ಹೊಸದಿಲ್ಲಿ: ಕೇರಳ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಛತ್ತೀಸ್‌ಗಢದ ಕಾಂಗ್ರೆಸ್ ಸರಕಾರ 2008ರ ರಾಷ್ಟ್ರೀಯ ತನಿಖಾ ಕಾಯ್ದೆಯನ್ನು (ಎನ್‌ಐಎ) ವಿರೋಧಿಸಿ ಸುಪ್ರೀಂಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.
ವಿಶೇಷವೆಂದರೆ ಈ ಕಾಯ್ದೆ ರಚನೆಯಾಗಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರಸರಕಾರದ ಅವಧಿಯಲ್ಲಿ.
ಸಂವಿಧಾನದ ವಿಧಿ 131 ನೀಡುವ ಅಧಿಕಾರ ಬಳಸಿ, ಛತ್ತೀಸ್‌ಗಢ ರಾಷ್ಟ್ರೀಯ ತನಿಖಾ ಕಾಯ್ದೆಯನ್ನು ವಿರೋಧಿಸಿದೆ. ಈ ಕಾಯ್ದೆ ಕೇಂದ್ರ ಸರಕಾರದ ವಿರುದ್ಧ ಯಾವುದೇ ತಕರಾರುಗಳಿದ್ದಲ್ಲಿ, ನೇರವಾಗಿ ಅರ್ಜಿ ಸಲ್ಲಿಸುವ ಅಧಿಕಾರಗಳನ್ನು ರಾಜ್ಯ ಸರಕಾರಗಳಿಗೆ ನೀಡಿದೆ.
ತಕರಾರು ಏನು?: ಎನ್‌ಐಎ ಕಾಯ್ದೆ ಕೇಂದ್ರ ಸರಕಾರದ ಅಧಿಕಾರವ್ಯಾಪ್ತಿಯನ್ನು ಮೀರಿದೆ. ಮಾತ್ರವಲ್ಲ ರಾಜ್ಯಸರಕಾರದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಪ್ರಕರಣವೊಂದನ್ನು ರಾಜ್ಯಸರಕಾರ ಪೊಲೀಸರ ಮೂಲಕ ತನಿಖೆ ನಡೆಸುತ್ತಿದ್ದರೂ, ಕೇಂದ್ರ ಸರಕಾರ ಸ್ವತಂತ್ರ ತನಿಖಾ ಸಂಸ್ಥೆ ರಚಿಸಲು ಅವಕಾಶ ನೀಡುತ್ತದೆ.
ಇಲ್ಲಿ ಎಲ್ಲ ಅಧಿಕಾರವೂ ಕೇಂದ್ರದ ಬಳಿಯೇ ಇರುತ್ತದೆ. ರಾಜ್ಯಕ್ಕೆ ಪೂರ್ವಭಾವಿಯಾಗಿ ಮಾಹಿತಿ ನೀಡಬೇಕು, ಅನುಮತಿ ಪಡೆಯಬೇಕು, ಮಾತುಕತೆ ನಡೆಯಬೇಕು ಎನ್ನುವ ಯಾವುದೇ ಔಪಚಾರಿಕತೆಗಳೂ ಅಲ್ಲಿರುವುದಿಲ್ಲ ಎಂದು ಚತ್ತೀಸ್‌ಗಢ ವಾದಿಸಿದೆ.