Advertisement
ಸರಕಾರ ಅನಿವಾರ್ಯವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು, ಹೊಸ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ “ಚೇತನ’ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಉಡುಪಿ ಜಿಲ್ಲೆಯ ದಮನಿತ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ. ಜತೆಗೆ ದಮನಿತ ಪರ ಯಾವುದೇ ಸಂಘ -ಸಂಸ್ಥೆಗಳು ಕಾರ್ಯ ನಿರ್ವಹಿಸದೆ ಇರುವುದರಿಂದ ದಮನಿತ ಮಹಿಳೆಯರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
Related Articles
Advertisement
ಜಿಲ್ಲೆಯಲ್ಲಿ ಇದುವರೆಗೆ ಕೇವಲ 32 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಂಡು ವೃತ್ತಿಯಿಂದ ಹೊರ ಬಂದು ಸ್ವೋದ್ಯೋಗವನ್ನು ಪ್ರಾರಂಭಿಸಿ ಹೊಸ ಜೀವನ ನಡೆಸುತ್ತಿದ್ದಾರೆ. 2015ರಿಂದ 2019ರ ವರೆಗೆ ಕ್ರಮವಾಗಿ 10, 13, 3, 6 ಫಲಾನುಭವಿಗಳು ಒಟ್ಟು 9.10 ಲ.ರೂ. ಸಾಲಸೌಲಭ್ಯ ಹಾಗೂ ಸಹಾಯಧನ ಪಡೆದುಕೊಂಡಿದ್ದಾರೆ.
ಬಡ್ಡಿ ರಹಿತ ಸಾಲ:
ಚೇತನ ಯೋಜನೆಯಡಿ ಸರಕಾರ ಇವರಿಗೆ ಬಡ್ಡಿ ರಹಿತ ಸಾಲ ನೀಡಿ ಸ್ವೋದ್ಯೋಗ ಆರಂಭಿಸಲು ಮೂಲ ಬಂಡವಾಳವನ್ನು ನೀಡಲಿದೆ. ಇದನ್ನು ಪಡೆಯಲು ಬಯಸುವವರು ಲೈಂಗಿಕ ವೃತ್ತಿಯನ್ನು ಬಿಡುವುದಾಗಿ ಪ್ರಮಾಣಪತ್ರ ಕೊಡಬೇಕು. ಅನಂತರವೂ ವೃತ್ತಿ ಮುಂದುವರಿಸಿದರೆ, ಕೊಟ್ಟ ಹಣ ಸರಕಾರಕ್ಕೆ ಹಿಂದಿರುಗಿಸಬೇಕು.
ಸಹಾಯಧನ ಎಷ್ಟು ? :
18-60 ವರ್ಷದೊಳಗಿನ ಮಹಿಳೆಯರಿಗೆ 30,000 ರೂ. ದೊರೆಯಲಿದೆ. ಈ ಮೊತ್ತ ಸರಕಾರಕ್ಕೆ ಮರುಪಾವತಿ ಮಾಡಬೇಕಾಗಿಲ್ಲ. ಕಳೆದ ವರ್ಷ ಮಹಿಳೆಯರಿಗೆ 50,000 ರೂ. ನೀಡುತ್ತಿದ್ದು, 25,000 ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25,000 ರೂ. ಸಹಾಯಧನ ಸಿಗುತ್ತಿತ್ತು. ವೃತ್ತಿಯಿಂದ ಹೊರ ಬರಲು ಇಚ್ಛಿಸುವವರು ನೇರವಾಗಿ ಕಚೇರಿಯಿಂದ (ದೂರವಾಣಿ ಸಂಖ್ಯೆ 0820-2574978) ಮಾಹಿತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಎನ್‌ಜಿಒ ಕೊರತೆ :
ಪ್ರಸ್ತುತ ಜಿಲ್ಲೆಯಲ್ಲಿ ಈ ವರ್ಗಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್‌ಜಿಒ ಸಂಸ್ಥೆ ಮುಚ್ಚಿ ಹೋಗಿದ್ದು, ಇದೀಗ ಯಾವುದೇ ಎನ್‌ಜಿಒ ದಮನಿತ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯರ ಕುರಿತು ಯಾವುದೇ ರೀತಿಯಾದ ಸರ್ವೇಯಾಗಲಿ ನಡೆದಿಲ್ಲ. ಅವರೇ ಮುಂದೆ ಬಂದು ಯೋಜನೆಯ ಲಾಭ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
550 ಕಾರ್ಯಕರ್ತೆಯರು :
ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಉಡುಪಿ, ಹೆಬ್ರಿ, ಕಾರ್ಕಳ, ಕಾಪು, ಬೈಂದೂರು ತಾಲೂಕಿನಲ್ಲಿ 2017ರ ಸರ್ವೇ ಅನ್ವಯ ಸುಮಾರು 550 ಲೈಂಗಿಕ ಕಾರ್ಯಕರ್ತೆಯರು ಇದ್ದರು. ಪ್ರಸ್ತುತ ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆ ಅಥವಾ ವೃತ್ತಿಯಿಂದ ಹೊರ ಬಂದವರ ಅಂಕಿ- ಅಂಶಗಳು ಲಭ್ಯವಿಲ್ಲ.
ವೃತ್ತಿಯನ್ನು ಬಿಟ್ಟು ಬರುವವರಿಗೆ ಚೇತನ ಯೋಜನೆಯಡಿ ಸ್ವೋದ್ಯೋಗಕ್ಕೆ ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಸ್ತುತ ದಮನಿತ ಮಹಿಳೆಯರನ್ನು ಗುರುತಿಸುವ ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸದೆ ಇರುವುದರಿಂದ ಫಲಾನುಭವಿಗಳನ್ನು ಗುರುತಿಸುವ ಕೆಲಸಕ್ಕೆ ಹಿನ್ನಡೆಯಾಗಿದೆ. ಆಸ್ತಕರು ಮಹಿಳಾ ಮತ್ತು ಮಕ್ಕಳ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.–ಶೇಷಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