ಕಲಬುರಗಿ: ವೇಗವಾಗಿ ಬೆಳೆಯುತ್ತಿರುವ ಮಹಾನಗರಕ್ಕೆ ಪೊಲೀಸ್ ಆಯುಕ್ತರ ಕಚೇರಿ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಮಾ. 15ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ಭರವಸೆ ನೀಡಿದ್ದಾರೆಂದು ಉತ್ತರ ಕ್ಷೇತ್ರದ ಶಾಸಕ ಡಾ| ಖಮರುಲ್ ಇಸ್ಲಾಂ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವಾರಗಳ ಹಿಂದೆ ಗೃಹ ಸಚಿವಡಾ| ಜಿ. ಪರಮೇಶ್ವರ ಅವರು ನಗರಕ್ಕೆ ಸದ್ಯಕ್ಕೆ ಪೊಲೀಸ್ ಆಯುಕ್ತರ ಕಚೇರಿ ಸ್ಥಾಪನೆ ಇಲ್ಲ ಎಂದು ಹೇಳಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಕಚೇರಿ ಸ್ಥಾಪನೆ ಕುರಿತು ಮನವರಿಕೆ ಮಾಡಿಕೊಟ್ಟಾಗ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದರು.
ಗೃಹ ಸಚಿವ ಡಾ| ಜಿ. ಪರಮೇಶ್ವರ ನಗರಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಧಿಕಾರಿಗಳ ನೇಮಕಾತಿ ಘೋಷಿಸಿದ್ದರು. ಅದರ ಬದಲು ಪೊಲೀಸ್ ಆಯುಕ್ತರ ಕಚೇರಿ ಸ್ಥಾಪನೆಗೆ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಗಡ್ಕರಿ-ಖರ್ಗೆಗೆ ಅಭಿನಂದನೆ: ನಗರದಲ್ಲಿ ಸುಗಮ, ಸಂಚಾರ ಬಹಳ ಕಠಿಣವಾಗಿದೆ.
ಹೀಗಾಗಿ ಎರಡನೇ ವರ್ತುಲ ರಸ್ತೆಯ ಮೇಲೂ ವಾಹನಗಳ ದಟ್ಟನೆಯ ಸಂಚಾರವಿದ್ದು, ಎರಡನೇ ವರ್ತುಲ ರಸ್ತೆಯ ಅಗತ್ಯವಿರುವುದನ್ನು ಮನಗಂಡು ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೇಂದ್ರದ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ತಮ್ಮ ಮನವಿ ಪುರಸ್ಕರಿಸಿ 11000 ಕೋಟಿ ರೂ.ಗಳ ವೆಚ್ಚದ ಎರಡನೇ ವರ್ತುಲ ರಸ್ತೆಗೆ ಒಪ್ಪಿಗೆ ನೀಡಿದ್ದಾರೆ. ಮೂರು ರಾಷ್ಟ್ರೀಯ ಹೆದ್ದಾರಿಗಳಿಗೂ ಮಂಜೂರಾತಿ ನೀಡಲಾಗಿದೆ. ಹೀಗಾಗಿ ಕೇಂದ್ರದ ಲೋಕೋಪಯೋಗಿ ಸಚಿವ ನಿತೀನ ಗಡ್ಕರಿ ಹಾಗೂ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.