Advertisement

ಛತ್ರಪತಿ ಶಿವಾಜಿ ಮರಾಠರಿಗೆ ಸೀಮಿತವಲ್ಲ

03:20 PM Sep 16, 2019 | Suhan S |

ರಾಮನಗರ: ಛತ್ರಪತಿ ಶಿವಾಜಿ ಭಾರತ ರಾಷ್ಟ್ರದ ಹೆಮ್ಮಯ ಪುತ್ರ, ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ವೀರ, ಆತ ಕೇವಲ ಮರಾಠರಿಗೆ ಸೀಮಿತವಾಗಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ಕ್ಷತ್ರಿ ಮರಾಠ ಪರಿಷತ್‌ನ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ ಹಾಗೂ ಸಮುದಾಯದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿವಾಜಿ ಖಡ್ಗ ಹಿಡಿದು ಜಳಪಿಸಿದರೆ ವೈರಿ ಹೃದಯ ನಡಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮರಾಠ ಸಮುದಾಯಕ್ಕೆ ಸ್ಥಾನಮಾನ: ಪರಕೀಯರ ಆಳ್ವಿಕೆಯನ್ನು ವಿರೋಧಿಸಿ ಠೇಂಕರಿಸಿದ್ದ ಶಿವಾಜಿ ಅಪ್ರತಿಮ ವೀರ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ. ರಾಜ್ಯದಲ್ಲಿ ಮರಾಠರಿಗೆ ರಾಜಕೀಯ ಪ್ರಾತನಿಧ್ಯವನ್ನು ಜೆಡಿಎಸ್‌ ಪಕ್ಷ ನೀಡಿದೆ. ಪಿ.ಜಿ.ಆರ್‌.ಸಿಂಧ್ಯಾರನ್ನು ಸಚಿವರನ್ನಾಗಿ ಮಾಡಿದ್ದು, ರಾಮನಗರ ನಗರಸಭೆಯ ಅಧ್ಯಕ್ಷರನ್ನಾಗಿ ಸೋಮಶೇಖರ್‌ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ರಾಜ್ಯಾದ್ಯಂತ ಮರಾಠ ಸಮುದಾಯಕ್ಕೆ ಜೆಡಿಎಸ್‌ ತಕ್ಕ ಸ್ಥಾನ ಮಾನ ನೀಡಿದೆ ಎಂದು ಹೇಳಿದರು.

ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ರಾಮನಗರದಲ್ಲಿ ಮರಾಠ ಸಮುದಾಯದ ಸ್ಮಶಾನದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ಪೂರೈಸಲಾಗುವುದು. ಪ್ರಸ್ತುತ ಮರಾಠ ಸಮುದಾಯ 3ಬಿ ಕ್ಯಾಟಗರಿಯಲ್ಲಿದ್ದು, ಶೈಕ್ಷಣಿಕ ಸೌಲಭ್ಯ ಪಡೆಯಲು 2ಬಿ ವರ್ಗಕ್ಕೆ ಸೇರಿಸುವಂತೆ ಇಟ್ಟಿರುವ ಬೇಡಿಕೆ, ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಸಿಎಂ ಗಮನಕ್ಕೆ ತರುತ್ತೇವೆ.ಮರಾಠಿ ಸಮುದಾಯದ ಅರ್ಹರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಸೌಲಭ್ಯಕ್ಕೆ ಮಲತಾಯಿ ಧೋರಣೆ ಬೇಡ: ಸಮುದಾಯದ ಮುಖಂಡ ಶ್ರೀನಿವಾಸ್‌ ಮಾತನಾಡಿ, ತಮ್ಮ ಸಮುದಾಯದ್ದು ಮರಾಠಿ ಮಾತೃ ಭಾಷೆಯಾಗಿದ್ದರು, ತಾವು ಕನ್ನಡಿಗರಾಗಿಯೇ ಉಸಿರಾಡುತ್ತಿದ್ದೇವೆ. ಸರ್ಕಾರದಿಂದ ತಮ್ಮ ಸಮುದಾಯಕ್ಕೆ ದೊರಕಬೇಕಾದ ಸವಲತ್ತುಗಳ ವಿಚಾರದಲ್ಲಿ ಮಲತಾಯಿ ಧೋರಣೆ ಬೇಡ. ದೇಶ ರಕ್ಷಣೆಯ ವಿಚಾರದಲ್ಲೇ ಮುಳುಗಿ ಹೋಗಿದ್ದ ತಮ್ಮ ಸಮುದಾಯ, ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ, ರಾಜಕೀಯವಾಗಿ ಏಳಿಗೆ ಸಾಧಿಸಲು ಮನಸ್ಸು ಮಾಡಿದೆ. ಹೀಗಾಗಿ ಜನಪ್ರತಿನಿಧಿಗಳು ಸಹಕಾರಬೇಕಾಗಿದೆ ಎಂದು ತಿಳಿಸಿದರು.

