ಲಂಡನ್: ಇಂಗ್ಲಿಷ್ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೇತೇಶ್ವರ್ ಪೂಜಾರ ಅವರಿಗೆ ಪ್ರಮುಖ ಜವಾಬ್ದಾರಿಯೊಂದನ್ನು ವಹಿಸಲಾಗಿದೆ. ಅವರೀಗ ಸಸೆಕ್ಸ್ ಕೌಂಟಿಯ ಉಸ್ತುವಾರಿ ನಾಯಕರಾಗಿ ನೇಮಕಗೊಂಡಿದ್ದಾರೆ.
ತಂಡದ ನಾಯಕ ಟಾಮ್ ಹೇನ್ಸ್ ಗಾಯಾಳಾದ ಕಾರಣ ಪೂಜಾರ ಅವರಿಗೆ ಈ ಹೊಣೆಗಾರಿಕೆ ಲಭಿಸಿದೆ. ಲೀಸೆಸ್ಟರ್‌ಶೈರ್ ವಿರುದ್ಧದ ಕಳೆದ ಪಂದ್ಯದ ವೇಳೆ ಹೇನ್ಸ್ ಕೈಗೆ ಏಟಾಗಿತ್ತು. ಅವರಿಗೆ ಕನಿಷ್ಠ 5ರಿಂದ 6 ವಾರಗಳ ತನಕ ವಿಶ್ರಾಂತಿ ಸೂಚಿಸಲಾಗಿದೆ.
ಮುಂದಿನ ಮಿಡ್ಲ್ಸೆಕ್ಸ್ ವಿರುದ್ಧದ ಪಂದ್ಯದ ವೇಳೆ ಚೇತೇಶ್ವರ್ ಪೂಜಾರ ಸಸೆಕ್ಸ್ ಕೌಂಟಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಲೀಸೆಸ್ಟರ್‌ಶೈರ್ ವಿರುದ್ಧ ಟಾಮ್ ಹೇನ್ಸ್ ಗಾಯಾಳಾಗಿ ಹೊರನಡೆದಾಗ ಇಂಗ್ಲೆಂಡಿನ ಪೇಸರ್ ಸ್ಟೀವನ್ ಫಿನ್ ಸಸೆಕ್ಸ್ ತಂಡವನ್ನು ಮುನ್ನಡೆಸಿದ್ದರು.
ಪೂಜಾರ ಅವರ ಅಪಾರ ಅನುಭವವನ್ನು ಪರಿಗಣಿಸಿ ನಾಯಕತ್ವದ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಫಿನ್ ಮೇಲಿನ ಬೌಲಿಂಗ್ ಒತ್ತಡ ಕೂಡ ಕಡಿಮೆ ಆಗಲಿದೆ ಎಂಬುದಾಗಿ ಸಸೆಕ್ಸ್ ತಂಡದ ಕೋಚ್ ಇಯಾನ್ ಸ್ಯಾಲಿಸ್‌ಬರಿ ಹೇಳಿದ್ದಾರೆ.
ಪ್ರಸಕ್ತ ಕೌಂಟಿ ಋತುವಿನಲ್ಲಿ ಚೇತೇಶ್ವರ್ ಪೂಜಾರ ಪ್ರಚಂಡ ಬ್ಯಾಟಿಂಗ್ ಫಾರ್ಮ್ ನಲ್ಲಿದ್ದಾರೆ. 6 ಪಂದ್ಯಗಳಲ್ಲಿ 766 ರನ್ ಪೇರಿಸಿದ ಸಾಧನೆ ಇವರದು. ಇದರಲ್ಲಿ 2 ಅಮೋಘ ದ್ವಿಶತಕಗಳು ಸೇರಿವೆ.