Advertisement

ಪಕ್ಷ ದ್ರೋಹಿ ಪುತ್ರನನ್ನು ಸೋಲಿಸಿ

10:42 AM May 08, 2019 | Naveen |

ಕಲಬುರಗಿ/ಚಿಂಚೋಳಿ: ಕುದುರೆ ವ್ಯಾಪಾರಕ್ಕೆ ಒಳಗಾಗಿ ಜನರ ಯೋಗಕ್ಷೇಮ ನೋಡಿಕೊಳ್ಳದೇ ತನ್ನ ಕ್ಷೇಮವನ್ನೇ ನೋಡಿದ ಪಕ್ಷ ದ್ರೋಹಿ ಡಾ| ಉಮೇಶ ಜಾಧವ ಪುತ್ರ ಡಾ| ಅವಿನಾಶ ಜಾಧವನನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಹೇಳಿದರು.

Advertisement

ತಾಲೂಕಿನ ರಟಕಲ್, ಚಂದನಕೇರಾ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಭಾಶ ರಾಠೊಡ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ| ಉಮೇಶ ಜಾಧವ ಅವರಿಗೆ ರಾಜಕೀಯ ಅನುಭವ ಇರಲಿಲ್ಲ. ಅವರು ವೈದ್ಯರಿದ್ದಾಗ ಇಂಜೆಕ್ಷನ್‌ದಲ್ಲಿ ನೀರು ಹಾಕುತ್ತಿದ್ದರೋ, ಔಷಧ ಹಾಕುತ್ತಿದ್ದರೋ ಗೊತ್ತಿಲ್ಲ. ಈ ಬಗ್ಗೆ ವಿಚಾರಣೆ ನಡೆಸುವೆ ಎಂದರು.

ರಾಜ್ಯದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಜನರಿಗೆ ಹಾಗೂ ದನಕರುಗಳಿಗೆ ಕುಡಿಯಲು ನೀರಿಲ್ಲ. ಯಡಿಯೂರಪ್ಪ ಕೇಂದ್ರಕ್ಕೆ ಹೋಗಿ ಬರ ಪರಿಹಾರಕ್ಕೆ ಅನುದಾನ ಕೊಡಿಸಲಿ. ಅದನ್ನು ಬಿಟ್ಟು ಸಮ್ಮಿಶ್ರ ಸರ್ಕಾರದ ವಿರುದ್ಧ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.

ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಅವರು ಮುಖ್ಯಮಂತ್ರಿ ಇದ್ದಾಗ ಇಲ್ಲಿನ ಸಕ್ಕರೆ ಕಾರಖಾನೆ ನೆನಪಿಗೆ ಬರಲಿಲ್ಲವೇನು? ಈಗ ಕಾಂಗ್ರೆಸ್‌ ಶಾಸಕರನ್ನು ಇಂದ್ರ-ಚಂದ್ರರೆಂದು ಹೊಗಳುತ್ತಾ ಖರೀದಿ ಮಾಡಲು ಹೊರಟಿದ್ದಾರೆ. ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮಾಜಿ ಶಾಸಕ ಡಾ| ಉಮೇಶ ಜಾಧವ ಕಾಂಗ್ರೆಸ್ಸಿನ ಉಪ್ಪು ತಿಂದು, ಆ ಮನೆಗೆ ದ್ರೋಹ ಮಾಡಿದ್ದಾರೆ. 2013 ಮತ್ತು 2019ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್ ಕೊಡಿಸಿದ್ದೇವೆ. ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮತ್ತು ಉಗ್ರಾಣ ನಿಗಮ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ನಿಮ್ಮೆಲ್ಲರ ಆಶೀರ್ವಾದವನ್ನು ಮಾರಾಟ ಮಾಡಿ ಮುಬೈಗೆ ಹೋಗಿ ಅಲ್ಲಿ ಕಮಲ ಹೂ ಹಿಡಿದುಕೊಂಡಿದ್ದಾರೆ. ಅದು ಈಗ ಬಾಡಿದ ಕಮಲದ ಹೂವಾಗಿದೆ. ಇದಕ್ಕೆ ಮತ ನೀಡಬೇಡಿರಿ ಎಂದರು.

ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 1860 ಕೋಟಿ ರೂ. ನರೇಗಾ ಯೋಜನೆ ಅಡಿಯಲ್ಲಿ ಹಣ ನೀಡಬೇಕು. ಜನರಿಗೆ ಬಿಲ್ಲು ಕೊಟ್ಟಿಲ್ಲ. ಜನರು ನೀಡಿದ ತೆರಿಗೆ ಹಣ ದೇಶದ ಖಜಾನೆ ಭರ್ತಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಬರಿ ಭಾಷಣ ಮಾಡುತ್ತಾರೆ. ಏನಾದರೂ ಕೆಲಸ ಮಾಡಿ ತೋರಿಸಿದ್ದಾರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಚಿಂಚೋಳಿಯಲ್ಲಿ ಮಠಾಧೀಶರನ್ನು ಭೇಟಿ ಮಾಡಿ ಹೋಗಿದ್ದಾರೆ. ಸ್ವಾಮಿಗಳು, ಮಠಾಧಿಧೀಶರು ಯಾರ ಸ್ವತ್ತಲ್ಲ. ಅವರು ಎಲ್ಲ ಮಠಗಳನ್ನು ಗುತ್ತಿಗೆ ಪಡೆದಿದ್ದಾರೆಯೇ? ನಮ್ಮ ಪಕ್ಷದಲ್ಲಿಯೂ ಎಲ್ಲ ಜಾತಿ ಜನಾಂಗದವರು ಇಲ್ಲವೇ ಎಂದು ಕೇಳಿದರು.

ಕೆಪಿಸಿಸಿ (ಐ) ಅಧ್ಯಕ್ಷ ದಿನೇಶ ಗುಂಡೂರಾವ ಮಾತನಾಡಿ, ಮಾಜಿ ಶಾಸಕ ಡಾ| ಉಮೇಶ ಜಾಧವ ರಾಜಕೀಯ ವ್ಯಕ್ತಿ ಆಗಿರಲಿಲ್ಲ. ಪಕ್ಷದ ಪರವಾಗಿ ಎಲ್ಲಿಯೂ ಹೋರಾಟ ನಡೆಸಿಲಿಲ್ಲ. 2013ರಲ್ಲಿ ಕಾಂಗ್ರೆಸ್‌ ಪಕ್ಷದ ಟಿಕೆಟ್ ನೀಡಿ ಗೆಲ್ಲಿಸಲಾಯಿತು. ರಾಜಕೀಯ ಜನ್ಮಕ್ಕೆ ಕಾರಣವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಚೂರಿ ಹಾಕಿ, ಹೇಡಿತನ ಪ್ರದರ್ಶಿಸಿದ ಸಾಧಕರಿಗೆ ತಕ್ಕ ಪಾಠ ಕಲಿಸಬೇಕಿದೆ. ರಾಜಕೀಯದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಆದರೆ ದುರಾಸೆ ಇರಬಾರದು. ಆತನ ಒಳ ಮನಸ್ಸು ನಮಗೆ ಗೊತ್ತಾಗಲಿಲ್ಲ. ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆ ನಂತರ ಯಾವುದೇ ಬದಲಾವಣೆ ಆಗುವದಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ಸಮ್ಮಿಶ್ರ ಸರಕಾರ ಐದು ವರ್ಷ ಸುಭಧ್ರವಾಗಿರುತ್ತದೆ ಎಂದರು

ಕಾಂಗ್ರೆಸ್‌ ಅಭ್ಯರ್ಥಿ ಸುಭಾಶ ರಾಠೊಡ ಮಾತನಾಡಿ, ಚಿಂಚೋಳಿ ಜನರ ಆಶೀರ್ವಾದವನ್ನು ಮುಂಬೈ ಫೈವ್‌ಸ್ಟಾರ್‌ ಹೋಟೆಲ್ ಮಾರಾಟ ಮಾಡಿಕೊಂಡವನಿಗೆ ತಕ್ಕ ಪಾಠ ಕಲಿಸಿ. ನಾನು ಇಲ್ಲಿಯೇ ಕಾಲಿನ ಧೂಳಾಗಿ ದುಡಿಯುತ್ತಿದ್ದೇನೆ. 24 ವರ್ಷಗಳಿಂದ ನಾನು ಚಿಂಚೋಳಿ ಜನರ ಸೇವೆ ಮಾಡುತ್ತಿದ್ದೇನೆ. ಆಶೀರ್ವದಿಸಿ ಎಂದು ಮತಯಾಚಿಸಿದರು.

ಕೆಪಿಸಿಸಿ (ಐ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ಕೈಲಾಶನಾಥ ಪಾಟೀಲ, ಸಚಿವ ರಾಜಶೇಖರ ಪಾಟೀಲ, ಸಚಿವ ರಹೀಮ ಖಾನ್‌, ಶಾಸಕ ಎಸ್‌.ಟಿ. ಸೋಮಶೇಖರ, ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಭೀಮರಾವ ತೇಗಲತಿಪ್ಪಿ, ತಿಪ್ಪಣ್ಣಪ್ಪ ಕಮಕನೂರ, ರವಿರಾಜ ಕೊರವಿ, ಜಿಪಂ ಸದಸ್ಯ ಗೌತಮ ಪಾಟೀಲ, ಭವಾನಿ ಪತ್ತೇಪೂರ, ಕೆ.ಎಂ.ಬಾರಿ, ಅಮರ ಲೊಡನೋರ, ಶರಣಗೌಡ ಪಾಟೀಲ, ದತ್ತಾತ್ರೇಯ ಪಾಟೀಲ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next