ಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಅವರ ಮೂಲ ಆಂಧ್ರಪ್ರದೇಶದ ಘಂಟಸಾಲ. 9 ನೇ ತರಗತಿಯಲ್ಲಿ ಓದುತ್ತಿರುವಾಗ ವಿವಾಹವಾಗಿ ದೂರದ ದಾವಣಗೆರೆಗೆ ಬಂದವರು. ಮಗಳಿಗೆ ಪ್ರವೇಶ ಸಿಗದ ನೋವು ಅನುಭವಿಸಿದವರು. ಮುಂದೆ ತಮ್ಮಂತೆ ಯಾವುದೇ ತಾಯಿ ಮಕ್ಕಳಿಗೆ ಶಾಲೆಗೆ ಸೇರಿಸುವಾಗ ಇನ್ನಿಲ್ಲದ ನೋವು, ಸೋಲು, ಹತಾಶೆ ಅನುಭವಿಸಬಾರದು ಎಂದು ಆರಂಭಿಸಿರುವ ಸಂಸ್ಥೆಯೇ ಚೇತನಾ ವಿದ್ಯಾಸಂಸ್ಥೆ. ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಯ ಹಿಂದೆ ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ ಅವರ ಕನಸು, ಪರಿಶ್ರಮ ಅಡಗಿದೆ. ಅಕ್ಷರದ ಪ್ರೇಮಿ ಡಾ|ವಿಜಯಲಕ್ಷ್ಮೀ ವೀರಮಾಚಿನೇನಿ “ಉದಯವಾಣಿ’ಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಸಂಸ್ಕೃತ ಪದಗಳ ಕಲಿಕೆಯ ಹಿನ್ನೆಲೆ ಏನು?
ಪ್ರಾಥಮಿಕ ಹಂತದಲ್ಲೇ ಮಕ್ಕಳು ಪ್ರತಿ ಪದವನ್ನು ಅತ್ಯಂತ ಸ್ಪಷ್ಟವಾಗಿ ಹೇಳುವಂತೆ ಕಲಿಸಬೇಕು. ಮುಂದೆ ಮಕ್ಕಳಲ್ಲಿ ಸ್ಪಷ್ಟ ಉಚ್ಚಾರ, ಪದಗಳ ಪ್ರಯೋಗದ ಮೇಲೆ ಹಿಡಿತ, ಭಾಷಾ ಪ್ರಾವಿಣ್ಯತೆ ತಾನೇ ತಾನಾಗಿ ಬರುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಸಣ್ಣ ಸಣ್ಣ ಸಂಸ್ಕೃತ ಪದಗಳನ್ನು ಹೇಳಿಕೊಡಲಾಗುತ್ತದೆ. ಮನೆಯಲ್ಲಿ ಮಮ್ಮಿ, ಡ್ಯಾಡಿ ಬದಲಿಗೆ ನಮಸ್ತೆ ಅಪ್ಪ, ಅಮ್ಮ…ಎಂದೇ ಕರೆಯುವಂತೆ ತಿಳಿಸಲಾಗುತ್ತದೆ. ತರಗತಿಗಳಲ್ಲಿ ನಮಸ್ತೆ ಉಪಾಧ್ಯಾಯರೇ ಎನ್ನುವ ಅಭ್ಯಾಸ ಮಾಡಿಸಲಾಗುತ್ತದೆ. ಮಕ್ಕಳು ಬರೀ ಓದಿದರೆ ಸಾಲದು. ಸದ್ಭಾವನೆ, ಸಂಸ್ಕೃತಿ, ಸಂಸ್ಕಾರ ವಂತರಾದಲ್ಲಿ ಅವರಿಗೆ ಕುಟುಂಬ, ಸಮಾಜ, ದೇಶಕ್ಕೂ ಒಳ್ಳೆಯದಾಗುತ್ತದೆ.
ಭಾರತೀಯ ಸಂಸ್ಕೃತಿಗೆ ಹೇಗಿದೆ ಆದ್ಯತೆ?
ಪ್ರತಿ ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ತಂದೆ-ತಾಯಿ ಮತ್ತು ಶಿಕ್ಷಕರು ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಸಂಗೀತ, ಶಿಲ್ಪಕಲೆ, ಚಿತ್ರಕಲೆ ಬಗ್ಗೆ ಆಸಕ್ತಿ ಬೆಳೆಸಲಾಗುತ್ತದೆ. ಪ್ರತ್ಯೇಕವಾಗಿ ಮ್ಯೂಸಿಕಲ್ ರೂಂ ಇದೆ. ಅಲ್ಲಿ ಶಿಕ್ಷಕರು ಮಕ್ಕಳಿಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತಾರೆ. ಮಕ್ಕಳಿಗೆ ಮಣ್ಣಿನ ಸೊಗಡಿನ ಪರಿಚಯ ಮಾಡಿಕೊಡಲಾಗುವುದು. ಮಡಿಕೆ ಸಿದ್ಧಪಡಿಸುವುದು, ಮಣ್ಣು ಸಿದ್ಧ ಮಾಡಿಕೊಳ್ಳುವುದು ಪ್ರತಿ ಹಂತದ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ನಮ್ಮ ಭಾರತೀಯತೆಯಿಂದ ವಿಶ್ವದ ಇತರೆ ದೇಶಗಳು ಕಲಿತಿವೆಯೇ ಹೊರತು ಭಾರತೀಯರು ಬೇರೆಯವರಿಂದ ಕಲಿತವರಲ್ಲ. ಹಾಗಾಗಿಯೇ ನಮ್ಮಲ್ಲಿ ಭಾರತೀಯತೆ, ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳ ಸಿದ್ಧತೆ ?
ಚೇತನಾ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳನ್ನು ಆರನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿ ಮಾಡಲಾಗುತ್ತದೆ. ನಾಲ್ಕನೇ ತರಗತಿಯಲ್ಲೇ ಮಕ್ಕಳು ಐಐಟಿ ಮಾದರಿಯ ಪ್ರಶ್ನೆಪತ್ರಿಕೆಗೆ ಸಿದ್ಧರಾಗುವಂತಹ ಶಿಕ್ಷಣ ನೀಡಲಾಗುತ್ತದೆ. 2007ರಿಂದ ಈ ಪ್ರಯೋಗದ ಕಲಿಕೆ ಆರಂಭ ಮಾಡಲಾಗಿದೆ. 4ನೇ ತರಗತಿ ಮಕ್ಕಳು 5 ನೇ ತರಗತಿಗೆ ಬರುವ ವೇಳೆಗೆ ಮುಂದಿನ ತರಗತಿಗಳ ವಿಷಯ ಕಲಿಯಲಾರಂಭಿಸಿರುತ್ತಾರೆ. ಆನ್‌ಲೈನ್, ಆಫ್ ಲೈನ್ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ. ಇದರಿಂದ ನಮ್ಮ ಮಕ್ಕಳು ಐಐಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಕಾರಣವಾಗುತ್ತಿದೆ. ಅದಕ್ಕೆ ನಿದರ್ಶನ ಎನ್ನುವಂತೆ ಹಲವಾರು ಸಾಧನೆ ಮಾಡಿದವರಿದ್ದಾರೆ.
ಸಿಕ್ಸ್ ಟು ಸಿವಿಲ್ ಸರ್ವೀಸ್ ಕುರಿತಂತೆ?
ಆರನೇ ತರಗತಿಯಿಂದ ಮಕ್ಕಳನ್ನು ಸಿವಿಲ್ ಸರ್ವೀಸ್ ಪರೀಕ್ಷೆಗೂ ಸಜ್ಜುಗೊಳಿಸಲಾಗುತ್ತದೆ. ಸಿಕ್ಸ್ ಟು ಸಿವಿಲ್ ಎಂಬ ಮಾದರಿಯೊಂದಿಗೆ ಮುಖ್ಯವಾಗಿ ಸಾಮಾನ್ಯ ಜ್ಞಾನ, ಸಮಾಜಶಾಸ್ತ್ರ ವಿಷಯಗಳ ಬಗ್ಗೆ ಹೆಚ್ಚು ಕಲಿಸಲಾಗುತ್ತದೆ. ರೀಸನಿಂಗ್‌ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಔಟ್ ಆಫ್‌ದ ಬಾಕ್ಸ್ ಈಗಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನದ್ದಾಗಿ ಕಾಣಿಸಿಕೊಳ್ಳುತ್ತದೆ. ಈಗಿನ ಮಕ್ಕಳು ಸಾಕಷ್ಟು ಬುದ್ಧಿವಂತರು. ಅದಕ್ಕೆ ಅನುಗುಣವಾದ ಶಿಕ್ಷಣ ನೀಡಿದರೆ ಉತ್ತಮ ಸಾಧನೆ ಮಾಡಬಲ್ಲವರು ಎಂದೇ ಅತ್ಯಾಧುನಿಕ ಮಾದರಿಯ ಸ್ಪರ್ಧಾತ್ಮಕ ಪರೀಕ್ಷಾ ಕಲಿಕಾ ವಾತಾವರಣ ನಮ್ಮಲ್ಲಿದೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯೇ ಬುದ್ಧಿವಂತರನ್ನಾಗಿ ಮಾಡುತ್ತದೆ ಎನ್ನುವ ಪ್ರಬಲ ವಿಶ್ವಾಸ ನಮ್ಮದು.
ಸಾಧಾರಣ ವಿದ್ಯಾರ್ಥಿಗಳ ಸಿದ್ಧತೆ ಹೇಗೆ?
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಪಿಯು ನಂತರದ ಸಿಇಟಿ, ನೀಟ್, ಜೆಇಇ, ಅಡ್ವಾನ್ಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಥವಾಗಿ ತಯಾರು ಮಾಡಲಾಗುತ್ತದೆ. ಒಲಂಪಿಯಾಡ್ ವಿದ್ಯಾರ್ಥಿಗಳನ್ನು ಸುಲಭವಾಗಿ ತರಬೇತಿಗೊಳಿಸಬಹುದು. ಇತರೆ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಪ್ರತಿ ವಿಷಯದ ಬಗ್ಗೆ ವಿಷಯಗಳಲ್ಲಿ ನೈಪುಣ್ಯತೆ ಹೊಂದಿರುವವರ ಮೂಲಕ ಪಾಠ ಮಾಡಿಸಲಾಗುತ್ತದೆ. ಸಣ್ಣ ಅನುಮಾನ ಬಂದರೂ ಸ್ಥಳದಲ್ಲೇ ಪರಿಹಾರ, ಮನವರಿಕೆ ಮಾಡಿಕೊಡಲಾಗುತ್ತದೆ. ಹೀಗೆ ಹಲವಾರು ವಿಧಾನಗಳ ಮೂಲಕ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ.
ಮುಂದಿನ ಹಂತದ ಶಿಕ್ಷಣ ಬಗ್ಗೆ ?
ಮುಂದಿನ ಹಂತದಲ್ಲಿ ಎಲ್ಲ ಕ್ಷೇತ್ರಗಳಲ್ಲಿನ ಬದಲಾವಣೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬೆಳೆಸಬೇಕಾಗುತ್ತದೆ. ಮುಂದಿನ ಜನಾಂಗ ಆಸಕ್ತಿಗೆ ತಕ್ಕಂತೆ ಶಿಕ್ಷಣ ಕಲಿಸುವಂತಾಗಬೇಕು ಎಂಬ ಕಾರಣಕ್ಕೆ ವೆಲ್ ಅಡ್ವಾನ್ಸ್ ಶಿಕ್ಷಣ ನೀಡುವಂತಹ ಬಹು ದೊಡ್ಡ ಪ್ರಯತ್ನ ನನ್ನದ್ದಾಗಿದೆ. ಜನಾಂಗದಿಂದ ಜನಾಂಗಕ್ಕೆ ಆಲೋಚನೆ, ಚಿಂತನಾ ವಿಧಾನ ಬದಲಾಗುವುದನ್ನು ನಾವೆಲ್ಲರೂ ಕಂಡಿದ್ದೇವೆ. ಕಾಣಲಿದ್ದೇವೆ. ಮಕ್ಕಳು ಮುಂದೆ ಸ್ವ ಸಾಮರ್ಥ್ಯದಿಂದ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂಬ ಆಶಯ ನಮ್ಮದಾಗಿದೆ.
ಬುದ್ಧಿವಂತರನ್ನು ಅತೀ ಬುದ್ಧಿವಂತರನ್ನಾಗಿ ಮಾಡುವುದು ಸುಲಭ. ಆದರೆ ಸಾಮಾನ್ಯ ವಿದ್ಯಾರ್ಥಿಗಳನ್ನು ಬುದ್ಧಿವಂತ ವಿದ್ಯಾರ್ಥಿಗಳನ್ನಾಗಿ ಮಾಡುವುದು ಸವಾಲು. ಅಂತಹ ಸವಾಲನ್ನು ಬಹಳ ಸಂತೋಷದಿಂದ ಸೀÌಕರಿಸಿ, ಸಹಸ್ರಾರು ಸಾಧಾರಣ ಮಕ್ಕಳನ್ನು ಶೈಕ್ಷಣಿಕವಾಗಿ ಅಸಾಧಾರಣ ಮಕ್ಕಳನ್ನಾಗಿ ರೂಪಿಸಲಾಗಿದೆ ಎಂಬ ಹೆಮ್ಮೆ ಇದೆ. ಕನ್ನಡ ಮಾಧ್ಯಮದಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಮುಂದೆ ಪಿಯು, ಸಿಇಟಿ, ನೀಟ್, ಜೆಇಇ ಇತರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧಕರನ್ನಾಗಿ ಮಾಡಿರುವ ಉದಾಹರಣೆ ಇದೆ. ಅದಕ್ಕೆ ಕೊಪ್ಪಳ ಮಾದರಿ ಸಾಕ್ಷಿ. ಕೊಪ್ಪಳ ಭಾಗದಿಂದ ಬಂದಿದ್ದ 20-25 ವಿದ್ಯಾರ್ಥಿಗಳು ಈಗ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಶಿಕ್ಷಣ ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಧನೆಯ ಮೆಟ್ಟಿಲಾಗಬೇಕು.
ಚೇತನಾ ಸಂಸ್ಥೆಯಲ್ಲಿ ಹೊಸ ಕಲಿಕಾ ವಿಧಾನ ಹೇಗೆ?
ನಮ್ಮ ಸಂಸ್ಥೆಯಲ್ಲಿ 9ನೇ ತರಗತಿ ಮಕ್ಕಳು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ಕಲಿಸಲಾಗುತ್ತದೆ. ಅದರಿಂದ ಮಕ್ಕಳಲ್ಲಿ ಕಲಿಯುವ ಹಂಬಲ, ಆಸಕ್ತಿ ಉಂಟಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇನ್ನೊಂದು ತರಗತಿಗೆ ಪಾಠ ಮಾಡುವಷ್ಟು ವಿಷಯಗಳ ಪರಿಪೂರ್ಣತೆ ಬರುತ್ತದೆ. ಆ ಮೂಲಕ ಮಕ್ಕಳು ತಾವೇ ತಾವಾಗಿಯೇ ಎಲ್ಲ ಸಿದ್ಧತೆ ಮಾಡಿಕೊಳ್ಳುವ ಮನೋಭಾವ ಬೆಳೆಯುತ್ತದೆ. ಮುಂದೆ ಅದು ಬೀರುವ ಪರಿಣಾಮ ಅಗಾಧ. 10ನೇ ತರಗತಿ ಮಕ್ಕಳು ಪಿಯು ಮಕ್ಕಳಿಗೆ ಪಾಠ ಮಾಡುವಂತಹದ್ದೂ ಇದೆ. ಪಾಠ ಮಾಡುವ ಜತೆಗೆ ಮಕ್ಕಳಲ್ಲಿ ಕೇರಿಂಗ್ ನೇಚರ್ ಬೆಳೆಯುತ್ತದೆ.
ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಬೆಳೆಸುವ ಬಗ್ಗೆ ?
ಅನೇಕ ಮಕ್ಕಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುತ್ತಾರೆ. ಸುಲಭವಾಗಿಯೇ ಗಣಿತ ಮಾತ್ರವಲ್ಲ ಇತರೆ ಎಲ್ಲ ವಿಷಯಗಳನ್ನು ಕಲಿಯುವಂತಹ ಹೊಸ ವಿಧಾನಕ್ಕೆ ಚಾಲನೆ ನೀಡಲಾಗಿದೆ. ಅಮೆರಿಕದ ಶಾಲೆಗಳಲ್ಲಿ ರ್ಯಾಪರ್ ಕಲೆಕ್ಷನ್ ಎಂಬ ವಿಧಾನ ಇದೆ. ಅಂದರೆ ಮಕ್ಕಳು ಅಂಗಡಿ, ಮಾಲ್‌ಗಳಿಗೆ ತೆರಳಿ ಅಲ್ಲಿನ ಯಾವುದಾದರೂ ವಸ್ತುಗಳನ್ನು ಖರೀದಿಸಿ, ರ್ಯಾಪರ್‌ಗಳನ್ನು ಹಾಗೆ ಇಟ್ಟುಕೊಳ್ಳುತ್ತಾರೆ. ಅವುಗಳ ಮೇಲೆ ನಮೂದಾಗಿರುವ ಬೆಲೆ ಮತ್ತು ಮಕ್ಕಳು ಹೊಂದಿದ್ದ ಹಣದ ಆಧಾರದಲ್ಲಿ ಹೇಗೆ ವ್ಯಾಪಾರ-ವಹಿವಾಟು ನಡೆಸಿದ್ದಾರೆಂದು ತಾಳೆ ಹಾಕಲಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ವ್ಯಾವಹಾರಿಕ ಬುದ್ಧಿಮತ್ತೆ ಕಲಿಸಿಕೊಡಲಾಗುತ್ತದೆ. ಜಪಾನ್ ಶಾಲೆಗಳಲ್ಲಿ ಮಕ್ಕಳು ಇತರೆ ಮಕ್ಕಳಿಗೆ ಊಟ ಮಾಡಿಸುತ್ತಾರೆ. ಅದು ಇನ್ನೊಂದು ಕಲಿಕಾ ವಿಧಾನ. ಅಗ್ನಿ, ಕಟ್ಟಡ ಕುಸಿತ ಮುಂತಾದ ತುರ್ತು ಸಂದರ್ಭಗಳನ್ನೂ ಬುದ್ಧಿಮತ್ತೆಯಿಂದ ನಿರ್ವಹಣೆ ಮಾಡುವಂತಹದನ್ನೂ ಕಲಿಸಿ ಕೊಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲೂ ಸಾಕಷ್ಟು ಅಡ್ವಾನ್ಸ್ ಕಲಿಕಾ ವಿಧಾನ ಅಳವಡಿಕೆ ಮಾಡುತ್ತಲೇ ಇರುತ್ತೇವೆ.
ಚೇತನಾ ಕೊಡುಗೆ ಪತ್ರಿಕೆ ಪ್ರಾರಂಭ…
ನಮ್ಮ ಸಂಸ್ಥೆಯಲ್ಲಿ ಪತ್ರಿಕೋದ್ಯಮವನ್ನೂ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಜೂನ್‌ನಿಂದ ಚೇತನಾ ಕೊಡುಗೆ ಎಂಬ ನಾಲ್ಕು ಪುಟಗಳ ಪತ್ರಿಕೆ ಹೊರ ತರಲಾಗುತ್ತಿದೆ. ವಿದ್ಯಾರ್ಥಿಗಳೇ ಸುದ್ದಿ ಸಂಗ್ರಹ ಮಾಡಬೇಕು. ಪುಟ ವಿನ್ಯಾಸ ಸೇರಿದಂತೆ ಒಂದು ಪತ್ರಿಕೆ ಹೊರ ತರಬೇಕು. ಜಾಹೀರಾತುಗಳನ್ನೂ ವಿದ್ಯಾರ್ಥಿಗಳೇ ನಮ್ಮಲ್ಲೇ ಕಲೆಕ್ಟ್ ಮಾಡಬೇಕು. ಈ ರೀತಿಯ ಹೊಸ ಪ್ರಯೋಗ ಮಾಡಲಾಗುವುದು. ಜಿಲ್ಲೆಯ ಹಿರಿಯ ಸಾಹಿತಿ ದಿ| ಟಿ. ಗಿರಿಜಾ, ಹರಿಹರದ ಲಲಿತಮ್ಮ ಡಾ|ಚಂದ್ರಶೇಖರ್ ಮುಂತಾದ ದಿಗ್ಗಜರ ಮೂಲಕ ಬುನಾದಿ ಹಾಕಲಾಗಿತ್ತು. ಈಗ ಮತ್ತೆ ಹೊಸತನದ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ|ವಿಜಯಲಕ್ಷ್ಮೀ ವೀರ ಮಾಚಿ ನೇನಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಲಿಯುವ ವಾತಾವರಣ ನಿರ್ಮಾಣ:
ವಿದ್ಯಾರ್ಥಿಯ ಬಹು ದೊಡ್ಡ ಕನಸೆಂದರೆ ರ್‍ಯಾಂಕ್. ಪೋಷಕರೂ ಸಹ ತಮ್ಮ ಮಕ್ಕಳು ರ್‍ಯಾಂಕ್ ಸ್ಟೂಡೆಂಟ್ ಆಗಿರಬೇಕು ಎಂದೇ ಬಯಸುವುದು ಸಾಮಾನ್ಯ. ರ್‍ಯಾಂಕ್ ಪಡೆಯುವುದು ಮಾತ್ರವಲ್ಲ ಸಾರ್ಥಕ ಜೀವನವನ್ನೂ ರೂಪಿಸಿಕೊಳ್ಳಬೇಕೆಂಬ ಮಹಾದಾಸೆಯೂ ಇರುತ್ತದೆ. ಅಂತಹ ಎಲ್ಲ ನಿರೀಕ್ಷೆಗಳನ್ನು ಸಮರ್ಥವಾಗಿ ಪೂರೈಸುವ ಕಲಿಕಾ ವಾತಾವರಣ ವಿಶ್ವಚೇತನ ವಿದ್ಯಾನಿಕೇತನ,ವಿದ್ಯಾಚೇತನ ಕಾಲೇಜಿನಲ್ಲಿದೆ.
ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್ ಸೌಲಭ್ಯ ಇಲ್ಲಿವೆ. ಪ್ರತಿ ಮಗು ಸಹ ಮನೆಯ ವಾತಾವರಣವನ್ನೇ ಕಲ್ಪಿಸಿಕೊಡಲಾಗುತ್ತಿದೆ. ಮಕ್ಕಳಿಗೆ ಕಲಿಯುವಿಕೆ ಎಂದೆಂದಿಗೂ ಕಬ್ಬಿಣದ ಕಡಲೆ ಅನಿಸುವುದೇ ಇಲ್ಲ. ಇಲ್ಲಿ ಪ್ರವೇಶ ಪಡೆದ ಮಕ್ಕಳಲ್ಲಿ ಮೊದಲು ಅವರ ಆಸಕ್ತಿ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಆಸಕ್ತಿಗೆ ಅನುಗುಣವಾದ ಆಟೋಟ, ಸಾಂಸ್ಕೃತಿಕ ವಾತಾವರಣದ ವೇದಿಕೆ ಒದಗಿಸಿಕೊಡಲಾಗುತ್ತದೆ. ಹಾಗೆಯೇ ನಿಧಾನವಾಗಿ ಮಕ್ಕಳಲ್ಲಿ ಪಠ್ಯದ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಲಾಗುತ್ತದೆ. ಬರೀ ಆಟೋಟ, ಸಾಂಸ್ಕೃತಿಕ, ಲಲಿತಕಲೆ ಮಾತ್ರವಲ್ಲ ಅದರಾಚೆಗೂ ಕಲಿಯುವಂತಹದ್ದು ಇನ್ನೂ ಇದೆ ಎಂದು ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ಕಲಿಯುವಂತಹ ವಾತಾವರಣ ನಿರ್ಮಿಸಲಾಗುತ್ತದೆ. ಕ್ರಮೇಣವಾಗಿ ಸಂಪೂರ್ಣ ಓದು, ಬರಹ, ಪರೀಕ್ಷೆ ಸಿದ್ಧತೆಗೆ ಅಣಿಗೊಳಿಸಲಾಗುತ್ತದೆ. ಇಂತಹ ಪ್ರಯೋಗಶೀಲತೆ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಮೂಲವಾಗಿದೆ.
ವಿದ್ಯಾರ್ಥಿಗಳು ಆಡುತ್ತ, ಹಾಡುತ್ತ, ನಲಿಯುತ್ತ ಶಿಕ್ಷಣ ಕಲಿಸುವುದು ಸಂಪ್ರದಾಯ ಎನ್ನುವ ವಾತಾವರಣ ಇರುವ ಕಾರಣಕ್ಕೆ ಚೇತನಾ ವಿದ್ಯಾಸಂಸ್ಥೆಯ ಶಾಲಾ, ಕಾಲೇಜುಗಳಲ್ಲಿ ಪ್ರತಿ ವರ್ಷ ರ್‍ಯಾಂಕ್ ಗಳಿಕೆಯ ವಿದ್ಯಾರ್ಥಿ ಸಮೂಹವೇ ಇದೆ.
ವಿಶ್ವ ಚೇತನ ವಿದ್ಯಾನಿಕೇತನ ವಸತಿಯುತ ಶಾಲೆ ಆರಂಭದಿಂದಲೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಸಾಧನೆ ಮಾಡುತ್ತಿದೆ. ಈ ಸಾಧನೆ ನಿರಂತರವಾಗಿ ಪುನರಾವರ್ತನೆ ಆಗುತ್ತಿದೆ. ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್(ಎನ್‌ಟಿಎಸ್‌ಇ)ನಲ್ಲಿ ನಿರಂತರಾಗಿ ಪ್ರಥಮ ಇಲ್ಲವೇ ದ್ವಿತೀಯ ಒಂದಿಲ್ಲೊಂದು ರ್‍ಯಾಂಕ್ ಕಾಯಂ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವಿಕ್ಟರ್ ಥಾಮಸ್, ಪಿ. ಆಕಾಶ್ ಎಂಬ ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ರ್‍ಯಾಂಕ್ ಪಡೆದಿರುವ ಇತಿಹಾಸವೇ ಚೇತನಾ ವಿದ್ಯಾಸಂಸ್ಥೆಗಿದೆ.
ಜೆಇಇ ಮೇನ್ಸ್‌ನಲ್ಲೂ ಉತ್ತಮ ಸಾಧನೆ :
2024ನೇ ಸಾಲಿನ ಜೆಇಇ ಮೇನ್ಸ್‌ನಲ್ಲೂ ವಿಶ್ವಚೇತನ ವಿದ್ಯಾನಿಕೇತನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಹಮ್ಮದ್ ರಫಿಕ್ ಮಾಳಗಿ ಶೇ.99.09, ಎಸ್. ಸೂರ್ಯ ಶೇ.98.28, ಎಂ.ಎಸ್. ಧನುಷ್ ಶೇ. 98.23, ಎಚ್.ಎಸ್. ನವೀನ್ ಶೇ.97.85, ಪಿ. ಆಕಾಶ್ ಶೇ.97.09, ಎಸ್. ಸೃಜನ್ ಶೇ.96.79, ಕೆ.ಎಸ್. ರೋಹನ್ ಶೇ.96.75, ಎಸ್.ಎನ್. ರಾಹುಲ್ ಶೇ.96.32, ಎಂ.ಪಿ. ತೇಜಸ್ ಶೇ.96, ಸಮೃದ್ ಸಿ. ಪಾಟೀಲ್ ಶೇ. 95.42, ವಿ. ಪ್ರೇರಣಾ ಶೇ.95.39, ಎನ್.ಎಲ್. ಅಭಿಷೇಕ್ ಶೇ.94.76, ತನ್ಮಯಿ ವಿ. ಕೊಟ್ಟೂರು ಶೇ. 94.09, ಎಸ್.ಬಿ. ಹರ್ಷ ಶೇ.94.01, ಎಚ್.ಎಂ. ಪುನೀತ್ ಕುಮಾರ್ ಶೇ.93.75, ಸುರೇಂದ್ರ ವಿಶ್ವಕರ್ಮ ಶೇ.93. 37, ಮೋನಿಕಾ ಪಿ. ದೇವಿಗೆರೆ ಶೇ.93.35, ಪಿ. ಮಾನ್ಯ ಶೇ.93.22, ವಿ. ಯಶ್ವಂತ್ ಶೇ.93, ಸಿ.ಎಸ್. ಸೃಜನ್ ಶೇ. 91.47, ಆರ್. ಶಶಾಂಕ್ ಶೇ.91.15, ಎಂ. ವಿವೇಕ್ ಶೇ.90.77, ಎ.ಎಸ್. ಅಂಜಲಿ ಶೇ.90.23, ಎಂ. ಸಂಭ್ರಮ್ ಶೇ. 90.17 ಅಂಕ ಗಳಿಸಿದ್ದಾರೆ.