Advertisement

“ಚೌಲಿ’ಕೆ ಪೀಛೆ ಕ್ಯಾ ಹೈ?

12:59 PM Sep 27, 2017 | |

ಫ್ಯಾಷನ್‌ ಜಗತ್ತಿನಲ್ಲಿ ಹಳೆಯದೆಲ್ಲಾ ಮತ್ತೆ ಹೊಸ ರೂಪು ಪಡೆದು ಮರುಕಳಿಸುತ್ತದಂತೆ. ಇತ್ತೀಚಿನ ಮದುವೆ ಸಮಾರಂಭಗಳಲ್ಲಿ ಒಂದು ದಿನ ಸಾಂಪ್ರದಾಯಿಕ ವೇಷಭೂಷಣ ತೊಡುವ ರೀತಿ ಹೆಚ್ಚಾಗಿ, ಚೌಲಿ ಮತ್ತೂಮ್ಮೆ ಹೆಂಗಳೆಯರ ಫ್ಯಾಷನ್‌ನಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತಿದೆ. ದಸರಾಗೂ ಅನೇಕ ಮಹಿಳೆಯರು ಚೌಲಿಯನ್ನೇ ಸೌಂದರ್ಯದ ಕಿರೀಟ ಮಾಡಿಕೊಂಡಿದ್ದಾರೆ…

Advertisement

ಮೊನ್ನೆ ಕಿಟ್ಟಿ ಪಾರ್ಟಿಯಲ್ಲಿ ಗೆಳತಿ ವಿಜೂ, ಈ ಬಾರಿಯ ದಸರಾದಲ್ಲಿ ದಾಂಡಿಯಾ ನೃತ್ಯಕ್ಕೆ ಎಲ್ಲರೂ ಉದ್ದ ಜಡೆ ಹಾಕಿಕೊಂಡು, ಅದಕ್ಕೆ ಹೂ ಸುತ್ತಿಕೊಂಡು, ಜಡೆಯ ತುದಿಗೆ ಕುಚ್ಚು ಕಟ್ಟಿಕೊಂಡು ಬರಬೇಕು ಎಂದಾಗ ಎಲ್ಲರೂ ಹೋ… ಎಂದು ಖುಷಿಯಿಂದ ಕೂಗಿದೆವು. ಇರುವ ಹನ್ನೆರಡು ಗೆಳತಿಯರಲ್ಲಿ ಉದ್ದ ಕೂದಲಿರುವುದು ಒಬ್ಬರಿಗೋ, ಇಬ್ಬರಿಗೋ ಅಷ್ಟೇ. ಉಳಿದ ಯಾರ ಕೂದಲೂ ಅರ್ಧ ಬೆನ್ನಿಗಿಂತ ಕೆಳಗೆ ಇಲ್ಲವೇ ಇಲ್ಲ. ಹಾಗಾಗಿ ಎಲ್ಲರೂ ಚೌಲಿಯ ಮೊರೆ ಹೋಗಲೇಬೇಕು ಎಂದು ನಿರ್ಧರಿಸಿದ್ದಾಯ್ತು. ಬಹಳ ವರ್ಷಗಳ ನಂತರ ಕೇಳಿದ ಚೌಲಿ ಎಂಬ ಪದ ನನ್ನನ್ನು ಬಾಲ್ಯದ ನೆನಪಿಗೆ ನೂಕಿತು.