Advertisement

ಐಎಎಸ್‌, ಐಪಿಸ್‌ ಮುಂತಾದ ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸಲು ವ್ಯವಸ್ಥೆ ಕಲ್ಪಿಸಿಕೊಡಬೇಕು. ರಾಜ್ಯದಲ್ಲಿ ಮರಾಠಿ ಸಮುದಾಯವನ್ನು 3ಬಿಯಿಂದ 2ಎಗೆ ವರ್ಗಾಯಿಸಿ ಎಂದು ಬೇಡಿಕೆ ಇಟ್ಟರು.

ಈ ವೇಳೆ ಶಾಸಕಿ ಅನಿತಾ ಅವರು ಸಮುದಾಯದ ಅರ್ಹರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸರ್ಕಾರದ ವತಿಯಿಂದ ಅರ್ಹರಿಗೆ ವಿಧವೆಯರು, ವೃದ್ಧರು ಮತ್ತು ವಿಕಲಚೇತನರಿಗೆ ಮಾಶಾಸನದ ಆದೇಶಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಬೆಂಗಳೂರು ಗವಿಪುರಂನ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಸ್ವಾಮಿ ಅವರು ಆಶೀರ್ವಚನ ನೀಡಿದರು. ಕ್ಷತ್ರಿಯ ಮರಾಠ ಪ್ರಮುಖರಾದ ಅಣ್ಣಸ್ವಾಮಿರಾವ್‌ ಖಾಂಡೆ, ಕಾಶಿರಾವ್‌ ಕಾಂಬ್ಲೆ, ಎಸ್‌.ಮಧೋಜಿರಾವ್‌ ವನ್ಸೆ, ಕೆ.ಎಚ್.ಸೂರ್ಯಕುಮಾರ್‌, ನರಸೋಜಿರಾವ್‌ ಜಾದವ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರದ ಅಧ್ಯಕ್ಷತೆಯನ್ನು ಕೆ.ಕೆ.ಎಂ.ಪಿ ರಾಜ್ಯಾಧ್ಯಕ್ಷ ಎಸ್‌.ಸುರೇಶ್‌ ರಾವ್‌ ಸಾಠೆ ವಹಿಸಿದ್ದರು. ರಾಮನಗರ ಮಾಜಿ ಶಾಸಕ ಕೆ.ರಾಜು, ಕೆ.ಕೆ.ಎಂ.ಪಿಯ ಖಜಾಂಚಿ ಟಿ.ಆರ್‌.ವೆಂಕಟರಾವ್‌ ಚವ್ಹಾಣ್‌, ಟೆಂಪಲ್ ಕಮಿಟಿ ಅಧ್ಯಕ್ಷ ಟಿ.ಆರ್‌.ಸುನೀಲ್ ಚವ್ಹಾಣ್‌, ಸ್ಕಾಲರ್‌ ಶಿಪ್‌ ಸಮಿತಿ ಅಧ್ಯಕ್ಷ ಜಿ.ವಿ.ಕೃಷ್ಣೋಜಿರಾವ್‌ ಕದಂ, ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಕೆಕೆಎಂಪಿ ಉಪಾಧ್ಯಕ್ಷ ಎಚ್.ಎಸ್‌.ಶ್ರೀನಿವಾಸ ರಾವ್‌ ಪವಾರ್‌, ಕೆ.ಕೆ.ಎಂ.ಪಿ ಬೆಂಗಳೂರು ನಗರ ಘಕಟದ ಅಧ್ಯಕ್ಷ ನಾರಾಯಣ್‌ ರಾವ್‌ ಸಾವೇಕರ್‌, ಜೆಡಿಎಸ್‌ ರಾಜ್ಯ ವಕ್ತಾರ ಬಿ.ಉಮೇಶ್‌, ನಗರಸಭಾ ಮಾಜಿ ಸದಸ್ಯ ಎ.ರವಿ, ಮಂಜುನಾಥ್‌, ಸಂಗೀತ ವಿದ್ವಾನ್‌ ಶಿವಾಜಿರಾವ್‌ ಮತ್ತು ಸ್ಥಳೀಯ ಕ್ಷತ್ರಿಯ ಮರಾಠ ಪ್ರಮುಖರು ಉಪಸ್ಥಿತರಿದ್ದರು.

ಕವಿತಾ ರಾವ್‌ ನಿರೂಪಿಸಿದರು. ಕೆ.ಕೆ.ಎಂ.ಪಿ ಜಿಲ್ಲಾಧ್ಯಕ್ಷ ಸೋಮಶೇಖರ್‌ ರಾವ್‌ ಕಾಂಬ್ಲೆ ಸ್ವಾಗತಿಸಿದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಶಾಂತಲಾ ಕಲಾ ಕೇಂದ್ರದ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಭರತನಾಟ್ಯ ನೃತ್ಯ, ಜಾನಪದ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next