ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ ಪಾಸಾಗಬೇಕು ಅಂತ. ಅದಕ್ಕಾಗಿ ಯುವ ಸಂಚಲನ ತಂಡ ಕಟ್ಟಿ, ಕಳೆದ 8 ವರ್ಷಗಳಿಂದ ಫಲಿತಾಂಶದ ಹಿಂದಿನ ದಿನ ಊರೆಲ್ಲ ಸೈಕಲ್ ಜಾಥಾ ಮಾಡಿ, ಫೇಲ್ ಎಂಬುದು ಬದುಕಿನ ಕೊನೆಯ ಘಟ್ಟವಲ್ಲ, ಅದು ಹೊಸ ಜೀವನದ ಆರಂಭ ಅಂತ ವಿದ್ಯಾರ್ಥಿಗಳಿಗೆ ಸಾರಿ ಹೇಳುತ್ತಿದ್ದಾರೆ. ಫೇಲಾದವರಿಗೆ ಪುಕ್ಕಟೆ ಕ್ಲಾಸು ನಡೆಸುತ್ತಾರೆ, ಮನೆ ಗಳ ಮುಂದೆ ಗಿಡ ನೆಡುತ್ತಾರೆ, ಅವುಗಳ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಾರೆ.
ಶಾಲೆಯ ನೋಟೀಸ್ ಬೋರ್ಡ್‌ನಲ್ಲಿ ಈ ಚಿದಾನಂದನ ಮೂರ್ತಿ ಆರಾಧ್ಯ ಅನ್ನೋ ಹೆಸರೇ ಇರಲಿಲ್ಲ. ಅಲ್ಲಿಗೆ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾನು ಫೇಲು ಅನ್ನೋದು. ಜೊತೆಗಾರರೆಲ್ಲ ಫಸ್ಟ್‌ಕ್ಲಾಸ್, ಒಂದಿಬ್ಬರು ಸೆಕೆಂಡ್ ಕ್ಲಾಸ್‌ಲ್ಲಿ ಪಾಸು. ಅವರ ಸಂಭ್ರಮಕ್ಕೆ ಹೆಗಲು ಕೊಡೋಣ ಅಂದರೆ, ಕನಿಷ್ಠ ಪಾಸೂ ಕೂಡ ಆಗಿಲ್ಲ. ಎಲ್ಲಿ ಮಾರ್ಕ್ಸ್ ಎಷ್ಟು ಬಂದಿದೆ ಅಂತ ನೋಡಿದರೆ, ಚಿದಾನಂದ ಮೂರು ವಿಷಯದಲ್ಲಿ ಢುಮುಕಿ.
ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಶಾಲೆಯ ಒಂದೆರಡು ಮೆಟ್ಟಿಲು ಇಳಿದು ಬರುತ್ತಿರುವಾಗಲೇ ” ಏನಪ್ಪಾ, ಏನಾಯ್ತು.. ಹೋಯ್ತಾ..’ ಅಂತ ಅದ್ಯಾರೋ ವ್ಯಂಗ್ಯವಾಗಿ ಅಂದರು. ಚಿದಾನಂದಗೆ ಕಣ್ಣು ಹನಿಗೂಡಿದ್ದರಿಂದ ಅವರ ಮುಖವೂ ಸ್ಪಷ್ಟವಾಗಿ ಕಾಣಲಿಲ್ಲ. ಆ ತನಕ ಒಂದು ರೀತಿಯ ಸ್ಟೇಟಸ್ ಕೊಟ್ಟಿದ್ದ ಸಮಾಜ, ಇದ್ದಕ್ಕಿದ್ದಂತೆ ಏನೋ ಕಿತ್ತುಕೊಳ್ಳತೊಡಗಿದಂತೆ ಭಾಸವಾಯಿತು.
