Advertisement

ಒಂದು ವರ್ಷದ ಆಡಳಿತ ನನಗೂ ಜನತೆಗೂ ತೃಪ್ತಿ ತಂದಿದೆ: ಸಿಎಂ ಯಡಿಯೂರಪ್ಪ

02:24 AM Jul 26, 2020 | Hari Prasad |

– ಎಂ. ಕೀರ್ತಿಪ್ರಸಾದ್‌

Advertisement

ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಎದುರಾದ ಸವಾಲುಗಳನ್ನು ಎದುರಿಸುವುದೇ ನನಗಿದ್ದ ಸವಾಲಾಗಿತ್ತು, ಇದು ಅಗ್ನಿ ಪರೀಕ್ಷೆ. ರಾಜಕೀಯ ಕ್ಷೇತ್ರದಲ್ಲಿರುವವರು ಇಂಥದ್ದನ್ನೆಲ್ಲ ಎದುರಿಸಿ ಗೆದ್ದಾಗಲೇ ಅವರ ನೈಜ ವ್ಯಕ್ತಿತ್ವ ಅನಾವರಣಗೊಳ್ಳುವುದು. ಹಾಗಾಗಿ ನಾನು ಅತ್ಯಂತ ಪ್ರಾಮಾಣಿಕವಾಗಿ ಪರಿಸ್ಥಿತಿ ನಿಭಾಯಿಸಿ ಕೆಲಸ ಮಾಡುತ್ತಿದ್ದೇನೆ.

– ಇದು ಒಂದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆತ್ಮವಿಶ್ವಾಸದ ಮಾತು.

‘ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಆಡಳಿತದ ಬಗ್ಗೆ ಸಂತೃಪ್ತಿಯಿದ್ದು, ಜನತೆಯಲ್ಲೂ ಇದೇ ಭಾವವಿದೆ. ಹಾಗಾಗಿಯೇ ಜನ ಸ್ಪಂದಿಸುತ್ತಿದ್ದಾರೆ ಎಂದು ನಂಬಿರುವೆ. ಸರಕಾರ ಒಂದು ತಂಡವಾಗಿ ಕೆಲಸ ಮಾಡುತ್ತಿರುವುದರಿಂದ ಕೋವಿಡ್‌ 19 ಸಂದರ್ಭದಲ್ಲೂ ಅಭಿವೃದ್ಧಿಗೆ ಹಿನ್ನಡೆಯಾಗಿಲ್ಲ
ಎಂದರು. ಸಂದರ್ಶನದ ವಿವರ ಇಲ್ಲಿದೆ:

1 ವರ್ಷದ ಆಡಳಿತದ ಬಗ್ಗೆ ಪ್ರತಿಕ್ರಿಯೆ ?
ಈ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಆರಂಭದಲ್ಲೇ ಅತಿವೃಷ್ಟಿ ಕಾಣಿಸಿಕೊಂಡು 3 ತಿಂಗಳ ಕಾಲ ಹಗಲು – ರಾತ್ರಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿದೆ.ಅನಂತರ ಎದುರಾದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12ರಲ್ಲಿ ಗೆದ್ದೆವು. ಈಗ ಕೋವಿಡ್‌ 19 ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಮಧ್ಯೆಯೂ ಸಂಪನ್ಮೂಲ ಕ್ರೋಡೀಕರಿಸಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಕೋವಿಡ್‌ 19 ಇರದಿದ್ದರೆ ರಾಜ್ಯವನ್ನು ಇದಕ್ಕಿಂತ 10 ಪಟ್ಟು ಹೆಚ್ಚು ಅಭಿವೃದ್ಧಿಪಡಿಸುತ್ತಿದ್ದೆವು.

