ಬೆಳಗಾವಿ: ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಶಿವಾಜಿ ಮಹಾರಾಜರ ನೂತನ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ಸೋಮವಾರ ನಡೆಯಿತು.
ಛತ್ರಪತಿ ಶಿವಾಜಿ ಮಹಾರಾಜರ ಆಶ್ವಾರೂಢ ಮೂರ್ತಿಯನ್ನು ಸಂತಿ ಬಸ್ತವಾಡದಲ್ಲಿ ಗುರು ಸಿದ್ದನ್ನವರ ಎಂಬ ಕಲಾವಿದರು ನಿರ್ಮಿಸಿದ್ದು, ಬೆಳಗಾವಿ ನಗರದಲ್ಲಿ ಮೆರವಣಿಗೆ ಮಾಡುತ್ತ ಗ್ರಾಮಕ್ಕೆ ತರಲಾಯಿತು. ಮೂರ್ತಿ ಬಂದಾಗ ಗ್ರಾಮಸ್ಥರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಕುರುಬ ಸಮಾಜದ ಯುವಕರು ಮೂರ್ತಿಗೆ ಕಂಬಳಿ ಹೊದಿಸಿ ಪೂಜೆ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಜನರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಗೆ ಝಾಂಜ್ ಪಥಕ, ಢೋಲ್ ತಾಷಾ, ಮಹಿಳೆಯರಿಂದ ಕುಂಭಮೇಳ, ಡೊಳ್ಳು ಕುಣಿತ, ವಾರಕರಿಗಳ ಭಜನೆ, ಎತ್ತಿನ ಗಾಡಿಗಳು ಸೇರಿದಂತೆ ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಮೆರಗು ತಂದವು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಗ್ರಾಮದ ಮುಖಂಡ ಯುವರಾಜ ಜಾಧವ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ಸ್ಥಾಪನೆಗೆ ಹೋರಾಟ ನಡೆಸಿದ್ದಾರೆ. ಇಡೀ ದೇಶದಲ್ಲಿ ಶೌರ್ಯ, ಸಾಹಸದ ಪ್ರತೀಕ ಶಿವಾಜಿ ಮಹಾರಾಜರು. ಇವರ ಮೂರ್ತಿಯನ್ನು ಬಾಳೇಕುಂದ್ರಿ ಗ್ರಾಮದಲ್ಲಿ ಸ್ಥಾಪನೆ ಬಗ್ಗೆ ಅನೇಕ ವರ್ಷಗಳಿಂದ ಕನಸು ಇತ್ತು. ಈಗ ಗ್ರಾಮಸ್ಥರ ಸಹಕಾರದಿಂದ ಮೂರ್ತಿ ನಿರ್ಮಾಣವಾಗಿದೆ.
ಮಂಗಳವಾರ ಮೇ 3ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಗ್ರಾಮದ ಮುಖಂಡರಾದ ಪ್ರಶಾಂತ ಜಾಧವ, ವಿಶ್ವನಾಥ ಜಾಧವ, ರಾಜದೀಪ ಜಾಧವ, ವಿಠuಲ ಸಾಯನ್ನವರ, ವಿಕಾಸ ಪಾಟೀಲ, ವಿಕ್ರಮ ನಾಗೇನಟ್ಟಿ, ಹನುಮಂತ ಹಣ್ಣಿಕೇರಿ, ಶಾಂತಿನಾಥ ಚಂದಗಡಕರ, ಉದಯ ಬಾಗನ್ನವರ, ರಾಜು ಹಣ್ಣಿಕೇರಿ, ಅಕ್ಷಯ ಕುಲಕರ್ಣಿ, ಆಕಾಶ ಕುಲಕರ್ಣಿ, ರವಿ ಮುತಗೇಕರ, ಸುಜೀತ ಪಾಟೀಲ, ಸಚಿನ ಜಾಧವ ಸೇರಿದಂತೆ ಇತರರು ಇದ್ದರು.