ಮುಂದೇನು ಮಾಡುವುದು? ಚಿದಾನಂದ ಅಜ್ಜಿಮನೆಯಲ್ಲಿ ಓದುತ್ತಿದ್ದದ್ದು. ಅವರಿಗೆ ಹೇಗೆ ಮುಖ ತೋರಿಸುವುದು? ಏನು ಮಾಡಬೇಕು ಅಂತ ತೋಚಲಿಲ್ಲ. ಸೈಬರ್ ಕೆಫೆಯಲ್ಲಿ , ಜಿಮ್‌ನಲ್ಲಿ ಒಂದಷ್ಟು ತಿಂಗಳುಗಳ ಕಾಲ ಕೆಲಸ ಮಾಡಿ, ಅದೂ ಒಗ್ಗದೆ ಮತ್ತೆ ಹುಟ್ಟೂರು ದೊಡ್ಡಬಳ್ಳಾಪುರದ ಕಡೆ ಮುಖ ಮಾಡಿದ. ಆಗ ಕಂಡದ್ದು “ಸಂವಾದ’ ಅನ್ನೋ ಸಂಸ್ಥೆ. ಎಲೆಪೇಟೆಯಲ್ಲಿ ಚಿದಾನಂದನಂತೆ ಫೇಲಾದವರನ್ನು ಹಿಡಿದು ತಂದು, ಪಾಠ ಮಾಡಿ- ಬರೀರಿ ಪರೀಕ್ಷೆ. ಅದೇಗೆ ಫೇಲಾಗ್ತಿರೋ ನಾವು ನೋಡ್ತೀವಿ ಅಂತ ಆತ್ಮವಿಶ್ವಾಸ ತುಂಬಿ ಪಾಸು ಮಾಡಿಸುತ್ತಿದ್ದ ಅತ್ಯಪರೂಪ ಸಂಸ್ಥೆ. ಅದರಲ್ಲಿ ಒಂದಷ್ಟು ಮೇಷ್ಟ್ರಗಳ ಗುಂಪಿತ್ತು. ಅದು ವಿದ್ಯಾರ್ಥಿಗಳಿಗೆ ಪುಕ್ಕಟ್ಟೆ ಪಾಠ ಪ್ರವಚನ ಮಾಡುತ್ತಿತ್ತು. ಒಂದು ತಿಂಗಳ ಕಾಲ ಅಲ್ಲಿ ಕಲಿತದ್ದೇ ಚಿದಾನಂದನ ಬದುಕಿನ ಟರ್ನಿಂಗ್ ಪಾಯಿಂಟ್. ಈ “ಸಂವಾದ’ ಸಂಘ ಕೇವಲ ಪಾಠ ಪ್ರವಚನ ಮಾತ್ರ ಮಾಡುತ್ತಿರಲಿಲ್ಲ. ಪುಸ್ತಕ ಕೊಟ್ಟು, ಓದಿಸಿ, ಆಪುಸ್ತಕದ ಬಗ್ಗೆ ಮಾತನಾಡುವುದು ಹೇಗೆ ಅಂತೆಲ್ಲ ಹೇಳಿಕೊಡುವ ಮೂಲಕ ಓದಿನ ರುಚಿ ಹತ್ತಿಸುತ್ತಿತ್ತು. ಚಿದಾನಂದಗೆ ತೇಜಸ್ವಿ, ಕಾರಂತರು, ಕುವೆಂಪು, ಲಂಕೇಶ್ ಎಲ್ಲರ ಪರಿಚಯವಾದದ್ದು ಅಲ್ಲೇ. ಬದುಕುವ ಕಲೆ ಹೇಳಿಕೊಡುವ ಲೀಡರ್‌ಶಿಪ್ ಬಗ್ಗೆ, ಪರಿಸರಕ್ಕೆ ಸಂಬಂಧಿಸಿದಂತೆ ಕೋರ್ಸ್‌ಗಳನ್ನು ಏರ್ಪಡಿಸುತ್ತಿತ್ತು. ಎಚ್.ಐ.ವಿ ಬಾಧಿತರಿಗೆ ಧೈರ್ಯ ತುಂಬುವ ಸಮಾಜ ಸೇವೆ ಮಾಡುತಲಿತ್ತು.
