ಸುರಪುರ: ಡಾ| ಮಹಾದೇವಪ್ಪ ಚೆಟ್ಟಿ ಅವರು ಇದೇ ಗ್ರಾಮದಲ್ಲಿ ಜನಿಸಿ ಇಲ್ಲಿಯೇ ಶಿಕ್ಷಣ ಮುಗಿಸಿ ಧಾರವಾಡ ಕೃಷಿ ವಿವಿಯಲ್ಲಿ ಕೃಷಿ ವಿಜ್ಞಾನದಲ್ಲಿ ಸ್ನಾತಕ್ಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಇವತ್ತು ಅದೇ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ರಾಜುಗೌಡ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ| ಮಹಾದೇವಪ್ಪ ಚೆಟ್ಟಿ ಅವರಿಗೆ ತಾಲೂಕಿನ ಸ್ವ- ಗ್ರಾಮ ರುಕ್ಮಾಪುರದಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಅಭನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚೆಟ್ಟಿ ಅವರ ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ತಾಲೂಕು ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಹಲವಾರು ಪುರಸ್ಕಾರ, ಪ್ರಶಸ್ತಿಗಳು ಸಾಕ್ಷಿಯಾಗಿವೆ ಎಂದು ಸ್ಮರಿಸಿದರು.
ಮಾಜಿ ಸಚಿವ ರಾಜಾಮದನ ಗೋಪಾಲ ನಾಯಕ ಮಾತನಾಡಿ, ಕ್ಯಾಲಿಫೋರ್ನಿಯಾ, ನೆದರ್ಲ್ಯಾಂಡ್, ಅಮೇರಿಕಾ, ಪ್ರಾನ್ಸ್ ದೇಶಗಳಿಗೆ ತೆರಳಿ ಅಲ್ಲಿಯ ಕೃಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವುದು ಶ್ಲಾಘನೀಯ. ಅವರ ಈ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳು ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ನರ್ಬಾಡ್ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ಡಾ| ಡಿ.ಎಂ. ಕುನ್ನೂರ ಮಾತನಾಡಿ, ಸಾಧನೆಗೆ ಗುರಿ ಮತ್ತು ಛಲ ಬೇಕು. ಆ ನಿಟ್ಟಿನಲ್ಲಿ ಸತತ ಅಧ್ಯಯನದಲ್ಲಿ ತೊಡಿಗಿಸಿಕೊಳ್ಳಬೇಕು. ಡಾ| ಮಹಾದೇವ ಚೆಟ್ಟಿ ಅವರ ಚಿಂತನೆ, ವಿಮರ್ಶ, ಸಂಶೋಧನೆಯ ತವಕ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲಿ ಎಂದು ತಿಳಿಸಿದರು.
ನಿವೃತ್ತ ಎಸ್‌ಪಿ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಗುರುಮಿಠಕಲ್ ಶಾಂತವೀರ ಮುರಘರಾಜೇಂದ್ರ ಸ್ವಾಮೀಜಿ, ರುಕ್ಮಾಪುರ ಹಿರೇಮಠದ ಶಾಂತಮೂರ್ತಿ ಶಿವಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಯಲ್ಲಪ್ಪ ದೇವತ್ಕಲ್ ಹಾಗೂ ಗಣ್ಯರು ಇದ್ದರು.