ಮುಂಬಯಿ: ಕೊಲೆ ಯತ್ನ ಪ್ರಕರಣದಲ್ಲಿಭಾಗಿಯಾಗಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯನೊಬ್ಬನನ್ನು ಪೂರ್ವ ಉಪನಗರದಿಂದ ಬಂಧಿಸಲಾಗಿದೆ.
ಡಿಯೋನಾರ್ ಪೊಲೀಸ್ ಠಾಣೆಯ ತಂಡ ಗುರುವಾರ ಸಂಜೆ ಚೆಂಬೂರ್ ಪ್ರದೇಶದಲ್ಲಿ ಆರೋಪಿ ವಿಲಾಸ್ ಬಲರಾಮ್ ಪವಾರ್ ಅಲಿಯಾಸ್ ರಾಜು (62) ನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಜ(ಜ3)ತಿಳಿಸಿದ್ದಾರೆ.
ಕೊಲೆ ಮತ್ತು ಕೊಲೆ ಯತ್ನದಂತಹ ಗಂಭೀರ ಅಪರಾಧಗಳಲ್ಲಿ ಪವಾರ್ ಭಾಗಿಯಾಗಿದ್ದ ಮತ್ತು ಅತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. 1992 ರಲ್ಲಿ ಘಾಟ್ಲಾ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ, 2008 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅಲ್ಲಿಂದ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧನದಿಂದ ತಪ್ಪಿಸಿಕೊಳ್ಳಲು ಆತ ಸ್ಥಳಗಳನ್ನು ಬದಲಾಯಿಸುತ್ತಲೇ ಇದ್ದ. ಪವಾರ್ ನವಿ ಮುಂಬೈನ ನೆರೂಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ನಿರ್ಮಾಣ ಸ್ಥಳಗಳಿಗೆ ಕಾರ್ಮಿಕರನ್ನು ಪೂರೈಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ಛೋಟಾ ರಾಜನ್ ಗ್ಯಾಂಗ್ನ ಸಕ್ರಿಯ ಸದಸ್ಯನಾಗಿದ್ದ, 1990 ರ ದಶಕದಲ್ಲಿ ದಾದರ್ನಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಪವಾರ್ ನನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.