ಬೆಂಗಳೂರು: ಕೋಳಿ ಕಪ್ಪು, ಅದರ ರಕ್ತ, ಮಾಂಸವಂತೂ ಇನ್ನೂ ಕಪ್ಪು. ಆದರೆ, ಮೊಟ್ಟೆ ಬಿಳಿ, ರುಚಿ ಮಾತ್ರ ಉತ್ಕೃಷ್ಟ,. ಇದು ಮಧ್ಯಪ್ರದೇಶದ ಕಡಕ್‌ನಾಥ್ ಕೋಳಿಯ ವಿಶೇಷತೆ.! ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಟರ್ಕಿಕೋಳಿ, ಗಿರಿರಾಜ, ನಾಟಿಕೋಳಿ ಹೀಗೆ ಹತ್ತಾರು ಬಗೆಯ ಕೋಳಿಗಳ ಮಾರಾಟ, ಪ್ರದರ್ಶನ ಇದೆ. ಆದರೆ, ಕಡಕ್‌ನಾಥ್ ಕೋಳಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಕೋಳಿಯ ಜುಟ್ಟಿನಿಂದ ಹಿಡಿದ ಪುಕ್ಕದ ವರೆಗಿನ ಮೇಲ್ಮೆ„ ಭಾಗ ಸಂಪೂರ್ಣ ಕಪ್ಪು. ಮಾಂಸ, ರಕ್ತವೂ ಕಪ್ಪಾಗಿದ್ದರೂ, ಇಡುವ ಮೊಟ್ಟೆ ಮಾತ್ರ ಸಾಮಾನ್ಯ ಕೋಳಿ ಮೊಟ್ಟೆಯಂತೆ ಇರುತ್ತದೆ. ರುಚಿ ನಾಟಿ ಕೋಳಿಯನ್ನು ಮೀರಿಸುವಂತಿರುತ್ತದೆ ಎಂದು ಕೋಳಿ ವ್ಯಾಪಾರಿ ಅಬ್ದುಲ್ಲಾ ವಿವರಿಸಿದರು.
ಕಡಕ್‌ನಾಥ್ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಭಾಗದ ತಳಿಯಾಗಿದೆ. ರಾಜ್ಯದಲ್ಲಿ ಈ ಕೋಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೋಳಿ ಕಪ್ಪಿದ್ದರೂ ನೋಡಲು ಆಕರ್ಷಕವಾಗಿದೆ. ವರ್ಷಕ್ಕೆ ಸರಿ ಸುಮಾರು 200 ಮೊಟ್ಟೆ ಇಡುತ್ತದೆ. ಆದರೆ, ಕಾವು ಕೊಟ್ಟು ಮರಿ ಮಾಡುವುದಿಲ್ಲ. ಇದರ ಮೊಟ್ಟೆಗಳನ್ನು ಮರಿ ಮಾಡಬೇಕಾದರೆ ಬೇರೆ ಕೋಳಿಯನ್ನು ಕಾವಿಗೆ ಇಡಬೇಕಾಗುತ್ತದೆ.
ಇದರಲ್ಲಿ ಔಷಧಿಯ ಗುಣಗಳು ಇದೆ ಎಂದು ಕಡಕ್‌ನಾಥ್ ಕೋಳಿ ವ್ಯಾಪಾರಿ ಅಬ್ದುಲ್ಲಾ ಮಾಹಿತಿ ನೀಡಿದರು. ಕೋಳಿ ಮರಿಗೆ 200ರಿಂದ 250 ರೂ. ಇದೆ. ದೊಡ್ಡ ಕೋಳಿಗೆ ಎರಡು ಸಾವಿರದ ವರೆಗೂ ದರ ನಿಗದಿ ಮಾಡಿದ್ದೇವೆ. ಕೋಳಿ ಬೇಡಿಕೆಯಷ್ಟು ಲಭ್ಯವಿಲ್ಲ. ಮರಿಗಳನ್ನು ಸಾಕಿ, ಸಲುವುದು ಸವಾಲಾಗಿದೆ. ಆದರೆ, ಕೋಳಿ ರುಚಿ ಕಂಡವರು ಮತ್ತೇ ಮತ್ತೇ ಖರೀದಿಸುತ್ತಾರೆ.
