Advertisement

ಲಾರಿಯಲ್ಲಿ ತಂದು ತ್ಯಾಜ್ಯಸುರಿಯುತ್ತಿದ್ದವರ ಪತ್ತೆಹಚ್ಚಿದ ಗ್ರಾಮಸ್ಥರು

01:08 PM Jul 13, 2018 | Team Udayavani |

ನಿಡ್ಪಳ್ಳಿ : ಕೇರಳದಿಂದ ಕೋಳಿ ತ್ಯಾಜ್ಯವನ್ನು ಲಾರಿಯಲ್ಲಿ ಕರ್ನಾಟಕಕ್ಕೆ ತಂದು ಸುರಿಯಲಾಗುತ್ತಿದೆ. ತ್ಯಾಜ್ಯ ತುಂಬಿದ ಲಾರಿಯನ್ನು ಇರ್ದೆ ಗ್ರಾಮದ ಬಾಳೆಗುಳಿ ಸಮೀಪ ಜು. 12ರಂದು ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಕೇರಳದಿಂದ ಕೋಳಿ ತ್ಯಾಜ್ಯ ತುಂಬಿಕೊಂಡು ಲಾರಿಯಲ್ಲಿ ಬಂದು ಅಲ್ಲಲ್ಲಿ ಸುರಿದುಕೊಂಡು ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಗೆ ಬಂದವರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಾಳೆಗುಳಿಯಲ್ಲಿ ತ್ಯಾಜ್ಯ ಸುರಿಯಲು ನಿಲ್ಲಿಸಿದ್ದ ಲಾರಿಯನ್ನು ಸ್ಥಳೀಯರು ಪತ್ತೆ ಹಚ್ಚಿದ್ದು, ತ್ಯಾಜ್ಯ ತಂದಿರುವುದರ ಹಿಂದಿರುವ ಎಲ್ಲ ವಿಷಯಗಳನ್ನೂ ಬಹಿರಂಗಪಡಿಸುವಂತೆ ಒತ್ತಾಯಿಸಿ ಲಾರಿಯಲ್ಲಿದ್ದ ಐವರನ್ನು ಆಕ್ರೋಶಿತ ಜನರು ತರಾಟೆಗೆ ತೆಗೆದುಕೊಂಡರು. ಲಾರಿಯಲ್ಲಿ ಗೋಣಿಯಲ್ಲಿ ತುಂಬಿದ್ದ ದುರ್ವಾಸನೆಯುಕ್ತ ತ್ಯಾಜ್ಯ ಪತ್ತೆಯಾಗಿದೆ. ಕೋಳಿ ತ್ಯಾಜ್ಯವನ್ನು ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಸರಳೀಕಾನ, ಕುಂಞಮೂಲೆ, ಪೇರಲ್ತಡ್ಕದಲ್ಲಿ ಸುರಿದಿದ್ದರು. ಕಮಿಷನ್‌ ಆಸೆಗೆ ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಿವಾಸಿ ರಫೀಕ್‌ ತ್ಯಾಜ್ಯ ಹಾಕಲು ಪ್ರದೇಶ ತಿಳಿಸುತ್ತಿದ್ದ.