ಎಲ್ಲವನ್ನೂ ಗಮನಿಸುತ್ತಿದ್ದ ಚಿದಾನಂದ, ಸಂವಾದ ತಂಡದಲ್ಲಿ ಒಬ್ಬನಾದ. ಎಸ್‌ಎಸ್‌ಎಲ್‌ಸಿ ಪಾಸಾಯಿತು. ಹಾಗಂತ ಸಂಘದ ಸಂಬಂಧ ಕಡಿದುಕೊಳ್ಳಲಿಲ್ಲ. ಗೆಳೆಯರ ಗುಂಪು ಹೆಚ್ಚಾಯಿತು. ನಾಗರಿಕರ ಬಗ್ಗೆ ಚಿಂತಿಸುವ ನಾಗ್‌ದಳ, ಆರ್ಕಾವತಿ ಪುನಶ್ಚೇತನಕ್ಕೆ ಮುಂದಾಗಿದ್ದ ಸಮಿತಿಯ ಒಡನಾಟ ದಕ್ಕಿತು. ಅಷ್ಟರಲ್ಲಿ ಮನೆಯವರ ಒತ್ತಾಯಕ್ಕೆ ಐಟಿಐ ಮೆಟ್ಟಿಲು ಹತ್ತಿ ಇಳಿದ್ದು ಆಗಿತ್ತು. ಕಂಪನಿಯಲ್ಲಿ ಕೆಲಸ ಸಿಕ್ಕಿತು. ಒನ್ ಫೈನ್ ಡೇ, ಸಂವಾದ ಸಂಸ್ಥೆ ಮುಚ್ಚಿಹೋಯಿತು. ಆಗ, ಚಿದಾನಂದ ಕೈ ಕಟ್ಟಿ ಕೂರಲಿಲ್ಲ. ಈ ಸಮಾಜ ವಿದ್ಯಾರ್ಥಿಗಳನ್ನು ಏಕೆ ಅಂಕದಿಂದ ಅಳೆಯುತ್ತೆ? ಪ್ರತಿಭೆಯಿಂದ ಅಳೆಯಬೇಕಲ್ವಾ? ಅಂಕವನ್ನು ಫೀಸು ಕಟ್ಟಿಯೂ, ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಆದರೆ, ಪ್ರತಿಭೆ ಅನ್ನೋದು ದುಡ್ಡು ಕೊಟ್ಟರೆ ಬರುತ್ತಾ? ಸಾಧ್ಯನೇ ಇಲ್ಲ. ಇದಕ್ಕೆ ಏನಾದರೂ ಮಾಡಬೇಕಲ್ಲ ಅಂತ ಯೋಚಿಸಿ, ಗೆಳೆಯರಾದ ಮಲ್ಲಿಕಾ, ಮೌಸೀನಾ, ಮೌಲಾ, ಅಜಯ್, ಮನ್ಸೂರ್, ದೀಪಕ್ ಕುಮಾರ್, ಚಂದ್ರಶೇಖರ್ ಮುಂತಾದವರನ್ನು ಸೇರಿಸಿಕೊಂಡು “ಯುವ ಸಂಚಲನ’ಅನ್ನೋ ಸಂಸ್ಥೆ ಶುರುಮಾಡಿದರು. ಇದರ ಮೂಲ ಉದ್ದೇಶ- ಫೇಲಾದ ವಿದ್ಯಾರ್ಥಿಗಳನ್ನು ಹುಡುಕಿ, ಧೈರ್ಯ ತುಂಬುವುದು. ಇದಕ್ಕಾಗಿ ಪರೀಕ್ಷೆಯ ಫಲಿತಾಂಶದ ಹಿಂದಿನ ದಿನ ದೊಡ್ಡಬಳ್ಳಾಪುರ ಪಟ್ಟಣದ ಗಲ್ಲಿ ಗಲ್ಲಿಯಲ್ಲಿ ಸೈಕಲ್ ಜಾಥಾ ಏರ್ಪಡಿಸುವುದು, ಶಾಲಾ, ಕಾಲೇಜಿಗೆ ಹೋಗಿ ಫೇಲ್ ಆಗಿಬಿಟ್ಟರೆ, ಅಲ್ಲಿಗೇ ಬದುಕು ಮುಗಿಯುವುದಿಲ್ಲ. ಬದುಕಿದ್ದರೆ ಇಂಥ ಸಾವಿರ ಪರೀಕ್ಷೆ ಬರೆಯಬಹುದು ಅಂತ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಕಳೆದ 8 ವರ್ಷಗಳಿಂದಲೂ ಮಾಡುತ್ತಿದ್ದಾರೆ.
ಇದಾದ ನಂತರ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಆಗಿದ್ದ ಇಂಗ್ಲಿಷ್ ಅನ್ನು ಮಣಿಸಲು ಸ್ಪೋಕನ್ ಇಂಗ್ಲೀಷ್ ಶುರು ಮಾಡಿದರು. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಪುಕ್ಕಟೆ ಪಾಠ ಮಾಡಿ ಹೋಗುತ್ತಿದ್ದಾರೆ. 20-30 ವಿದ್ಯಾರ್ಧಿಗಳು ಈ ವಿಷಯ ಕಷ್ಟ ಅಂದರೆ, ಎಲ್ಲರನ್ನೂ ಕೂಡಿಸಿ, ವಿಷಯ ಪರಿಣತರನ್ನು ಕರೆಸಿ ಪಾಠ ಮಾಡಿಸುವುದು ಯುವ ಸಂಚಲನದ ಪ್ರಮುಖವಾದ ಹೆಜ್ಜೆ.
ಇದು ವಿದ್ಯಾರ್ಥಿಗಳಿಗಾದರೆ, ಹೆಣ್ಣು ಮಕ್ಕಳಿಗೆ ಶಾಲೆಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಲು ಪ್ರತ್ಯೇಕ ವಿಂಗ್ ಮಾಡಬೇಕು ಅಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಪರಿಸರ ಜಾಗೃತಿಯ ಬಗ್ಗೆ ಇಡೀ ತಂಡ ಗಮನ ಹರಿಸಿದೆ. ಹಾಡು, ಕುಣಿತ, ನಾಟಕಗಳ ಮೂಲಕ ಜನರನ್ನು ತಲುಪಲು ಪ್ರತ್ಯೇಕ ಕಲ್ಚರ್ ಟೀಂ ರಚನೆ ಮಾಡಿದೆ. ಈ ಮೂಲಕ ನೀರು, ಅದರ ಮಹತ್ವವನ್ನು ಸಾರಿ ಹೇಳುತ್ತಿದೆ. ದೊಡ್ಡಬಳ್ಳಾಪುರದ ಸುತ್ತಮುತ್ತ ಇರುವ ಅರಣ್ಯ ಪ್ರದೇಶಗಳನ್ನು ಗುರುತಿಸಿ, ಅಲ್ಲೆಲ್ಲ ಗಿಡಗಳನ್ನು ನೆಟ್ಟು ಮರಗಳನ್ನಾಗಿಸುವ ಪ್ರಯತ್ನ ಮಾಡುತ್ತಿದೆ. ನಗರ ವ್ಯಾಪ್ತಿಯಲ್ಲಿ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಹೆಗ್ಗಳಿಕೆ ಇದೆ. ಒಂದು ಪಕ್ಷ , ಮನೆ ಮುಂದೆ ನೆಡಲು ಗಿಡ ಬೇಕು ಅಂದರೆ, ಸಂಚಲನ ತಂಡದ ಸದಸ್ಯರೇ ಗಿಡ ತಂದು, ಪಾತಿ ಮಾಡಿ ನೆಟ್ಟು, ಗಿಡ ಕೊಟ್ಟವರೂ, ನೆಟ್ಟವರ ಕೈಗಳನ್ನು ಕುಲುಕಿಸುತ್ತಾರೆ. ಹೀಗೆ, ಒಂದು ಸಲ ಗಿಡ ನೆಟ್ಟು ಸುಮ್ಮನಾಗುವುದಿಲ್ಲ. ಅದರ ಉಸ್ತುವಾರಿ ನೋಡುತ್ತಿರುತ್ತಾರೆ. ಊರಲ್ಲಿ ಯಾರದೇ ಹುಟ್ಟು ಹಬ್ಬದಂಥ ಶುಭ ಕಾರ್ಯ ಆದರೆ, ಗಿಡಗಳನ್ನು ದಾನ ಕೊಡುವ ಸಂಪ್ರದಾಯಕ್ಕೆ ಚಿದಾನಂದ್ ಅಂಡ್ ಟೀಂ ನಾಂದಿ ಹಾಡಿದೆ.