ರಾಜ್ಯದ ಹಲವು ಭಾಗದಲ್ಲಿ ಕಡಕ್‌ನಾಥ್ ಕೋಳಿ ಲಭ್ಯವಿದೆ ಎಂದು ಹೇಳಿದರು. ಇದರ ಜತೆಗೆ ಮೇಳದಲ್ಲಿ ನಾಟಿ ಕೋಳಿ ಹಾಗೂ ಕಾವೇರಿ ಮೊಟ್ಟೆ ಕೋಳಿ, ಬಾತುಕೋಳಿ, ಅಸೀಲ್, ಗಿರಿರಾಜ ಕೋಳಿ, ಬೃಹಧಾಕಾರದ ಟರ್ಕಿ ಕೋಳಿ, ಗೌಜಲಕ್ಕಿಯ ಜತೆಗೆ ಬಂಡೂರು ಕುರಿ, ಮೇಕೆ, ಮೊಲ ಪ್ರದರ್ಶನ ಮತ್ತು ಮಾರಾಟ ಇದೆ.
ಜಲ್ಲಿಕಟ್ಟಿಗೆ ಹಳ್ಳಿಕಾರ್ ತಳಿ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹಳ್ಳಿಕಾರ್ ತಳಿಯ ಎತ್ತುಗಳು ಅತ್ಯಂತ ಜನಪ್ರಿಯ. ತಮಿಳುನಾಡಿನ ಜಲ್ಲಿಕಟ್ಟಿನಲ್ಲಿ ಬಳಸಲು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಕೊಂಡೊಯ್ಯುತ್ತಾರೆ ಎಂದು ಹಳ್ಳಿಕಾರ್ ತಳಿಯನ್ನು ಕಾಪಾಡಿಕೊಂಡು ಬರುತ್ತಿರುವ ರವಿ ಪಟೇಲ್ ಹೇಳುತ್ತಾರೆ.
ತಮಿಳು ನಾಡಿಗೆ ಮಾತ್ರವಲ್ಲ, ಆಂಧ್ರ ಹಾಗೂ ಕರ್ನಾಟಕ ಕೆಲವು ಭಾಗದಲ್ಲಿ ನಡೆಯುತ್ತಿರುವ ಹೋರಿ ಓಡಿಸುವ ಹಬ್ಬಕ್ಕೂ ಇದೇ ಎತ್ತು ಹೆಚ್ಚಾಗಿ ಬಳಸುತ್ತಾರೆ. ಇದರ ಕೊಂಬು ಅತ್ಯಂತ ನೇರವಾಗಿ ಚೂಪಾಗಿರುತ್ತದೆ. ನೋಡಲು ಎತ್ತರವಾಗಿ ಗಟ್ಟಿಮುಟ್ಟಾಗಿದೆ.
ಎತ್ತಿನ ಬಾಲವು ಅಷ್ಟೇ ಆಕರ್ಷವಾಗಿದೆ. ಕಳೆದ ವರ್ಷ ಕೃಷಿ ಮೇಳದಲ್ಲಿ ಒಂದು ಜತೆ ಹಳ್ಳಿಕಾರ್ ಎತ್ತು 3.70 ಲಕ್ಷ ರೂ. ಮಾರಾಟವಾಗಿತ್ತು. ಈ ವರ್ಷವೂ ಪ್ರದರ್ಶನಕ್ಕೆ ಇಟ್ಟಿದ್ದೇವೆ. ಈ ತಳಿಯ ವಂಶವೃದ್ಧಿಯ ಜತೆಗೆ ದೇಸಿ ತಳಿಯಾಗಿದ್ದರಿಂದ ಉಳಿಸಲು ಬೇಕಾದ ಜಾಗೃತಿ ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ ಎಂದು ರವಿ ಪಟೇಲ್ ವಿವರಿಸಿದರು.