ಚಿಕ್ಕವರಿದ್ದಾಗ ಮನೆಯಲ್ಲಿ ಅಜ್ಜಿ, ಅಮ್ಮ, ಚಿಕ್ಕಮ್ಮಂದಿರು, ಸೋದರತ್ತೆಯರು ಎಲ್ಲರೂ ಚೌಲಿ ಸೇರಿಸಿಯೇ ಜಡೆ ಹೆಣೆದುಕೊಳ್ಳುತ್ತಿದ್ದರು. ಹಾಗಾಗಿ ಬುದ್ಧಿ ಬರುವ ತನಕವೂ, ಜಡೆ ಅಂದರೆ ಚೌಲಿ ಜೊತೆಯಲ್ಲೇ ಹೆಣೆಯುವುದು ಅಂತ ತಿಳಿದಿದ್ದೆವು. ತಲೆಯ ಎಡ ಮಧ್ಯದಲ್ಲಿ ಬೈತಲೆ ತೆಗೆದು, ಕಿವಿಯ ಮೇಲಿಂದ ಕೂದಲು ಹಾದುಹೋಗುವಂತೆ ಸಡಿಲವಾಗಿ ಬಾಚಿಕೊಂಡು, ಎರಡೂ ಬದಿಗೆ ಎರಡು ಸುಜಾತಾ ಹೇರ್‌ಪಿನ್‌ಗಳನ್ನು ಸಿಗಿಸಿ, ಅರ್ಧ ಜಡೆ ಹೆಣೆದ ನಂತರ ಚೌಲಿಯ ಮೇಲಿನ ತುದಿಯನ್ನು ಜಡೆಯ ಹಿಂಭಾಗದಿಂದ ಸೇರಿಸಿ ಹೆಣೆದು, ತುದಿಗೆ ಒಂದು ರಿಬ್ಬನ್ನೋ, ಹೇರ್‌ಪಿನ್ನೋ ಹಾಕಿ ಬಿಗಿಯುತ್ತಿದ್ದರು. ಮುಂಗುರಳನ್ನು ಸ್ವಲ್ಪ ತೀಡಿಕೊಂಡು ನಂತರ ತಲೆತುಂಬಾ ಹೂವು ಮುಡಿಯುತ್ತಿದ್ದ ಅವರನ್ನು ನೋಡುತ್ತಿದ್ದರೆ, ಸಾûಾತ್‌ ದೇವಿಯರನ್ನೇ ನೋಡಿದಂತೆ ಭಾಸವಾಗುತ್ತಿತ್ತು.

ಚಿಕ್ಕವರಿದ್ದಾಗ ನಮಗೂ ಹಬ್ಬ ಹುಣ್ಣಿಮೆಗಳಲ್ಲಿ ಚೌಲಿ ಹೆಣೆಯುತ್ತಿದ್ದರು. ಅದರಲ್ಲೂ ಗೌರಿ ಹಬ್ಬದ ದಿನ ಸೀರೆ ಉಟ್ಟು, ಉದ್ದನೆಯ ಚೌಲಿ ಹೆಣೆದುಕೊಂಡು, ಜಡೆಬಿಲ್ಲೆ ಧರಿಸಿದ ಪುಟ್ಟಗೌರಿಯರು ಎಲ್ಲರ ಮನೆಯಲ್ಲೂ ಕಾಣಸಿಗುತ್ತಿದ್ದರು.  ಚೌಲಿಯ ತುದಿಗೆ ಕಟ್ಟುವ ಕುಚ್ಚನ್ನು ಅಜ್ಜಿಯ ಊರಿಗೆ ಜಾತ್ರೆಗೆಂದು ಹೋದಾಗ ಖರೀದಿಸುತ್ತಿದ್ದೆವು. ಬಗೆಬಗೆಯ ಹೊಳೆಯುವ ಬಣ್ಣದ ವೆಲ್ವೇಟ್‌ ಬಟ್ಟೆಯ ಒಳಗೆ ಅದೇನನ್ನಿಟ್ಟು ದುಂಡಗೆ ಹೊಲೆಯುತ್ತಿದ್ದರೋ ಗೊತ್ತಿಲ್ಲ, ಮೂರು ದುಂಡನೆಯ ವೆಲ್ವೇಟ್‌ ಬಾಲ್‌ಗ‌ಳನ್ನು ಒಟ್ಟಾಗಿ ಹೊಲಿದು ಅದಕ್ಕೆ ಮುತ್ತಿನಿಂದ ಇಲ್ಲವೇ ಮಿಣಿ ಮಿಣಿ ಟಿಕಳಿಯಿಂದ ಕಲಾತ್ಮಕವಾಗಿ ಹೆಣೆದಿರುತ್ತಿದ್ದರು. ಅದನ್ನು ಜಡೆಯ ತುದಿಗೆ ಕಟ್ಟಿಕೊಂಡು ನಡೆಯುವಾಗ ಅದು ಅತ್ತಿಂದಿತ್ತ, ಇತ್ತಿಂದತ್ತ ಓಲಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಕಣ್ಣಿಗೆ ಕಾಡಿಗೆ ಹಚ್ಚಿ, ಹಣೆಯ ಮಧ್ಯದಲ್ಲಿ ಕುಂಕುಮ ಇಟ್ಟು, ಕತ್ತಿಗೆ ಬಗೆಬಗೆಯ ಮಣಿಸರ ಹಾಕಿ, ಕಿವಿಗೆ ಜುಮುಕಿ ಹಾಕಿ ನನ್ನಮ್ಮ ನಮ್ಮನ್ನು ಕೈಯಿಂದ ನೀವಾಳಿಸಿ ಲಟಿಕೆ ಮುರಿಯುತ್ತಿದ್ದ ನೆನಪು ಇನ್ನೂ ಹಸಿರಾಗಿದೆ.

