ಬೆಳ್ತಂಗಡಿ: ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ.25ರಂದು ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳದ ಚೇತನಾ (29) ಆಯ್ಕೆಯಾಗಿದ್ದಾರೆ.
ಧರ್ಮಸ್ಥಳದ ನಾರ್ಯ ಎಂಬ ಪುಟ್ಟ ಕುಟುಂಬದಲ್ಲಿ ಜನಿಸಿದ ಚೇತನಾ ಅವರು ಅಸಮಾನ್ಯ ಸಾಧನೆ ಮಾಡಿದ್ದಾರೆ. ಇವರ ತಂದೆ ರಾಮಣ್ಣ ಪೂಜಾರಿ ಮತ್ತು ತಾಯಿ ಸೀತಾ ದಂಪತಿಯ ನಾಲ್ಕು ಮಕ್ಕಳಲ್ಲಿ ಚೇತನಾ ಎರಡನೆಯವರು.
1ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಉಪ್ಪಿನಂಗಡಿ ಸಮೀಪದ ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಕನ್ಯಾಡಿ ಸರಕಾರಿ ಶಾಲೆಯಲ್ಲಿ ಏಳನೇ ತರಗತಿ ಪೂರ್ಣಗೊಳಿಸಿ ಧರ್ಮಸ್ಥಳ ಶ್ರೀ. ಧ.ಮಂ. ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ.ಪೂ.ಶಿಕ್ಷಣ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ:ಪ್ರೇಕ್ಷಕರಿಗೆ ಅಪಥ್ಯವಾಗಿದ್ದು ಸೆನ್ಸಾರ್‌ಗೆ ಪಥ್ಯ ಹೇಗೆ? ವಿವಾದಿತ ದೃಶ್ಯಗಳಿಗೆ ಯಾರು ಹೊಣೆ?
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2016ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರಲ್ಲಿ ವಕೀಲ ವೃತ್ತಿ ಅರಂಭಿಸಿದ್ದಾರೆ. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.
ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಯುವತಿಯೋರ್ವಳು ಕಿರಿಯ ವಯಸ್ಸಿನಲ್ಲೇ ಅಸಾಮಾನ್ಯ ಸಾಧನೆ ತೋರಿದ್ದಾರೆ.