ಹಾಗಾದರೆ ಚಿದಾನಂದ್ ಬದುಕಿಗೆ ಏನು ಮಾಡ್ತಾರೆ? ಬರೀ ಸಮಾಜ ಸೇವೆ ಮಾಡಿಕೊಂಡೇ ಇರ್ತಾರ? ಈ ಅನುಮಾನ ಸಹಜ. ಚಿದಾನಂದ್ ಏಟ್ರಿ ಅನ್ನೋ ಸಂಶೋಧನಾ ಸಂಸ್ಥೆಯ ಉದ್ಯೋಗಿ. ಅಲ್ಲಿ ಕೆಲಸ ಮಾಡಿ ಉಳಿದ ಸಮಯವನ್ನು ಇಂಥ ಸಮಾಜ ಸೇವೆಗೆ ತೆಗೆದಿಟ್ಟಿದ್ದಾರೆ. ಸಂಜೆ ಹಾಗೂ ಶನಿವಾರ, ಭಾನುವಾರಗಳಂತೂ ಸಂಪೂರ್ಣ ಸೇವೆಮಯ. ” ನಮಗೆ ಸಮಯಾನೇ ಸಿಗೋಲ್ಲ ಅನ್ನೋರಿಗೆ, ಈ ರೀತಿ ಕೂಡ ಸಮಯ ಹೊಂದಿಸಿ ಸೇವೆ ಮಾಡಬಹುದು ಅಂತ ತೋರಿಸೋಕೆ ಹೀಗೆ ಮಾಡ್ತಾ ಇದ್ದೀನಿ’ ಅಂತಾರೆ ಚಿದಾನಂದ್. ಕಳೆದ 8 ವರ್ಷಗಳಿಂದ ವರ್ಷಕ್ಕೆ ಕನಿಷ್ಠ ಎಂದರೂ, 30-40 ಫೇಲಾದ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ. ಒಂದು ಪಕ್ಷ ಫೇಲಾದರೂ ಎದುಗುಂದುವುದಿಲ್ಲ. ನಮ್ಮ ಬದುಕು ನಾವು ಕಟ್ಟಿಕೊಳ್ಳುತ್ತೇವೆ ಅನ್ನೋ ಆತ್ಮವಿಶ್ವಾಸದಿಂದ ಅವರೆಲ್ಲಾ ಬದುಕುತ್ತಿದ್ದಾರಂತೆ. ವರ್ಷಕ್ಕೆ ಏನಿಲ್ಲ ಅಂದರು , ಇಂಥ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಸಂಚಲನ ತಂಡ ಅರ್ಕಾವತಿ ನದಿ ಪಾತ್ರದ ಸಿಸಿಟಿವಿಗಳಂತೆ ಕಾರ್ಯನಿರ್ವಹಿಸುತ್ತಿದೆ ಕೂಡ.
ಅಂದಹಾಗೆ, ಇವಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ? ಅದಕ್ಕೆ ಚಿದಾನಂದ ಹೀಗೆನ್ನುತ್ತಾರೆ;
ನಮ್ಮ ಉದ್ದೇಶ ಸೇವೆ. ಹಣ ಮಾಡುವುದಲ್ಲ. ಹೀಗಾಗಿ, ಹಣದ ಅಗತ್ಯ ಈ ತನಕ ಬಂದಿಲ್ಲ. ಸ್ಪೋಕನ್ ಇಂಗ್ಲಿಷ್ ಕ್ಲಾಸ್‌ಗೆ ಜಾಗ ಪುಕ್ಕಟೆ. ಮೇಷ್ಟ್ರು ಬಂದು ಪಾಠ ಮಾಡುವುದು ಪುಕ್ಕಟೆ. ನಾವು ಆರ್ಗನೈಸ್ ಮಾಡ್ತೀವಿ ಅಷ್ಟೇ. ಇನ್ನು, ಸಸಿಗಳನ್ನು ನೆಡಲು ಅರಣ್ಯ ಇಲಾಖೆಯ ನೆರವಿದೆ. ಊರಿನ ಜನ ಸಹಾಯ ಮಾಡ್ತಾರೆ. ದೊಡ್ಡಬಳ್ಳಾಪುರದ ಸುತ್ತಮುತ್ತ ಶಾಲಾ ಕಾಲೇಜಿನ ಎನ್‌ಎಸ್ ಎಸ್ ಶಿಬಿರದ ವಿದ್ಯಾರ್ಥಿಗಳ ಜೊತೆ ಸತತ ಸಂಪರ್ಕದಲ್ಲಿರುತ್ತೇನೆ. ಅವರಿಗೆ ಬೇಕಾದ ಐಡಿಯಾಗಳು, ನೆರವುಗಳೂ ಕೊಡುತ್ತಿರುತ್ತೇವೆ. ಹೀಗಾಗಿ, ಹಣ, ಜನರ ಕೊರತೆ ಎಂದೂ ಎದುರಾಗಿಲ್ಲ ‘.
ಶಾಲಾ ಪರೀಕ್ಷೆಯಲ್ಲಿ ಫೇಲಾದವರು, ಬದುಕಿನ ಪರೀಕ್ಷೆಯಲ್ಲಿ ಹೇಗೆಲ್ಲಾ ಪಾಸಾಗಬಹುದು ಎಂಬುದಕ್ಕೆ ಚಿದಾನಂದ ಅವರೇ ಉದಾಹರಣೆ.
ಕಟ್ಟೆ