Advertisement

ಅನೇಕ ಕಡೆ ತ್ಯಾಜ್ಯ ಸುರಿದಿದ್ದಾರೆ
ಪಂಚಾಯತ್‌ ವ್ಯಾಪ್ತಿಯ ಗುಮ್ಮಟೆಗದ್ದೆ, ಕುಂಞಮೂಲೆ, ಪೇರಲ್ತಡ್ಕದ ಬೆಂದ್ರ್ ತೀರ್ಥ ಪರಿಸರದಲ್ಲಿ ಹಾಕಿದ ತ್ಯಾಜ್ಯ ವಿಲೇವಾರಿ ಮಾಡಲು ಪಂಚಾಯತ್‌ ವೆಚ್ಚ ಭರಿಸಿದೆ. (ಇದೇ ತರಹ ಬಡಗನ್ನೂರು, ಪುಣಚ, ಬಲಾ°ಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡ ಕೋಳಿ ತ್ಯಾಜ್ಯ ಸುರಿಯಲಾಗಿತ್ತು.) ತ್ಯಾಜ್ಯ ವಿಲೇ ಮಾಡಲು ಪಂಚಾಯತ್‌ ನಲ್ಲಿ ಅನುದಾನವಿಲ್ಲ. ಈ ಹಿಂದೆ ಇವರು ತಂದು ಹಾಕಿದ ತ್ಯಾಜ್ಯ ನಿರ್ವಹಣೆ ಮಾಡಲು ಪಂಚಾಯತ್‌ ಮಾಡಿದ ವೆಚ್ಚದ ದಂಡ ಕಟ್ಟದೆ ಲಾರಿಯನ್ನು ಬಿಡುವುದಿಲ್ಲ ಎಂದು ಬೆಟ್ಟಂಪಾಡಿ ಗ್ರಾ.ಪಂ. ಪಿಡಿಒ ಶೈಲಜಾ ಪ್ರಕಾಶ್‌, ಅಧ್ಯಕ್ಷೆ ಉಮಾವತಿ ಹಾಗೂ ಸದಸ್ಯರು ತಿಳಿಸಿದ್ದಾರೆ. ದಂಡ ಕಟ್ಟಿದ ಆನಂತರ ಪೊಲೀಸ್‌ ಇಲಾಖೆಗೆ
ದೂರು ನೀಡಿ ಅವರಿಗೆ ಮುಂದಿನ ಕ್ರಮ ಜರುಗಿಸಲು ಕೇಳಿಕೊಳ್ಳಲಾಗುವುದು ಎಂದು ಗ್ರಾ.ಪಂ. ಪಿಡಿಒ ಹೇಳಿದ್ದಾರೆ.

ಪಟ್ಟು ಬಿಡದ ಗ್ರಾಮಸ್ಥರು
ಅರಣ್ಯ ಇಲಾಖೆಯ ಸ್ಥಳದಲ್ಲಿ ಮತ್ತು ಪರಿಸರದಲ್ಲಿ ಎಲ್ಲಿಯೂ ಗುಂಡಿ ತೆಗೆದು ತ್ಯಾಜ್ಯ ಹಾಕಲು ನಾವು ಬಿಡುವುದಿಲ್ಲ. ಅದನ್ನು ತಂದವರ ಅಂಗಳದಲ್ಲಿ ಗುಂಡಿ ತೆಗೆದು ಹಾಕಲಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಆನಂತರ ಸುರಿದ ತ್ಯಾಜ್ಯವನ್ನು ಅವರಿಂದಲೇ ಲಾರಿಗೆ ತುಂಬಿಸಲಾಯಿತು. ಲಾರಿಯನ್ನು ಸ್ಥಳದಲ್ಲಿಯೇ ನಿಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಬೆಟ್ಟಂಪಾಡಿ ಪಂಚಾಯತ್‌ ವತಿಯಿಂದ ಸಂಪ್ಯ ಠಾಣೆಗೆ ದೂರು ನೀಡಲಾಯಿತು.

ಪುತ್ತೂರು ತಾ.ಪಂ. ಇಒ ಜಗದೀಶ್‌, ಸಂಪ್ಯ ಪೊಲೀಸ್‌ ಠಾಣೆ ಎಎಸ್ಸೆ„ ಸುರೇಶ್‌ ಹಾಗೂ ಸಿಬಂದಿ, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ, ಪಿಡಿಒ ಶೈಲಜಾ ಹಾಗೂ ಸದಸ್ಯರು, ದ.ಕ. ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್‌ ಘಟನಾ ಸ್ಥಳಕ್ಕೆ ಆಗಮಿಸಿದ್ದರು. 

ಕಠಿನ ಶಿಕ್ಷೆಯಾಗಬೇಕು
ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುವ ಇಂತಹವರಿಗೆ ಕಠಿನ ಶಿಕ್ಷೆಯಾಗಬೇಕು. ಎಷ್ಟೋ ಖರ್ಚು ಮಾಡಿ ನಾವು ಸ್ವಚ್ಚತೆ ಮಾಡುತ್ತೇವೆ. ಅವರು ಹಾಳುಗೆಡವುತ್ತಾರೆ. ಪ್ರದೇಶದಲ್ಲಿ ರೋಗ ಹರಡಲೂ ತ್ಯಾಜ್ಯ ಕಾರಣವಾಗುತ್ತದೆ. ಕಠಿನ ಶಿಕ್ಷೆಯಾದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದು.
ಉಮಾವತಿ ಸುಬ್ಬಪ್ಪ ಮಣಿಯಾಣಿ, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next