Advertisement

ಸವಾಲುಗಳು ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದವೇ?
ಮುಖ್ಯವಾಗಿ ಕೋವಿಡ್‌ 19 ತೀವ್ರ ಸವಾಲೊಡ್ಡಿದೆ. ಹಾಗಿದ್ದರೂ ಅಭಿವೃದ್ಧಿಯನ್ನು ಅವಗಣಿಸಿಲ್ಲ. ಕೃಷಿಯೇತರ ಕ್ಷೇತ್ರದವರು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಕೃಷಿ ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದ್ದೇವೆ. ನೀರಾವರಿ ಭೂಮಿ ಖರೀದಿಸುವುದಾದರೆ ಕೃಷಿಗಷ್ಟೇ ಬಳಸಬೇಕೆಂಬ ಷರತ್ತು ವಿಧಿಸಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಭೂಮಿ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ರೈತರು ಎಪಿ ಎಂಸಿ ಮಾರುಕಟ್ಟೆಯಲ್ಲಷ್ಟೇ ಕೃಷ್ಯುತ್ಪನ್ನ ಮಾರಬೇಕೆಂಬ ನಿರ್ಬಂಧ ತೆಗೆಯಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನಡೆಸಲಾಗಿದೆ.

ಸವಾಲುಗಳಿಂದ ಬೇಸರವಾಗಿದೆಯೇ?
ಅಧಿಕಾರವು ಎಲ್ಲರಿಗೂ ಒಳ್ಳೆಯದನ್ನು ಮಾಡಲು ಸಿಕ್ಕಿರುವ ಸುವರ್ಣ ಅವಕಾಶ. ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಗುರಿ. ಆ ದಿಕ್ಕಿನಲ್ಲಿ ಪ್ರಯತ್ನಿಸುವೆ. ಎಲ್ಲರ ಸಹಕಾರ ಕೋರುವೆ. ಸವಾಲುಗಳಿಂದ ವಿಚಲಿತನಾಗುವ ಪ್ರಶ್ನೆ ಇಲ್ಲ. ಅಲ್ಪಸಂಖ್ಯಾಕ ಮುಸ್ಲಿಂ ಬಾಂಧವರ ಸಹಿತ ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಿದ್ದೇನೆ.

ತೆರಿಗೆ ಆದಾಯ ಖೋತಾ ಆಗಿದ್ದರೂ ಸರಕಾರಿ ನೌಕರರ ವೇತನ ಕಡಿತ ಮಾಡದೆ ಪರಿಸ್ಥಿತಿ ನಿಭಾಯಿಸಿದ್ದರ ಗುಟ್ಟೇನು?
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲಾಗಿದೆ. ನೆರೆಯ ರಾಜ್ಯಗಳು ಸರಕಾರಿ ನೌಕರರ ವೇತನವನ್ನು ಹಲವು ಕಂತುಗಳಲ್ಲಿ ವಿತರಿಸುವ ಇಲ್ಲವೇ ಸ್ವಲ್ಪ ಕಡಿತಗೊಳಿಸಲು ಮುಂದಾಗಿವೆ. ನಮ್ಮ ಸರಕಾರ ಇತಿಮಿತಿಗಳ ಮಧ್ಯೆ ಸಕಾಲದಲ್ಲಿ ವೇತನ ಪಾವತಿಸಿ ಆಡಳಿತ ಯಂತ್ರವನ್ನು ಕ್ರಿಯಾಶೀಲವಾಗಿರಿಸಿಕೊಂಡಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿರುವ ಕಾರಣ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ? ಪಕ್ಷದ ಸಹಕಾರ ಹೇಗಿದೆ?
ಸಾಕಷ್ಟು ಅನುಕೂಲಗಳಾಗಿವೆ. ರಾಜ್ಯ ಸರಕಾರದ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿವೆ. ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಕೇಂದ್ರದಿಂದ ಹಣಕಾಸಿನ ನೆರವಿನ ಜತೆಗೆ ರಕ್ಷಣಾ ಕಾರ್ಯಕ್ಕೆ ಸಹಕಾರ ಸಿಕ್ಕಿದೆ. ರಾಜ್ಯದಲ್ಲಿ ಏಕಕಾಲಕ್ಕೆ ನೆರೆ ಮತ್ತು ಬರ ಪರಿಸ್ಥಿತಿ ಎದುರಾದಾಗ ಕೇಂದ್ರವು 1,869 ಕೋಟಿ ರೂ. ಸೇರಿದಂತೆ ಒಟ್ಟು 6,018 ಕೋಟಿ ರೂ. ಒದಗಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹಿತ ಎಲ್ಲರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೇಂದ್ರ ಸರಕಾರದ ಸಹಕಾರಕ್ಕಾಗಿ ಪ್ರಧಾನಿ ಮೋದಿಯವರಿಗೂ ಅಭಿನಂದನೆ ಸಲ್ಲಿಸುವೆ. ಅವರ ಬೆಂಬಲವೇ ಸಾಧನೆಗೆ ಕಾರಣ.