ಇನ್ನು ಮೊಗ್ಗಿನ ಜಡೆಯನು ಮರೆತವರುಂಟೆ! ಚಿಕ್ಕವರಿದ್ದಾಗ ಗಂಡು ಮಕ್ಕಳಿಗೂ ಕೂದಲು ತೆಗೆಸುವ ಮೊದಲು ಮೊಗ್ಗಿನ ಜಡೆ ಹಾಕಿ ಫೋಟೋ ತೆಗೆಸುತ್ತಿದ್ದುದು ಅಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಹೆಣ್ಣು ಮಕ್ಕಳನ್ನು ಕೇಳಬೇಕೇ? ಹಾಗೆ ಫೋಟೊ ತೆಗೆಸಿಕೊಳ್ಳುವುದು ಅವರ ಮಹದಾಸೆಯಾಗಿರುತ್ತಿತ್ತು. ಜಡೆ ಹೆಣೆಯುವ ದಿನವಂತೂ ಮನೆಯಲ್ಲಿ ಬಗೆಬಗೆಯ ಬಣ್ಣದ ಹೂಗಳ ಸುವಾಸನೆ ಮನೆಯೆಲ್ಲ ಘಮಗುಡುತ್ತಿತ್ತು. ಮೊಗ್ಗಿನ ಜಡೆ ಹೆಣೆಯುವಾಗಲೂ ನಮ್ಮ ಚಿಕ್ಕ ಕೂದಲಿನ ಬುಡದಿಂದ ಚೌಲಿ ಕಟ್ಟಿ ನಂತರ ಜಡೆ ಹೆಣೆಯುತ್ತಿದ್ದರು. ತುಂಡು ಕೂದಲುಗಳು ಆಚೀಚೆ ಬಾರದಂತೆ ಹೇರ್‌ಪಿನ್ನುಗಳ, ಯೂ ಪಿನ್ನುಗಳ ಸಂತೆಯೇ ನಮ್ಮ ತಲೆಯಲ್ಲಿರುತ್ತಿತ್ತು. ಅಕ್ಕಪಕ್ಕದ ಮನೆಯವರಿಗೆಲ್ಲಾ ಮೊಗ್ಗಿನ ಜಡೆ ತೋರಿಸಿ, ನಂತರ ಸ್ಟುಡಿಯೋಕ್ಕೆ ಹೋಗಿ ಫೋಟೊ ಹೊಡೆಸಿಕೊಂಡು ಬರುವುದರೊಳಗೆ ಎಲ್ಲಿ ಜಡೆ ಉದುರಿ ಹೋಗುತ್ತದೋ ಎಂಬ ಆತಂಕ ದೊಡ್ಡವರದ್ದು. ಸಂಜೆಯ ನಂತರ ಚೌಲಿಯಲ್ಲಿ ಅಲಂಕೃತ ಮೊಗ್ಗಿನ ಜಡೆಯನ್ನು ಬಿಚ್ಚಿ ಒಂದು ಮೊಳೆಗೆ ನೇತು ಹಾಕುತ್ತಿದ್ದರು. ಒಂದೆರಡು ದಿನ ಗೆಳತಿಯರನ್ನೆಲ್ಲಾ ಕರೆದು, ಅದನ್ನು ತೋರಿಸಿ ಸಂಭ್ರಮಿಸಿದ ಪರಿ ನೆನಪಿನಂಗಳದಲ್ಲಿ ಇನ್ನೂ ಹಸಿರು. ಕಾಲ ಸರಿದಂತೆ ಚೌಲಿ ಧರಿಸುವುದು ತುಂಬಾ ಕಡಿಮೆಯಾಗಿ, ಹೆಚ್ಚು ಕಡಿಮೆ ಮರೆತೇ ಹೋಗುವ ಸ್ಥಿತಿಗೆ ಬಂದಿದೆ.

