು
ರಾಜ್ಯದಲ್ಲಿ ಒಟ್ಟು 7.60 ಲಕ್ಷ ಸರಕಾರಿ  ಹುದ್ದೆಗಳಿವೆ. ಇದರಲ್ಲಿ 5.20 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 2.40 ಲಕ್ಷ ಹುದ್ದೆ ಖಾಲಿ ಉಳಿದಿವೆ. ಖಾಲಿ ಹುದ್ದೆಗಳಿಂದ ಬೊಕ್ಕಸಕ್ಕೆ ಉಳಿತಾಯವಾಗುತ್ತಿದೆ. ಇದರ ಮಧ್ಯೆ ಕೇಂದ್ರ ಸರಕಾರಿ ನೌಕರರ ಸಮಾನ ವೇತನ ಆಯೋಗ ರಚಿಸಿ ಪರಿಷ್ಕೃತ ವೇತನ ನೀಡಲು 10,500 ಕೋಟಿ ರೂ. ಬೇಕಾಗುತ್ತದೆ ಎಂದೂ ಸಿಎಂ ಹೇಳಿದರು. ಅಲ್ಲದೆ, ಖಾಲಿ ಹುದ್ದೆಗಳ ಪೈಕಿ, 91 ಸಾವಿರ ಮಂದಿ ಹೊರಗುತ್ತಿಗೆ ನೌಕರರೂ ಇದ್ದಾರೆ ಎಂದರು.

ಗುತ್ತಿಗೆ ವ್ಯವಸ್ಥೆ ರದ್ದು ಮಾಡಿ
ಈ ಸಂದರ್ಭದಲ್ಲಿ ವಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, ಹೊರ ಗುತ್ತಿಗೆ ವ್ಯವಸ್ಥೆಯಿಂದ ಮೀಸಲಾತಿ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎಸ್ಸಿ, ಎಸ್ಟಿ ಸಮುದಾಯದವರು ಉದ್ಯೋಗ ವಂಚಿತರಾಗುತ್ತಾರೆ. ಇದರಿಂದ ಸಮಾನ ವೇತನವೂ ಸಿಗುವುದಿಲ್ಲ. ಹೀಗಾಗಿ ಹೊರ ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

Advertisement

ರಾಜ್ಯದ ಸರಕಾರಿ ನೌಕರರ ಸಂಘದ ಇತಿಹಾಸದಲ್ಲಿ ಸಂತಸದ ದಿನ. 40 ವರ್ಷಗಳಿಂದ ಈ ಬೇಡಿಕೆ ಇತ್ತು. 6 ಲಕ್ಷ ಸರಕಾರಿ ನೌಕರರ ಬೇಡಿಕೆಯನ್ನು ಸಿಎಂ ಬೊಮ್ಮಾಯಿ ಅವರು ಸದನದಲ್ಲಿ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇವೆ.
– ಸಿ.ಎಸ್‌. ಷಡಕ್ಷರಿ,
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next