ವಿಪಕ್ಷಗಳ ಸಹಕಾರ ಸಿಗುತ್ತಿದೆಯೇ?
ವಿಪಕ್ಷಗಳವರು ರಚನಾತ್ಮಕ ಸಹಕಾರ ನೀಡಿದ್ದು, ಟೀಕೆಗಳನ್ನೂ ಮಾಡಿದ್ದಾರೆ. ನನ್ನ ಬಗ್ಗೆ ಯಾರಿಗೂ ಸಾಫ್ಟ್ ಕಾರ್ನರ್‌ಇಲ್ಲ. ಒಟ್ಟಾರೆ ರಾಜ್ಯದ ಹಿತದೃಷ್ಟಿಯಿಂದ ಪರಸ್ಪರ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಗ್ಯಕರ ಸಂಬಂಧ ಇದೆ. ಮಾಜಿ ಸಿಎಂ ಕುಮಾರಸ್ವಾಮಿಯವರು ಒಳ್ಳೆಯ ಮಾತನಾಡಿದ್ದು, ಸರಕಾರದ ಕೆಲಸವನ್ನು ಮೆಚ್ಚಿದಂತಿದೆ.

ಉದ್ದಿಮೆ ಅಭಿವೃದ್ಧಿಗೆ ಯೋಜನೆಗಳೇನು?
5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹ ಗುರಿ ಹೊಂದಿದ, ಉದ್ಯಮ ಸ್ನೇಹಿ ಹೊಸ ಕೈಗಾರಿಕಾ ನೀತಿಯನ್ನು ಅನುಮೋದಿಸಲಾಗಿದೆ. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ. 70 ಮೀಸಲು ಕಲ್ಪಿಸಲಾಗುತ್ತಿದೆ. ಚೀನದಿಂದ ಬಂಡವಾಳ ಹಿಂದೆಗೆಯಲು ಉದ್ದೇಶಿಸಿದ ಕಂಪೆನಿಗಳನ್ನು ರಾಜ್ಯದತ್ತ ಆಕರ್ಷಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ.

ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಮತ್ತು ಮೂಲ ಸೌಕರ್ಯ ಕಲ್ಪಿಸುವತ್ತ ಸರಕಾರದ ಯೋಜನೆಗಳೇನು? ದಾವೋಸ್‌ ಭೇಟಿ ಫ‌ಲಪ್ರದವಾಗಿದೆಯೇ?
ರಾಜ್ಯವು ಹೂಡಿಕೆದಾರರನ್ನು ಆಕರ್ಷಿಸಲು, ಆ ಮೂಲಕ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಆದ್ಯತೆ ನೀಡಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡು 40ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳೊಂದಿಗೆ ಸಂವಾದ ನಡೆಸಿ, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದೇನೆ. ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಸುಮಾರು 175 ಆರ್ಥಿಕತೆಗಳ ವ್ಯವಹಾರ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದೆ.

ಪ್ರಧಾನಿ ಮೋದಿಯವರ ಕಲ್ಪನೆಯಡಿ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮವೇನು?
ಕೇಂದ್ರ ಸರಕಾರವು ಸೌರ ಮೇಲ್ಛಾವಣಿ ಘಟಕಗಳ ಅನುಷ್ಠಾನಕ್ಕೆ ರಾಜ್ಯಗಳು ಅನುಸರಿಸಿದ ವಿಧಾನಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುವ ಸೂಚ್ಯಂಕದಲ್ಲಿ ರಾಜ್ಯ ಪ್ರಥಮ ಸ್ಥಾನ ಗಳಿಸಿದೆ. ರಾಜ್ಯದಲ್ಲಿ 83 ಸಣ್ಣ ಪ್ರಮಾಣದ ಜಲ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಆರ್ಥಿಕ ನೆರವು ಒದಗಿಸಿದೆ. ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯವು ರಾಜ್ಯದ ಕೊಪ್ಪಳ, ಬೀದರ್‌ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 2,500 ಮೆ.ವ್ಯಾ. ಸಾಮರ್ಥ್ಯದ ಮೂರು ನವೀಕರಿಸಬಹುದಾದ ಇಂಧನ ಪಾರ್ಕ್‌ಗಳನ್ನು ಸ್ಥಾಪಿಸಲು ಮುಂದಾಗಿದೆ