Advertisement

ಆದರೆ, ಫ್ಯಾಷನ್‌ ಜಗತ್ತಿನಲ್ಲಿ ಹಳೆಯದೆಲ್ಲಾ ಮತ್ತೆ ಹೊಸ ರೂಪು ಪಡೆದು ಮರುಕಳಿಸುತ್ತದಂತೆ. ಇತ್ತೀಚಿನ ಮದುವೆ ಸಮಾರಂಭಗಳಲ್ಲಿ ಒಂದು ದಿನ ಸಾಂಪ್ರದಾಯಿಕ ವೇಷಭೂಷಣ ತೊಡುವ ರೀತಿ ಹೆಚ್ಚಾಗಿ, ಚೌಲಿ ಮತ್ತೂಮ್ಮೆ ಹೆಂಗಳೆಯರ ಫ್ಯಾಷನ್‌ನಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತಿದೆ. ಈಗ ಅದೆಷ್ಟೋ ಡಿಸೈನ್‌ನ ಚೌಲಿಗಳು, ಕಲಾತ್ಮಕವಾಗಿ ಹೆಣೆದ ಕೃತಕ ಮೊಗ್ಗಿನ ಜಡೆಗಳು ನವ ವಧುವಿನ, ಹೆಂಗಳೆಯರ ಅಲಂಕಾರದಲ್ಲಿ ಪ್ರಾಶಸ್ತ$Â ಪಡೆಯುತ್ತಿವೆ. ಹಾಗಾಗಿ, ಚೌಲಿ ಮತ್ತೆ ಹೊಸ ರೂಪದಲ್ಲಿ ಮಿರಿಮಿರಿ ಮಿಂಚುತ್ತಿದೆ.

ಈ ದಸರಾದಲ್ಲಿ ಗೆಳತಿಯರ ದೆಸೆಯಿಂದ ಮತ್ತೂಮ್ಮೆ ನನ್ನ ಕೇಶಕ್ಕೆ ಚೌಲಿಯ ಭಾಗ್ಯ ಲಭಿಸುತ್ತಿದೆ. ಮತ್ತೂಮ್ಮೆ ಚೌಲಿ ಧರಿಸಿದ ಗೌರಿಯರು ನಾವಾಗುತ್ತಿದ್ದೇವೆ ಎಂಬ ಪುಳಕವೇ ಮನಸ್ಸಿಗೆ ಮುದ ನೀಡಿದೆ.

ನಳಿನಿ ಟಿ. ಭೀಮಪ್ಪ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next