ಗಂಗಾವತಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ (ಚೆಸ್) ಅವ್ಯವಸ್ಥೆಯ ಆಗರವಾಗಿದ್ದರಿಂದ ಕ್ರೀಡಾಪಟುಗಳು ಪರದಾಡಿದ ಪ್ರಸಂಗ ಜರುಗಿತು.
ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1-14 ಮತ್ತು 1-16 ವಯೋಮಾನದ ಮಕ್ಕಳಿಗಾಗಿ ಚದುರಂಗ ಸ್ಪರ್ಧೆಯನ್ನು ಗುರುವಾರ ನಗರದ ವಿವೇಕ ಶ್ರೀ ಕರಿಯರ್ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ತಾಲೂಕು ಮಟ್ಟದಲ್ಲಿ ವಿಜೇತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕ್ರೀಡಾಪಟುಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.
ಆಯೋಜನೆಗೊಂಡಿದ್ದ ವಿವೇಕ ಸಂಸ್ಥೆಯ ಕಟ್ಟಡ ಚಿಕ್ಕದ್ದಾಗಿದ್ದರಿಂದ ಸ್ಪರ್ಧಾಳುಗಳು ನಿಲ್ಲಲು ಜಾಗವಿಲ್ಲದಂತಾಗಿದ್ದು, ಶೌಚಕ್ಕೆ ಹೋಗಲು ಸಹ ವಿದ್ಯಾರ್ಥಿನಿಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದಿದ್ದ ಶಿಕ್ಷಕಿಯರು ಪರದಾಡಿದರು. ಪ್ರತಿ ವರ್ಷ ನಗರದ ಉರ್ದು ಶಾಲೆಯಲ್ಲಿ ಚೆಸ್ ಸ್ಪರ್ಧೆ ನಡೆಸಲಾಗುತ್ತಿತ್ತು. ಇಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿತ್ತು. ಕೆಲ ಅಧಿಕಾರಿಗಳ ಒತ್ತಡದಿಂದ ಈ ಭಾರಿ ವಿವೇಕ ಶ್ರೀ ಸಂಸ್ಥೆಯವರಿಗೆ ಆಯೋಜನೆ ಮಾಡಲು ಅವಕಾಶ ನೀಡಲಾಗಿದ್ದು, ಕುಳಿತುಕೊಳ್ಳಲು ಸ್ಥಳವಿಲ್ಲದೆ ವಿದ್ಯಾರ್ಥಿಗಳು ದೈಹಿಕ ಶಿಕ್ಷಕರು ಕಷ್ಟ ಅನುಭವಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಸಂದರ್ಭದಲ್ಲಿ ಮೂಲ ಸೌಕರ್ಯ ಕುರಿತು ಮನವರಿಕೆ ಮಾಡದೇ ದೈಹಿಕ ಶಿಕ್ಷಕ ಜತೆ ಚರ್ಚೆ ನಡೆಸದೇ ಚದುರಂಗ ಸ್ಪರ್ಧೆ ಆಯೋಜನೆ ಮಾಡಿದ್ದರಿಂದ ಮಕ್ಕಳು ಸಂಕಷ್ಟಪಡುವಂತಾಗಿದೆ.
ಚದುರಂಗ ಸ್ಪರ್ಧೆ ನಡೆಸಲು ಶ್ರೀಕೃಷ್ಣದೇವರಾಯ ಕಲಾಭವನ, ಕನ್ನಡ ಸಾಹಿತ್ಯ ಪರಿಷತ್ ಭವನ ಹಾಗೂ ಐಎಂಎ ಭವನ ಸೇರಿ ಹತ್ತು ಹಲವು ಸುಸಜ್ಜಿತ ಕಟ್ಟಡಗಳಿದ್ದರೂ ಯಾರಧ್ದೋ ಒತ್ತಡಕ್ಕೆ ಮಣಿದು ಖಾಸಗಿ ಸಂಸ್ಥೆಗಳಿಗೆ ಆಯೋಜನೆ ಮಾಡಲು ಕೊಡುವುದರಿಂದ ಸಂಸ್ಥೆಯ ಪ್ರಚಾರವೇ ಹೆಚ್ಚಾಗುತ್ತದೆ ಹೊರತು ಕ್ರೀಡೆಗೆ ಆದ್ಯತೆ ದೊರಕುವುದಿಲ್ಲ. ಅಧಿಕಾರಿಗಳು ಚದುರಂಗ ಸ್ಪರ್ಧೆ ಆಯೋಜನೆಯಲ್ಲಿ ಯಡವಿದ್ದಾರೆ.