Advertisement
ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವದಂಗವಾಗಿ ಹಮ್ಮಿಕೊಂಡ ನೃತ್ಯಾಂಜಲಿ 8ನೇ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ದಂಪತಿ ವಿ| ಚೇತನ್ ಗಂಗಟ್ಕರ್ ಮತ್ತು ವಿ| ಚಂದ್ರಪ್ರಭಾ ಚೇತನ್ ಅವರ ಕೂಚಿಪುಡಿ ನೃತ್ಯ ಪ್ರದರ್ಶನ ಒಂದು ಸುಂದರ ರಸಾನುಭವ ನೀಡಿತು.
Related Articles
Advertisement
ಕೂಚಿಪುಡಿ ನೃತ್ಯದ ಪ್ರಸಿದ್ಧ ನೃತ್ಯ ನಾಟಕಗಳಲ್ಲಿ ಒಂದಾದ “ಭಾಮಕಲಾಪಂ’ವನ್ನು ಮುಂದಿನ ನೃತ್ಯ ಪ್ರಸ್ತುತಿಯಾಗಿ ಪ್ರದರ್ಶಿಸ ಲಾಯಿತು. ಯಕ್ಷಗಾನಕ್ಕೆ ಸಾಮ್ಯವಿರುವ ಈ ನೃತ್ಯಬಂಧ ಹಿಂದಿನ ಕಾಲದಲ್ಲಿ ಮೂರು ರಾತ್ರಿಗಳ ಕಾಲ ನಡೆಯುತ್ತಿತ್ತು. ಆತ್ಮ-ಪರಮಾತ್ಮನ ಸಮ್ಮಿಲನದ ದ್ಯೋತಕವಾಗಿರುವ ಇದರಲ್ಲಿ ನಾಯಕಿ ಸತ್ಯಭಾಮೆ ಮತ್ತು ಸಖೀ ಮಾಧವಿಯ ಪಾತ್ರಗಳನ್ನು ಮುಖ್ಯವಾಗಿ ಕಾಣಬಹುದು. ಕಲಾವಿದೆ ರಂಗ ಪ್ರವೇಶಿಸಿ ತಾನು ಸತ್ರಾರ್ಜಿತನ ಮಗಳು ಸತ್ಯಭಾಮೆಯೆಂದು , ಶ್ರೀಕೃಷ್ಣ ನನ್ನ ನಾಯಕನೆಂದು ಪರಿಚಯಿಸುವ ದೃಶ್ಯ ಶೃಂಗಾರರಸಭರಿತವಾಗಿ ಮೂಡಿಬಂತು.
ಮುಂದಿನ ಪ್ರಸ್ತುತಿಯಾಗಿ ನಾರಾಯಣ ತೀರ್ಥರ ಪ್ರಸಿದ್ಧ ರಚನೆಯಾದ “ನೀಲಮೇಘ ಶರೀರ’ ಎಂಬ ತರಂಗವನ್ನು ಕಲಾವಿದ ದಂಪತಿ ಹಿತ್ತಾಳೆಯ ತಟ್ಟೆಯ ಮೇಲೆ ನಿಂತು ಲಯಬದ್ಧವಾಗಿ ನರ್ತಿಸಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಹುರುಪು ತಂದು ಕೊಟ್ಟಿತು.
ಕೊನೆಗೆ ಪ್ರದರ್ಶನವಾದ ಸಿಂಹನಂದಿನಿ – ಮಯೂರಕೌತ್ವ ಆಕರ್ಷಕವೂ, ಮನಮೋಹಕವೂ ಆದ ಎರಡು ನೃತ್ಯಬಂಧಗಳು ಪ್ರೇಕ್ಷಕರಿಗೆ ನೃತ್ಯದ ಅದ್ಭುತ ಪ್ರಪಂಚವನ್ನು ಅನಾವರಣಗೊಳಿಸಿತು. ಸಿಂಹನಂದನ ಎನ್ನುವ ಪುರಾತನ ಸಂಗೀತ ಪ್ರಕಾರದ ಕ್ಲಿಷ್ಟ ಹಾಗೂ ದೀರ್ಘಾವಧಿಯ ತಾಳಕ್ಕೆ ಸಿಂಹವಾಹಿನಿಯಾದ ಶ್ರೀದೇವಿಯನ್ನು ಸ್ತುತಿಸುತ್ತಾ ಪಾದ ವಿನ್ಯಾಸದಿಂದ ರಂಗದ ಕೆಳಗೆ ಹರಡಿರುವ ಅಕ್ಕಿಹುಡಿಯಲ್ಲಿ ಸಿಂಹದ ಚಿತ್ತಾರ ಬಿಡಿಸುತ್ತಾ ಚಂದ್ರಪ್ರಭಾ ನರ್ತಿಸಿದರೆ ಚೇತನ್ ಮಯೂರ ಕೌತ್ವ ಪ್ರಸ್ತುತಪಡಿಸಿದರು.
ಎರಡೂ ನೃತ್ಯ ಪ್ರಕಾರಗಳು ಕಲಾವಿದರ ತಾಳ ಜ್ಞಾನ, ಶಾರೀರಿಕ ಕ್ಷಮತೆ, ಏಕಾಗ್ರತೆ ಹಾಗೂ ಚಿತ್ರಕಲೆಯ ಪರಿಣತಿಗೆ ಕನ್ನಡಿ ಹಿಡಿಯುವಂತಿತ್ತು. ಗಂಗಟ್ಕರ್‌ವರ ನಿರೂಪಣೆ ನೃತ್ಯಕ್ಕೆ ಪೂರಕ ಅಂಶವಾಗಿತ್ತು. ಪ್ರತಿಯೊಂದು ನೃತ್ಯಬಂಧದ ಐತಿಹಾಸಿಕ ಮಾಹಿತಿ ಯೊಂದಿಗೆ ಆ ನೃತ್ಯ ಯಾವ ಪರಂಪರೆಯಿಂದ ಬೆಳೆದುಬಂದಿದೆ, ವೈಶಿಷ್ಟ್ಯವೇನು ಎನ್ನುವುದನ್ನು ಚುಟುಕಾಗಿ ವಿವರಿಸಿದರು.
ವಿ| ಕೆ.ಭವಾನಿಶಂಕರ್ ಅಮ್ಮುಂಜೆ