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪೂರೈಸಿದ ಒಂದು ವರ್ಷ ತೃಪ್ತಿ ತಂದಿದೆಯೇ?
ಖಂಡಿತ ತೃಪ್ತಿ ಇದೆ. ಜತೆಗೆ ಜನತೆಗೂ ತೃಪ್ತಿ ಇದೆ. ಜನರಿಗೆ ತೃಪ್ತಿ ಇರುವುದರಿಂದಲೇ ನಮ್ಮ ಕೆಲಸ, ಕಾರ್ಯ, ಮನವಿಗೆ ಸ್ಪಂದಿಸುತ್ತಿದ್ದಾರೆ. ಎಲ್ಲ ಸಚಿವರು, ಶಾಸಕರು ಒಟ್ಟಾಗಿ ಸಹಕಾರ ನೀಡುತ್ತಿರುವುದರಿಂದ ನಾನು ಈ ಕೆಲಸ ಮಾಡಲು ಸಾಧ್ಯವಾಗಿದೆ. ನನ್ನೊಬ್ಬನಿಂದ ಇದೆಲ್ಲ ಆಗಿಲ್ಲ. ಒಂದು ತಂಡವಾಗಿ ನಾವು ಕಾರ್ಯ ನಿರ್ವಹಿಸಿದ್ದೇವೆ.

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ನೀವು ರೂಪಿಸಿರುವ ನೀಲನಕ್ಷೆ ಏನು?
ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಸಾಧಿಸಲು, ಎಲ್ಲ ವಲಯಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತಿದೆ. ಕೃಷಿ, ಶಿಕ್ಷಣ, ಆರೋಗ್ಯ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೂ ಪೂರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಹೂಡಿಕೆ ಜತೆಗೆ 20 ಲಕ್ಷ ಉದ್ಯೋಗ ಸೃಷ್ಟಿಸುವ ಕೈಗಾರಿಕಾ ನೀತಿ 2020-25ಕ್ಕೆ ಅನುಮೋದನೆ ನೀಡಲಾಗಿದೆ.

ಈ ವಯಸ್ಸಿನಲ್ಲೂ ಕ್ರಿಯಾಶೀಲರಾಗಿರುವ ನಿಮ್ಮ ಉತ್ಸಾಹದ ಗುಟ್ಟೇನು?
– ಪ್ರತಿದಿನ ವಾಕಿಂಗ್‌ ಮಾಡುತ್ತೇನೆ. ಮಿತ ಆಹಾರ ಮತ್ತು ಮಿತ ನಿದ್ರೆ ನನ್ನ ಆರೋಗ್ಯದ ಗುಟ್ಟು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಸದಾ ಕಾರ್ಯಪ್ರವೃತ್ತನಾಗಿರುವುದರಿಂದ ಯಾವುದೇ ಚಿಂತೆಗಳಿಗೆ ಅವಕಾಶವಿಲ್ಲ.

ಸದಾ ಜನರ ನಡುವೆ ಇರುವ ನೀವು ನಾಲ್ಕು ತಿಂಗಳಿನಿಂದ ಕೋವಿಡ್ 19 ಬಂದಿಯಾಗಿದ್ದೀರಾ?
ನಾನು ಈಗಲೂ ಹೊರ ಹೋಗಲು ಸಿದ್ಧನಿದ್ದೇನೆ. ಎಲ್ಲರೂ ಇಲ್ಲಿದ್ದುಕೊಂಡೇ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಾಗೆಂದು ನಾನು ಒಂದು ದಿನವೂ ಮನೆಯಲ್ಲಿ ಕುಳಿತಿಲ್ಲ. ಗೃಹ ಕಚೇರಿ ‘ಕೃಷ್ಣಾ’, ವಿಧಾನಸೌಧದಲ್ಲಿ ಕುಳಿತು ನಿರಂತರ ಕೆಲಸ ಕಾರ್ಯ ಮಾಡಿದ್ದೇನೆ. ಹೀಗಾಗಿ ಬಂದಿ ಎನಿಸುವುದಿಲ್ಲ.

