ಮುಂಬಯಿ: 95ನೇ ಆಸ್ಕರ್ ಅಕಾಡೆಮಿ ಆವಾರ್ಡ್ಸ್ ಗೆ ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ ʼಛೆಲ್ಲೋ ಶೋʼ ಎಂಟ್ರಿ ಪಡೆದುಕೊಂಡಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ʼಆರ್ ಆರ್ ಆರ್ʼ, ʼದಿ ಕಾಶ್ಮೀರ್ ಫೈಲ್ಸ್ʼ ಆಸ್ಕರ್ ರೇಸ್ ನಿಂದ ಹೊರ ಬಿದ್ದಿದೆ.
ರಾಜಮೌಳಿ ಅವರ ʼಆರ್ ಆರ್ ಆರ್ʼ ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ʼದಿ ಕಾಶ್ಮೀರ್ ಫೈಲ್ಸ್ʼ ದೊಡ್ಡ ಮಟ್ಟದ ಹಿಟ್ ಆಗಿತ್ತು. ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದ ಈ ಚಿತ್ರಗಳು ಭಾರತ ಹಾಗೂ ವಿದೇಶದಲ್ಲೂ ಒಳ್ಳೆಯ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಎರಡೂ ಚಿತ್ರಗಳು ಆಸ್ಕರ್ ಗೆ ನಾಮಿನೇಟ್ ಆಗುತ್ತವೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಮಂಗಳವಾರ ಭಾರತದಿಂದ ಆಸ್ಕರ್ ಗೆ ಪಾನ್ ನಳಿನ್ ನಿರ್ದೇಶನದ ʼಛೆಲ್ಲೋ ಶೋʼ ಅಧಿಕೃತ ಎಂಟ್ರಿ ಪಡೆದ ಬಳಿಕ ʼದಿ ಕಾಶ್ಮೀರ್ ಫೈಲ್ಸ್ʼ, ʼಆರ್ ಆರ್ ಆರ್ʼ ರೇಸ್ ನಿಂದ ಹೊರ ಬಿದ್ದಿದೆ.
ʼಛೆಲ್ಲೋ ಶೋʼ ಆಸ್ಕರ್ ಗೆ ಎಂಟ್ರಿಯಾದ ಬಳಿಕ ನಿರ್ದೇಶಕ ಪಾನ್ ನಳಿನ್ ಅವರ ಬಳಿ ಮಾಧ್ಯಮದವರು, ʼಆರ್ ಆರ್ ಆರ್ʼ ಹಾಗೂ ʼಕಾಶ್ಮೀರ್ ಫೈಲ್ಸ್ʼ ಚಿತ್ರವನ್ನು ಮೀರಿಸಿದ್ದೀರಿ ಈ ಬಗ್ಗೆ ಏನು ಹೇಳುತ್ತೀರಿ ಎಂದಾಗ ನಳಿನ್ , “ಕ್ಷಮಿಸಿ ಈ ಬಗ್ಗೆ ನಾನೇನು ಹೇಳಲ್ಲ. ಇದು 17 ಜನರನ್ನು ಒಳಗೊಂಡ ತೀರ್ಪುಗಾರರ ಅವಿರೋಧ ಆಯ್ಕೆಯಾಗಿತ್ತು. ತೀರ್ಪುಗಾರರು ಮಾಧ್ಯಮದಲ್ಲಿ ಸುದ್ದಿಯಾಗುತ್ತಿರುವ ಇತರ ಎರಡು ಸಿನಿಮಾ (ʼ ಆರ್ ಆರ್ ಆರ್ʼ ಹಾಗೂ ʼಕಾಶ್ಮೀರ್ ಫೈಲ್ಸ್ʼ)ವನ್ನು ನೋಡಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.
ಇನ್ನು ʼಆರ್ ಆರ್ ಆರ್ʼ ಗೆ ಆಸ್ಕರ್ ಗೆ ಎಂಟ್ರಿಯಾಗಲು ಇನ್ನೊಂದು ಹಾದಿಯೂ ಇದೆ. ಯುಎಸ್ ಎಯಲ್ಲಿ ಚಿತ್ರವನ್ನು ವಿತರಿಸಿದ ವೇರಿಯನ್ಸ್ ಫಿಲ್ಮ್ಸ್ ವಿವಿಧ ವಿಭಾಗದಲ್ಲಿ ಆರ್ ಆರ್ ಆರ್ ನ್ನು ಆಸ್ಕರ್ ಗೆ ಕಳುಹಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
‘ಛೆಲ್ಲೋ ಶೋ’ ಚಿತ್ರ 9 ವರ್ಷದ ಬಾಲಕನೊಬ್ಬನಿಗೆ ಸಿನಿಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು ವಿವರಿಸುತ್ತದೆ. ಈ ಸಿನಿಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಿತ್ತು. ಭವಿನ್ ರಾಬರಿ, ಭವೇಶ್ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಸಿನಿಮಾ ಸ್ಪೇನ್‌ನ ಚಲನ ಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೇ ಅ.14ರಂದು “ಲಾಸ್ಟ್ ಫಿಲಂ ಶೋ'(ಇಂಗ್ಲಿಷ್) ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮೊದಲೇ ಈ ಚಿತ್ರ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.