Advertisement

ಬ್ರೈಲ್‌ ಲಿಪಿಯಲ್ಲಿ ಜಾಗೃತಿ ಸಂದೇಶ

01:34 PM Apr 08, 2019 | Naveen |

ಚಿತ್ರದುರ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಬಗೆಯ ಮತದಾರರಿಗೂ ನೈತಿಕ ಮತದಾನದ ಸಂದೇಶ ತಲುಪಿಸಲು ಜಿಲ್ಲಾ ಸ್ವೀಪ್‌ ಸಮಿತಿ ಕಸರತ್ತು ನಡೆಸುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಸಿ. ಸತ್ಯಭಾಮ ಹೇಳಿದರು.

Advertisement

ವಿಕಲಚೇತನರಿಗಾಗಿ ಹಮ್ಮಿಕೊಂಡಿದ್ದ ಮತದಾನ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ವಿಕಲಚೇತನ ಮತದಾರರಿಗೂ ಮತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ ಜಾಗೃತಿ ಸಂದೇಶವನ್ನು ಬ್ರೈಲ್‌ ಲಿಪಿಯಲ್ಲಿ ತಯಾರಿಸಲಾಗಿದೆ. ಯಾವುದೇ ಮತದಾರ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂಬ ಸದಾಶಯದೊಂದಿಗೆ ಚುನಾವಣಾ ಆಯೋಗ ಸ್ವೀಪ್‌ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಮತದಾನದ ಮಹತ್ವ ಹಾಗೂ ಮತ ಜಾಗೃತಿಯ ಸಂದೇಶವನ್ನು ತಲುಪಿಸುತ್ತಿದೆ. ರಂಗೋಲಿ ಸ್ಪರ್ಧೆ, ಜಾಗೃತಿ ಜಾಥಾ, ಮಾನವ ಸರಪಳಿ, ಬೈಕ್‌ ರ್ಯಾಲಿ, ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಎಲ್ಲ ಮತದಾರರು ತೊಡಗಿಸಿಕೊಂಡು, ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ನೈತಿಕ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದೆ ಎಂದರು.

ವಿಕಲಚೇತನರಿಗೆ ಚುನಾವಣೆಯಲ್ಲಿ ವಿಶೇಷ ಆದ್ಯತೆ ನೀಡಿರುವ ಚುನಾವಣಾ ಆಯೋಗ, ಈ ಬಾರಿ ಮತದಾನ ಮಾಡುವ ಸಲುವಾಗಿ ವಾಹನದ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಪ್ರಶಂಸನೀಯ. ಈ ದಿಸೆಯಲ್ಲಿ ಚಿತ್ರದುರ್ಗ ಜಿಲ್ಲಾ ಸ್ವೀಪ್‌ ಸಮಿತಿ ಮತ್ತೂಂದು ಹೆಜ್ಜೆ ಮುಂದೆ ಸಾಗಿದ್ದು ಅಂಧ ಮತದಾರರಿಗೆ ಮತದಾನದ ಮಹತ್ವ ಸಾರುವ ಸಂದೇಶ, ಮತದಾನ ದಿನಾಂಕ, ಚುನಾವಣಾ ಸಹಾಯವಾಣಿ, ಮತದಾನ ದಿನದಂದು ಅವರಿಗೆ ನೀಡಲಾಗುವ ಸೌಲಭ್ಯ ಸೇರಿದಂತೆ ಸಮಗ್ರ ಮಾಹಿತಿಯುಳ್ಳ ಸಂದೇಶವನ್ನು ಬ್ರೈಲ್‌ ಲಿಪಿಯಲ್ಲಿ ಸಿದ್ಧಪಡಿಸಿ ತಲುಪಿಸಲಾಗುತ್ತದೆ ಎಂದು ತಿಳಿಸಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ 18 ವರ್ಷ ತುಂಬಿರುವ ಎಲ್ಲ ಅಂಧರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನ ನಮ್ಮೆಲ್ಲರ ಹಕ್ಕು. ಪ್ರತಿಯೊಬ್ಬರ ಮತ ದೇಶಕ್ಕೆ ಹಿತ ಎಂಬಂತೆ ಏ. 18 ರದು ನಡೆಯುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿ ಕಾರಿ ಜೆ. ವೈಶಾಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 15,436 ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ಅವರಲ್ಲಿ 450 ಜನರು ಅಂಧ ಮತದಾರರಾಗಿದ್ದಾರೆ. ಜಿಲ್ಲೆಯ ಎಲ್ಲ ಅಂಧ ಮತದಾರರಿಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಬ್ರೈಲ್‌ ಲಿಪಿಯಲ್ಲಿ ಸಿದ್ಧಪಡಿಸಲಾಗಿರುವ ಮತ ಜಾಗೃತಿ ಸಂದೇಶವುಳ್ಳ ಪತ್ರವನ್ನು ಶೀಘ್ರದಲ್ಲೇ ತಲುಪಿಸಲಾಗುವುದು ಎಂದು ತಿಳಿಸಿದರು.

ಅಂಧರು ಮತಗಟ್ಟೆಗೆ ಹೋಗುವಾಗ ಚುನಾವಣಾ ಆಯೋಗ ನಿಗದಿಪಡಿಸಿರುವ ಯಾವುದಾದರೊಂದು ದಾಖಲೆಯನ್ನು
ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಕೋರಿಕೆ ಮೇರೆಗೆ ಮನೆಯಿಂದ ಮತಗಟ್ಟೆಗೆ ಹೋಗಲು ವಾಹನದ ವ್ಯವಸ್ಥೆ
ಇರುತ್ತದೆ. ಚುನಾವಣೆ ಆ್ಯಪ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮತಯಂತ್ರದ ಬಲಭಾಗದಲ್ಲಿ ಬ್ರೈಲ್‌
ಲಿಪಿಯಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಎಲ್ಲ ಮತಗಟ್ಟೆಯಲ್ಲಿ ರ್‍ಯಾಂಪ್‌, ರೈಲಿಂಗ್ಸ್‌ ಮತ್ತು ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1950ಕ್ಕೆ ಕರೆ ಮಾಡಬಹುದು.
ಸಿ. ಸತ್ಯಭಾಮ,ಜಿಪಂ ಸಿಇಒ

Advertisement
Advertisement

Udayavani is now on Telegram. Click here to join our channel and stay updated with the latest news.

Next