ಕೋವಿಡ್ 19, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಿದ ಬಗ್ಗೆ ತೃಪ್ತಿ ಇದೆಯೇ?
ಸಂಕಷ್ಟಕ್ಕೆ ಸಿಲುಕಿದವರಿಗಾಗಿ 2,272 ಕೋಟಿ ರೂ. ವಿಶೇಷ ಪ್ಯಾಕೇಜ್‌ನಡಿ ನೆರವು, ಪರಿಹಾರ ಘೋಷಿಸಿ ಜನ ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸಲಾಗಿದೆ. ಮೆಕ್ಕೆಜೋಳ ಬೆಳೆಗಾರರು, ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಪರಿಹಾರ ಘೋಷಿಸಲಾಯಿತು. ಆಟೋ- ಟ್ಯಾಕ್ಸಿ ಚಾಲಕರು, ಕಾಯಕ ಜೀವಿಗಳಿಗೂ ನೆರವು ಪ್ರಕಟಿಸಲಾಗಿದೆ. ಆಶಾ ಕಾರ್ಯಕರ್ತೆಯರಿಗೆ 3,000 ರೂ. ಪ್ರೋತ್ಸಾಹ ಧನ ಪ್ರಕಟಿಸಲಾಗಿದೆ.

ಲಾಕ್‌ಡೌನ್‌ ಸಂಬಂಧಿಸಿ ಗೊಂದಲಕ್ಕೆ ಕಾರಣ ?
– ಕೋವಿಡ್ 19 ಹರಡುವುದನ್ನು ತಡೆಯಬೇಕೇ ವಿನಾ ಲಾಕ್‌ಡೌನ್‌ ಪರಿಹಾರವಲ್ಲ. ಹೀಗಾಗಿ ಲಾಕ್‌ಡೌನ್‌ ಮುಂದುವರಿಸದಿರಲು ಸ್ಪಷ್ಟ ನಿಲುವು ಕೈಗೊಂಡಿದ್ದೇನೆ.

ಬೆಂಗಳೂರು ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌?
ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದೆ. ನವನಗರೋತ್ಥಾನ ಯೋಜನೆ, ಘನತ್ಯಾಜ್ಯ ನಿರ್ವಹಣೆಗೆ ಶುಭ್ರ ಬೆಂಗಳೂರು ಯೋಜನೆ, ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಕೇಂದ್ರ ಬೆಂಗಳೂರು ಸ್ಮಾರ್ಟ್‌ ಸಿಟಿ, ಮೆಟ್ರೋ ನಿರ್ಮಾಣ, ಸಂಚಾರ ದಟ್ಟಣೆ ಕಡಿಮೆ ಮಾಡಲು ಸಬ್‌ ಅರ್ಬನ್‌ ರೈಲು ಯೋಜನೆ ಸಹಿತ ಹಲವು ಯೋಜನೆಗಳಿಗೆ 8,772 ಕೋಟಿ ರೂ. ನೀಡಲಾಗಿದೆ.

ಅನ್ಯ ರಾಜ್ಯಗಳಿಂದ ಬಂದಿರುವ ಕಾರ್ಮಿಕರನ್ನು ಬಳಸಿಕೊಳ್ಳಲು ಸರಕಾರದ ಚಿಂತನೆಯೇನು?
ಕೋವಿಡ್‌ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಊರಿಗೆ ಹಿಂದಿರುಗಿದ್ದಾರೆ. ನಮ್ಮ ರಾಜ್ಯದ ಕಾರ್ಮಿಕರು ಕೂಡ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೋಗಿದ್ದಾರೆ. ಲಾಕ್‌ಡೌನ್‌ ಬಳಿಕ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಪ್ರಸ್ತುತ ಉದ್ದಿಮೆಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಆದ್ದರಿಂದ ಕಾರ್ಮಿಕರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.

ಕಲ್ಯಾಣ ಕರ್ನಾಟಕ ಹೆಸರಿನ ಘೋಷಣೆಯಿಂದ ನಿಜಕ್ಕೂ ಆ ಭಾಗಕ್ಕೆ ಅನುಕೂಲವಾಗಿದೆಯಾ?
ಇದು ಕೇವಲ ಹೆಸರಿನ ಘೋಷಣೆಯಲ್ಲ. ಸರ್ವತೋಮುಖ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘವನ್ನು ಹೊಸದಾಗಿ ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಶಕ್ತೀಕರಣ, ಸ್ವಯಂ ಉದ್ಯೋಗ, ಯುವ ಸಶಕ್ತೀಕರಣ ರೂಪಿಸಿ ಈ ಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶ್ರಮಿಸುವುದು ಈ ಸಂಘದ ಉದ್ದೇಶ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500 ಕೋ. ರೂ. ಅನುದಾನ ನೀಡಲಾಗುವುದು.

