ಬೆಂಗಳೂರು: ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಚುನಾವಣ ಆಯೋಗ ರಾಜಕೀಯ ಪಕ್ಷಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಬುಧವಾರ ಸಂಜೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸಭೆಯಲ್ಲಿ ವಿವರಿಸಲಾಗಿದೆ.
ರಾಜಕೀಯ ರ‍್ಯಾಲಿ, ಸಮಾವೇಶಗಳಿಗೆ ಪರವಾನಗಿ ಪಡೆದುಕೊಳ್ಳಲು “ಸುವಿಧಾ’ ಆ್ಯಪ್ ಜಾರಿಗೆ ತರಲಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಪಕ್ಷಗಳಿಗೆ ಮನವಿ ಮಾಡಲಾಗಿದೆ. ಇದಲ್ಲದೆ, 80 ವರ್ಷ ದಾಟಿದವರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ರಾಜ್ಯ ಸರಕಾರ ಅಗತ್ಯ ಸೇವೆಗಳೆಂದು ಘೋಷಿಸಿದ ಇಲಾಖೆ ಮತ್ತು ಸಂಸ್ಥೆಗಳ ಸಿಬಂದಿಗೆ ಅಂಚೆ ಮತದ ಅವಕಾಶವೂ ನೀಡಲಾಗಿದೆ. ಈ ಬಗ್ಗೆ ಪಕ್ಷದಿಂದ ಹೆಚ್ಚೆಚ್ಚು ಪ್ರಚಾರ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಇದೇ ವೇಳೆ ಅಧಿಕಾರಿಗಳ ವರ್ಗಾವಣೆ ಸಹಿತ ಕೆಲವು ವಿಷಯಗಳ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ನಿರ್ದಿಷ್ಟ ದೂರುಗಳು ಕೊಟ್ಟರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಮನೋಜ್ ಕುಮಾರ್ ಮೀನಾ ಭರವಸೆ ನೀಡಿದರು ಎನ್ನಲಾಗಿದೆ.