ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸಿದರು ಅವರ ಚಿಂತನೆಗಳನ್ನು ಏಕ ಭಾರತ ಶ್ರೇಷ್ಠ ಭಾರತದ ದೃಷ್ಟಿಯಲ್ಲಿ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಛತ್ರಪತಿ ಶಿವಾಜಿ ಅವರನ್ನು ʻಶೌರ್ಯ ಮತ್ತು ಧೈರ್ಯದ ದಾರಿದೀಪʼ ಎಂದು ಕರೆದರು. ಮಹಾರಾಜರು ದೇಶಕ್ಕೆ ಸ್ಫೂರ್ತಿ ನೀಡಿದ್ದು, ಅವರ ಚಿಂತನೆಗಳನ್ನು ‘ಏಕ ಭಾರತ ಶ್ರೇಷ್ಠ ಭಾರತ’ದ ದೃಷ್ಟಿಯಲ್ಲಿ ನೋಡಬಹುದಾಗಿದೆ ಎಂದರು.
“ನೂರಾರು ವರ್ಷಗಳ ಗುಲಾಮಗಿರಿಯು ನಮ್ಮ ದೇಶವಾಸಿಗಳ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಂಡಿತ್ತು. ಆ ಸಮಯದಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಕಷ್ಟಕರವಾದ ಕೆಲಸವಾಗಿತ್ತು. ಆದರೆ ಛತ್ರಪತಿ ಶಿವಾಜಿ ಮಹಾರಾಜರು ಆ ಅವಧಿಯಲ್ಲಿ ಆಕ್ರಮಣಕಾರರ ವಿರುದ್ಧ ಹೋರಾಡಿದರು. ಸ್ವರಾಜ್ಯ ಸಾಧ್ಯ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದ್ದರು ಎಂದು ಹೇಳಿದರು.
ಈ ದಿನವನ್ನು ಮಹಾರಾಷ್ಟ್ರದಾದ್ಯಂತ ಹಬ್ಬದಂತೆ ಆಚರಿಸಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದಾಗ ಅದು ಸ್ವರಾಜ್ಯ ಘೋಷಣೆ ಮತ್ತು ರಾಷ್ಟ್ರೀಯತೆಯ ಮೆರಗು ನೀಡಿತು ಮತ್ತು ಹೊಸ ಪ್ರಜ್ಞೆ ಮತ್ತು ಹೊಸ ಶಕ್ತಿಯನ್ನು ತಂದಿತು.
“ಇಷ್ಟು ವರ್ಷಗಳ ನಂತರವೂ, ಅವರು ಸ್ಥಾಪಿಸಿದ ಮೌಲ್ಯಗಳು ನಮಗೆ ಮುಂದಿನ ದಾರಿಯನ್ನು ತೋರಿಸುತ್ತಿವೆ. ಈ ಮೌಲ್ಯಗಳ ಆಧಾರದ ಮೇಲೆ ನಾವು 25 ವರ್ಷಗಳ ‘ಅಮೃತ್ ಕಾಲ’ದ ಪ್ರಯಾಣವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದರು.