ಚಿತ್ರರಂಗದಲ್ಲಿ ಅಭಿನಯದ ಜೊತೆಗೆ ಸಾಮಾಜಿಕ ಹೋರಾಟಗಳಲ್ಲೂ ಗುರುತಿಸಿಕೊಂಡಿರುವ ನಟ “ಆ ದಿನಗಳು’ ಖ್ಯಾತಿಯ ಚೇತನ್. ಈ ವಾರ ಚೇತನ್ ತೆರೆಮೇಲೂ ಹೋರಾಟಗಾರನ ಪಾತ್ರದಲ್ಲಿ ಕಾಣಸಿಕೊಂಡಿರುವ “ರಣಂ’ ಚಿತ್ರ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ತಮ್ಮ ನಿಜ ಜೀವನಕ್ಕೆ ಹತ್ತಿರವಾದ ಕಥೆ ಮತ್ತು ಪಾತ್ರಕ್ಕೆ ಬಣ್ಣ ಹಚ್ಚಿರುವ ಚೇತನ್, ಚಿತ್ರ ಮತ್ತು ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ.
“”ರಣಂ’ ಸಿನಿಮಾ ಒಪ್ಪಿಕೊಳ್ಳಲು ಮೊದಲ ಕಾರಣ ಅದರ ಕಥೆ ಮತ್ತು ನನ್ನ ಪಾತ್ರ. ನನ್ನ ಬದುಕಿಗೆ ಅತ್ಯಂತ ಹತ್ತಿರವಾಗಿರುವ ಅನೇಕ ಸಂಗತಿಗಳು, ಪಾತ್ರಗಳು ಈ ಸಿನಿಮಾದಲ್ಲಿವೆ. ಇವತ್ತು ನಮ್ಮ ದೇಶದಲ್ಲಿ ರೈತ ಹೋರಾಟ, ಕಾರ್ಮಿಕ ಹೋರಾಟ, ಖಾಸಗೀಕರಣದ ವಿರುದ್ಧ ಹೋರಾಟ… ಹೀಗೆ ಹತ್ತಾರು ಹೋರಾಟಗಳು ನಡೆಯುತ್ತಿವೆ. ಅದೆಲ್ಲದರ ಪ್ರತಿಬಿಂಬ ಈ ಸಿನಿಮಾದಲ್ಲಿ ಕಾಣಬಹುದು’ ಎನ್ನುವುದು ಚೇತನ್ ಮಾತು.
“ನಿಜ ಜೀವನದಲ್ಲಿ ನಾನೊಬ್ಬ ಹೋರಾಟಗಾರ. ಹತ್ತಾರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದೇನೆ. ಬಡವರು, ಮಹಿಳೆಯರು, ಕೂಲಿಕಾರ್ಮಿಕರು, ಜನ ಸಾಮಾನ್ಯರ ಪರ ನಿರಂತರ ಹೋರಾಟ ಮಾಡುತ್ತ ಬಂದಿದ್ದೇನೆ. ಈ ಸಿನಿಮಾದಲ್ಲಿ ಕೂಡ ನನ್ನದು “ಸತ್ಯಗ್ರಹಿ’ ಎಂಬ ಹೆಸರಿನ ಹೋರಾಟಗಾರನ ಪಾತ್ರ. ಈ ಸಿನಿಮಾದಲ್ಲೂ ಅಂಥದ್ದೇ ಒಂದು ಪಾತ್ರ ಸಿಕ್ಕಿದೆ. ನನ್ನ ನಿಜ ಜೀವನದಲ್ಲಿ ಮಾಡಿದಂತೆ ಇಲ್ಲೂ ಕೂಡ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ಆ ಹೋರಾಟ ಹೇಗಿರುತ್ತದೆ ಅನ್ನೋದನ್ನ “ರಣಂ’ ಸಿನಿಮಾದಲ್ಲಿ ತೆರೆಮೇಲೆ ನೋಡಬೇಕು’ ಎನ್ನುತ್ತಾರೆ ಚೇತನ್.
“ಬಹಳ ದಿನಗಳ ನಂತರ ಕನ್ನಡದಲ್ಲಿ ಇಂಥದ್ದೊಂದು ಸಬ್ಜೆಕ್ಟ್ ಮೇಲೆ ಸಿನಿಮಾ ಬರುತ್ತಿದೆ. ಒಂದಷ್ಟು ಅಂಶಗಳು ಸಿನಿಮೀಯವಾಗಿದ್ದರೂ, ಸಮಾಜಕ್ಕೆ-ಜನರಿಗೆ ಹತ್ತಿರವಾಗುವಂಥ ಅನೇಕ ವಿಷಯಗಳು ಇದರಲ್ಲಿದೆ. ರಾಜಕಾರಣ, ಸರ್ಕಾರ, ವ್ಯವಸ್ಥೆ, ಚಳುವಳಿಗಳ ಜೊತೆಗೆ ಸ್ನೇಹ-ಪ್ರೀತಿ, ಮಾನವೀಯತೆ, ಸಂಬಂಧ, ಸಾಮಾಜಿಕ ಜವಾಬ್ದಾರಿ, ಯುವಕರ ತುಡಿತ ಎಲ್ಲವನ್ನೂ ಇಲ್ಲಿ ಕಾಣಬಹುದು. “ರಣಂ’ನಲ್ಲಿ ಮನರಂಜನೆ ಇದೆ. ಅದರ ಜೊತೆಗೊಂದು ಮೆಸೇಜ್ ಕೂಡ ಇದೆ’ ಎನ್ನುವ ಅಭಿಪ್ರಾಯ ಚೇತನ್ ಅವರದ್ದು.
“ರಣಂ’ ಚಿತ್ರದಲ್ಲಿ ಚೇತನ್ ಅವರೊಂದಿಗೆ ಚಿರಂಜೀವಿ ಸರ್ಜಾ ಕೂಡ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಚಿರು ಅವರ ನೆನಪುಗಳನ್ನು ಹಂಚಿಕೊಳ್ಳುವ ಚೇತನ್, “ಚಿರು ಮತ್ತು ನಾನು ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ನನ್ನ “ಮೈನಾ’ ಸಿನಿಮಾ ರಿಲೀಸ್ ಆದಾಗ ನನಗೆ ಫೋನ್ ಮಾಡಿ ಸಿನಿಮಾ ತುಂಬ ಚೆನ್ನಾಗಿದೆ, ಗೆದ್ದೇ ಗೆಲ್ಲುತ್ತದೆ ಎಂದು ಕಾನ್ಫಿಡೆನ್ಸ್ ತುಂಬಿದ್ದ ಸ್ನೇಹಿತ. ನಾವಿಬ್ಬರೂ ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದೇವೆ ಅನ್ನೋದು ನನಗೆ ತುಂಬ ಖುಷಿಕೊಟ್ಟ ವಿಷಯ. ಆದ್ರೆ ಅದೇ ಅವರ ಕೊನೆಯ ಸಿನಿಮಾ ಅನ್ನೋದು ತುಂಬ ಬೇಸರದ ವಿಷಯ. ಚಿರುನಂಥ ಒಳ್ಳೆಯ ಸ್ನೇಹಿತನನ್ನ ನಾನು ಮಿಸ್ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ.
ಚಿತ್ರದಲ್ಲಿ ವರಲಕ್ಷ್ಮೀ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು “ಆರ್.ಎಸ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ “ರಣಂ’ ಚಿತ್ರಕ್ಕೆ ವಿ. ಸಮುದ್ರ ನಿರ್ದೇಶನವಿದೆ.