ಆತ್ಮ ನಿರ್ಭರ ಭರವಸೆಯ ಹೊಂಗಿರಣ
ಇಕ್ಕಟ್ಟು ಮತ್ತು ಬಿಕ್ಕಟ್ಟುಗಳ ನಡುವೆಯೂ ಜನಜೀವನವನ್ನು ಸುಗಮಗೊಳಿಸಲು ಮತ್ತು ಆರ್ಥಿಕ ಅಭ್ಯುದಯ ಸಾಧಿಸಲು ನಮ್ಮ ಸರಕಾರ ಬದ್ಧವಾಗಿದೆ. ಕೇಂದ್ರದ ಆತ್ಮನಿರ್ಭರ ಯೋಜನೆ ಭರವಸೆಯ ಹೊಂಗಿರಣವಾಗಿದೆ.

ದಿಟ್ಟ ನಿಲುವು
ಕೋವಿಡ್ 19 ಕಾರಣಕ್ಕೆ ಎಸೆಸೆಲ್ಸಿ ಪರೀಕ್ಷೆ ನಡೆಸಲು ಹಲವು ರಾಜ್ಯಗಳು ಹಿಂದೇಟು ಹಾಕಿದವು. ಆದರೆ ಸಂದಿಗ್ಧ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಶೇ.96ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ ಸಚಿವ ಸುರೇಶ್‌ ಕುಮಾರ್‌ ಪರಿಶ್ರಮ ಸಾಕಷ್ಟಿದೆ.

ಸುಮ್ಮನೆ ಕೂರಲಿಲ್ಲ !
ಕೋವಿಡ್ 19 ಅಂತ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಒಂದೆಡೆ ಕೋವಿಡ್ 19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಜತೆಗೆ ಇನ್ನೊಂದೆಡೆ ರಾಜ್ಯದ ಅಭಿವೃದ್ಧಿ ಕುಂಠಿತವಾಗದಂತೆಯೂ ಎಚ್ಚರ ವಹಿಸಲಾಗಿದೆ. ಲಭ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳಾಗಿವೆ.

ಜನತೆಯಲ್ಲಿ ಮನವಿ
ಮುಖ್ಯಮಂತ್ರಿಯಾಗಿ ಜನತೆಯಲ್ಲಿ ನನ್ನ ಮನವಿ ಇಷ್ಟೇ. ಕೋವಿಡ್ 19 ಜತೆಗೆ ಬದುಕುವುದನ್ನು ಕಲಿಯಬೇಕಿದೆ. ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಕೋವಿಡ್ 19 ಬಂದ 100 ಮಂದಿಯಲ್ಲಿ 95 ಮಂದಿ ಗುಣಮುಖರಾಗುತ್ತಿದ್ದಾರೆ. ಕೋವಿಡ್ 19 ಎದುರಿಸುವಂತೆ ಜನರಲ್ಲಿ ಕೈಜೋಡಿಸಿ ಪ್ರಾರ್ಥಿಸುವೆ.

ದಯವಿಟ್ಟು ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಗುಂಪು ಸೇರಬೇಡಿ. ಜನರೇ ಸ್ವಯಂಪ್ರೇರಣೆಯಿಂದ ಸಹಕಾರ ನೀಡಿದರೆ ಕೋವಿಡ್ 19 ಸೋಂಕನ್ನು ಎದುರಿಸುತ್ತಲೇ ಅಭಿವೃದ್ಧಿ ಕಾರ್ಯವನ್ನೂ ಮಾಡಬಹುದು. ಈ ಕೆಲಸವನ್ನು ರಾಜ್ಯದ ಪ್ರತೀ ಕುಟುಂಬ ಮಾಡಬೇಕು ಎಂದು ಕೈ ಜೋಡಿಸಿ ಪ್ರಾರ್ಥಿಸುವೆ. ರಾಜ್ಯದ ಜನರ ಆರೋಗ್ಯ, ಜೀವನ ಕಾಪಾಡುವುದು ನಮ್ಮ ಹೊಣೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next